UK Suddi
The news is by your side.

ಗುಟ್ಟೊಂದು ಹೇಳುವೆ…

ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ

ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ

ತಾಯಿ ಶಾರದೆ ಲೋಕಪೂಜಿತೆ

ಜ್ನಾನದಾತೆ ನಮೋಸ್ತುತೆ

ಇಡೀ ಬದುಕಿನ ಮೌಲ್ಯಗಳನ್ನು ತಿಳಿಸುವ ಇಂತಹ ಅದ್ಭುತವಾದ ಅರ್ಥ ಮತ್ತು ಆಶಯಗಳನ್ನು ಒಳಗೊಂಡಂತಹ ಹಾಡುಗಳನ್ನು ಕೇಳುತ್ತ ಬೆಳೆಯುತ್ತಿದ್ದ ಅಂದಿನ ಮಕ್ಕಳಿಗೂ ಅನೇಕ ಚಿತ್ರ ವಿಚಿತ್ರ ಚಿತ್ರಗೀತೆಗಳನ್ನು ಕೇಳಿಕೊಂಡು ಬೆಳೆಯುತ್ತಿರುವ ಇಂದಿನ ಮಕ್ಕಳಿಗೂ ಬಹಳಷ್ಟು ವ್ಯತ್ಯಾಸವಿದೆ.

ಇಂದಿನ ಮಕ್ಕಳೇ ನಾಡಿನ ನಾಳಿನ ಪ್ರಜೆಗಳು ಎನ್ನುವ ವಾಕ್ಯದಂತೆ ದೇಶದ ಮುಂದಿನ ಯುವಶಕ್ತಿ ಆಗಬೇಕಾದ ಇಂದಿನ ಮಕ್ಕಳು ವಾಟ್ಸ್ಯಾಪ್,ಫೇಸಬುಕ್,ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳೆನಿಸಿದ ರಾಕ್ಷಸರ ಕೈಯಲ್ಲಿ ಸಿಕ್ಕು ನಲುಗಿತ್ತಿರುವುದನ್ನು ನೋಡಿದರೆ ಮನಸ್ಸಿಗೆ ತುಂಬಾ ಹಿಂಸೆಯಾಗುತ್ತದೆ.ಅನೇಕಾನೇಕ ಮೋಸಗಳಿಗೆ ಬಲಿಯಾಗುತ್ತಿರುವ ಇಂದಿನ ಮಕ್ಕಳು ಎಷ್ಟು ಜಾಗೃತರಾಗಿದ್ದರೂ ಸಾಲದೆಂಬಂತಾಗಿದೆ.

ಪಾಲಕರ ಮನಸ್ಥಿತಿಯನ್ನು ಅರ್ಥೈಸಿಕೊಳ್ಳಿ:

ಮಕ್ಕಳೇ, ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ನಿಮಗೆ ಈಗೀಗ ಮೂಗಿನ ತುದಿಯಲ್ಲೆ ಕೋಪ. ತಂದೆ,ತಾಯಿ ಏನೆ ಪ್ರಶ್ನೆ ಮಾಡಿದರೂ ಅಥವಾ ಸ್ವಲ್ಪ ಅನುಮಾನಿಸಿದರೂ ತಟ್ಟನೆ ಕೋಪ ಬಂದುಬಿಡುತ್ತದೆ. ಆದರೆ ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ನಿಮ್ಮ ಬಗೆಗಿನ ಕಾಳಜಿ ತಪ್ಪೆ? ಇಂದಿನ ಜಗತ್ತಲ್ಲಂತೂ ನಿಮ್ಮ ವಯಸ್ಸಿಗೆ ಮೀರಿದ ವಿಷಯಗಳು ನಿಮ್ಮ ಕಣ್ಣಿಗೆ,ಕಿವಿಗೆ ಬೀಳುತ್ತಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ.ಇದೀಗ ತಾನೆ ಕುತೂಹಲದಿಂದ ಕಣ್ಣರಳಿಸುತ್ತಿರುವ ನಿಮಗೆ ಎಲ್ಲಿ ತಪ್ಪು ದಾರಿ ಗೋಚರಿಸುತ್ತದೋ ಎನ್ನುವ ಭಯ ಆತಂಕ ಪಾಲಕರಿಗಿರುತ್ತದೆ. ಮಕ್ಕಳು ತಪ್ಪು ಹೆಜ್ಜೆ ಇಡಬಾರದು ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕೆಂಬುದು ಪ್ರತಿಯೊಬ್ಬ ತಂದೆ ತಾಯಿಯ ಆಶಯ ಮತ್ತು ಕನಸಾಗಿರುತ್ತದೆ. ಅವರಿಗೇನು ನಿಮ್ಮ ಬಗ್ಗೆ ದ್ವೇಷವಿರುವುದಿಲ್ಲ.ನಿಮ್ಮ ಮೇಲಿನ ಪ್ರೀತಿಯಿಂದಾಗಿಯೇ ನಿಮ್ಮ ಆಸೆಗಳಿಗೆ ಕೆಲವೊಮ್ಮೆ ಬ್ರೇಕ್ ಹಾಕುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ನಡೆದುಕೊಳ್ಳಬೇಕಾದದ್ದು ನಿಮ್ಮ ಜವಾಬ್ದಾರಿ.

ಮಕ್ಕಳೇ ಹುಷಾರಾಗಿರಿ:

ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪಾಲಕರು ಗಮನಿಸಿರುತ್ತಾರೆ. ಆದ್ದರಿಂದ ತಂದೆ ತಾಯಿಯ ಹತ್ತಿರ ಯಾವ ವಿಷಯಗಳನ್ನೂ ಮುಚ್ಚಿಡುವ ಪ್ರಯತ್ನ ಮಾಡಬೇಡಿ,ಸುಳ್ಳು ಹೇಳಬೇಡಿ.

ನಿಮಗೆ ಒಂದು ವಿಷಯ ಹೇಳಲೇಬೇಕು, ನೀವು ಏನೆ ತಪ್ಪು ಮಾಡಿದ್ದರೂ ಕೂಡ ತಂದೆ ಅಥವಾ ತಾಯಿಯ ಹತ್ತಿರ ಹೇಳಿಬಿಡಿ, ನಿಮ್ಮ ಸಮಸ್ಯೆಯನ್ನು ಅವರ ಜೊತೆ ಹಂಚಿಕೊಳ್ಳಿ.

ಖಂಡಿತ ಅದರಿಂದ ಹೊರಬರುವ ದಾರಿಯನ್ನು ಅವರು ತೋರಿಸುತ್ತಾರೆ ಮತ್ತು ನಿಮ್ಮನ್ನು ಕಾಪಾಡಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಾರೆ.ನಿಮ್ಮ ರಕ್ಷಣೆ ಅವರ ಹೊಣೆ ಮತ್ತು ಕರ್ತವ್ಯ, ಆದ್ದರಿಂದ ಯಾರೇ ನಿಮ್ಮನ್ನು ಹೆದರಿಸಿ ಬೆದರಿಸುತ್ತಿದ್ದರೂ(ಬ್ಯೢಾಕ್ ಮೇಲ್ ) ಕೂಡ ಮುಚ್ಚಿಡದೆ ಪಾಲಕರ ಹತ್ತಿರ ಹೇಳಿ ರಕ್ಷಣೆ ಪಡೆಯಿರಿ.

ತಂದೆ ತಾಯಿ ಬೈದಾಗ ಹತಾಶರಾಗಬೇಡಿ:

ಮಕ್ಕಳೆ ನಿಮ್ಮನ್ನು ನಿಮ್ಮ ತಂದೆ ತಾಯಿ ಪ್ರೀತಿಸಿದಷ್ಟು ಬೇರೆ ಯಾರೂ ಪ್ರೀತಿಸಲು ಸಾಧ್ಯವಿಲ್ಲ. ಅವರು ನಿಮಗಾಗಿಯೇ ಹಣ ಸಂಪಾದಿಸುತ್ತಿದ್ದಾರೆ ಮತ್ತು ನಿಮಗೋಸ್ಕರವೇ ಬದುಕುತ್ತಿದ್ದಾರೆ. ಅವರಿಬ್ಬರೂ ನಿಮಗೆ ದೇವರೇ ಕಳಿಸಿರುವ ಬಾಡಿಗಾರ್ಡ್ಸ ಎಂದು ತಿಳಿಯಿರಿ,ನಿಮ್ಮ ಮಧ್ಯೆಯೇ ಎಷ್ಟೊಂದು ಜನ ಅನಾಥರಿದ್ದಾರೆ,ನೀವು ಅದೃಷ್ಟವಂತರೆಂಬುದನ್ನು ಅರ್ಥ ಮಾಡಿಕೊಳ್ಳಿ.

ನಿಮ್ಮ ಮೇಲಿನ ಪ್ರೀತಿ, ಕಾಳಜಿಯಿಂದ ನಿಮಗೆ ಬೈದಾಗ ಹತಾಶರಾಗಬೇಡಿ,ಬದಲಾಗಿ ೫ ನಿಮಿಷ ಕುಳಿತು ಅವರು ಆಡಿರುವ ಮಾತುಗಳ ಬಗ್ಗೆ ಹೇಳಿರುವ ವಿಷಯಗಳ ಕುರಿತಾಗಿ ಯೋಚಿಸಿ,ಅವರನ್ನು ಗೌರವಿಸಿ.

ತಂದೆ ತಾಯಿಯನ್ನು ತಿರಸ್ಕರಿಸಿ ಬೇರೆ ಯಾರನ್ನೋ ನಂಬಬೇಡಿ,ಅವರು ನಿಮಗೆ ನಿಮ್ಮ ಮನಸ್ಸಿಗೆ ತತ್ ಕ್ಷಣಕ್ಕೆ ಖುಷಿ ಕೊಡಬಹುದು, ಆದರೆ ಅದು ಸತ್ಯವಲ್ಲ,ಶಾಶ್ವತವಲ್ಲ,ಒಳ್ಳೆಯದಲ್ಲ ಎಂಬ ಅರಿವಿರಲಿ.ಪಾಲಕರ ಕೋಪ ಅಲ್ಪ ಸಮಯದ್ದು, ಅವರ ಮಾತುಗಳಿಗೆ ಕಿವಿ ಕೊಟ್ಟರೆ ಸಾಕು ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತಾರೆ ಮತ್ತು ನಿಮ್ಮ ಸೂಕ್ತ ಆಸೆಗಳಿಗೆ ಯಾವತ್ತೂ ಅಡ್ಡಿಯಾಗುವುದಿಲ್ಲ.

ಪ್ರೌಢಶಾಲೆಯಲ್ಲಿರುವಾಗಲೇ ಪ್ರೀತಿ ಪ್ರೇಮದ ಬಲೆಗೆ ಬೀಳಬೇಡಿ:

ಇದು ತುಂಬಾ ಮುಖ್ಯವಾದ ವಿಷಯ. ಈ ಹಂತದಲ್ಲಿ ನಿಮಗಿನ್ನೂ ಭಾವನೆಗಳು ಅರಳುವ ಸಮಯ, ಆಸೆಗಳು ಚಿಗುರೊಡೆಯುವ ಸುಂದರ ವಸಂತ ಕಾಲದಂತೆ,ಅಂದರೆ ಪ್ರೌಢಾವಸ್ಥೆಯ ಪ್ರಾರಂಭ. ಇದೆಲ್ಲವೂ ಸೂಕ್ತವಾಗಿ ನಿಮ್ಮಲ್ಲಿ ಅರಳಲು,ಬೆಳೆಯಲು,ನಿಮಗೇ ಅರ್ಥವಾಗಲು ಸಾಕಷ್ಟು ಸಮಯ, ಅವಕಾಶಗಳು ಇರುತ್ತವೆ. ಈಗಲೇ ಅವಸರಿಸಿ ತಪ್ಪು ಹೆಜ್ಜೆ ಇಡದಿರಿ.ಸಾಧ್ಯವಾದಷ್ಟೂ ಇಂತಹ ವಿಚಾರಗಳಿಂದ ದೂರವಿದ್ದು ನಿಮ್ಮ ವಿಧ್ಯಾಭ್ಯಾಸದ ಕಡೆ ಗಮನ ಕೊಡಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಗುರಿ ಸ್ಪಷ್ಟವಾಗಿರಲಿ, ಅದರೆಡೆಗೆ ಮಾತ್ರ ನಿಮ್ಮ ಗಮನವಿರಲಿ.

 

ಬರೀ ಅಂಕಗಳಿಗಾಗಿ ಓದಬೇಡಿ:

ಇಂದಿನ ಮಕ್ಕಳು ಮತ್ತು ಪಾಲಕರು ಇಬ್ಬರಿಗೂ ಇದೊಂದು ಸಾಂಕ್ರಾಮಿಕ ರೋಗವೆಂಬಾತಾಗಿದೆ,ಒಂದು ಪಠ್ಯವನ್ನು ಜ್ನಾನಕ್ಕಾಗಿ,ಅದರ ವಿಸ್ತಾರಕ್ಕಾಗಿ ಓದಬೇಕೆ ಹೊರತು ಅಂಕಗಳಿಗಾಗಿ ಅಲ್ಲ ಎಂಬುದನ್ನು ಮನಗಾಣಬೇಕು.

          

ಮಕ್ಕಳೇ ಹೀಗೆ ಮಾಡಿ:

ನಿಮಗೆ ಬಂದಿರುವ ಪಠ್ಯದ ಜೊತೆ ಅದಕ್ಕೆ ಸಂಬಂಧಿಸಿದ ಬೇರೆ ಬೇರೆ ಪುಸ್ತಕಗಳನ್ನು ಓದಿ,ಅವರ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿದಿಕೊಳ್ಳಿ,ಅವು ನಿಮಗೆ ಜೀವನ ಮೌಲ್ಯಗಳನ್ನು ತಿಳಿಸಿಕೊಡುತ್ತವೆ. ಉದಾಹರಣೆಗೆ ವಿವೇಕಾನಂದರ ಕುರಿತಾದ ಪಾಠವಿದ್ದರೆ ಅವರ ಬಗ್ಗಯೇ ಬರೆದಿರುವ ಬೇರೆ ಬೇರೆ ಪುಸ್ತಕಗಳನ್ನು ಓದಿ,ಆಗ ಒಬ್ಬ ಉತ್ತಮ ವಿದ್ಯಾರ್ಥಿಯಾಗುವತ್ತ ಹೆಜ್ಜೆಯಿಡುತ್ತೀರಿ,ಇಡೀ ಜೀವನದಲ್ಲಿ ಪ್ರತಿಯೊಬ್ಬರೂ ವಿದ್ಯಾರ್ಥಿಗಳೆ ಎನ್ನುವುದು ನೆನಪಿರಲಿ.
ಮಕ್ಕಳೇ ನೀವು ತುಂಬಾ ಜಾಣ ಮಕ್ಕಳು,ತುಂಬಾ ಸ್ಮಾರ್ಟ ಎನ್ನುವುದು ನಮಗೆ(ಪಾಲಕರಿಗೆ) ಗೊತ್ತಿದೆ.ಆದರೂ ಅದರ ಜೊತೆಯಲ್ಲೇ ನಮಗೆ ಆತಂಕವೂ ಇರುತ್ತದೆ. ನಮ್ಮನ್ನೂ ಅರ್ಥ ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನ ಮಾಡಿ, ನಿಮ್ಮ ದಾರಿ ಇನ್ನೂ ಸರಳವಾಗಿರುತ್ತದೆ ಮತ್ತು ನಿಮ್ಮ ಸಾಧನೆಗೆ ನಮ್ಮ ಸಹಕಾರವೂ ಅಷ್ಟೇ ಅದ್ಭುತವಾಗಿರುತ್ತದೆ.ಮಕ್ಕಳು ಬೀಳದಂತೆ ಎತ್ತುವುದು ಪಾಲಕರ ಕರ್ತವ್ಯ.
ಕೊನೆ ಮಾತು: ತಂದೆ ತಾಯಿಯನ್ನು ಪ್ರೀತಿಸಿ ಗೌರವಿಸಿ.ಅವರಲ್ಲದೇ ಮತ್ಯಾರೂ ನಿಮ್ಮ ಜೀವನಕ್ಕೆ ಬೇಲಿಯಾಗಲಾರರು👍


                                    

✍ಲತಾ ರಮೇಶ ವಾಲಿ 
   ಸವಣೂರ
   ಹಾವೇರಿ 

                                 

Comments