UK Suddi
The news is by your side.

ಸಕ್ಕರೆ ಆರತಿಯ ವಿಶೇಷತೆಯ ಗೌರಿ ಹುಣ್ಣಿಮೆ.

ನಾಳೆ (ನವೆಂಬರ್ 23) ಉತ್ತರ ಕರ್ನಾಟಕದಲ್ಲಿ ಗೌರಿ ಹುಣ್ಣಿಮೆಯ ಸಡಗರ ಹೇಳತೀರದ್ದು.ಇದು ವೈಶಿಷ್ಟ್ಯಪೂರ್ಣವಾಗಿ ಆಚರಿಸಲ್ಪಡುವ ಹುಣ್ಣಿಮೆ. ಶ್ರಾವಣ ಮಾಸದ ನಂತರ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳ ಜೋರು ಡಿಸೆಂಬರ್ ಅವಧಿಯವರೆಗೂ ತನ್ನದೇ ಭರಾಟೆಯಲ್ಲಿ ಜರುಗುತ್ತ ಬರುತ್ತವೆ.ಅದರಲ್ಲೂ ಅಕ್ಟೋಬರ್ ನವೆಂಬರ್ ಹಬ್ಬಗಳ ಸಡಗರ ಹೇಳತೀರದ್ದು.ಉತ್ತರ ಕರ್ನಾಟಕದಲ್ಲಿ ಮಹಾನವಮಿ,ಸೀಗೆಹುಣ್ಣಿಮೆ,ಹಟ್ಟಿ ಹಬ್ಬ(ದೀಪಾವಳಿ),ಗೌರಿ ಹುಣ್ಣಿಮೆಗಳ ಆಚರಣೆಯ ರೀತಿ ವಿಶೇಷವಾಗಿದೆ.ಹೊಸದಾಗಿ ಮದುವೆ ಆಗುವ ಅಂದರೆ ವರ ನಿಶ್ಚಯವಾದ ಹೆಣ್ಣು ಮಕ್ಕಳಿಗೆ ಅವರ ಗಂಡನ ಕಡೆಯವರು.ಮದುವೆ ಆಗದೇ ಕನ್ಯೆಯರಾಗಿರುವ ಹೆಣ್ಣು ಮಕ್ಕಳಿಗೆ ಅವರ ಮಾವಂದಿರಾಗುವ ಸಂಬಂಧಿಗಳು ಸಕ್ಕರೆ ಆರುತಿ ತರುವ ಮೂಲಕ “ನಡತೆ” ತರುವ ಹಬ್ಬ ಗೌರಿ ಹುಣ್ಣಿಮೆ.

ಉತ್ತರ ಕರ್ನಾಟಕದ ಮಾರುಕಟ್ಟೆಗಳಲ್ಲಿ ಗೌರಿ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ಸಕ್ಕರೆ ಆರುತಿಗಳ ಮಾರಾಟ ವಹಿವಾಟು ಆರಂಭವಾಗುತ್ತದೆ.ಸಕ್ಕರೆ ಪಾಕದಲ್ಲಿ ವಿವಿಧ ಬಣ್ಣಗಳಲ್ಲಿ ತಯಾರಿಸಿದ ಮೂರ್ತಿಗಳನ್ನು ತಮ್ಮ ಯೋಗ್ಯತೆಯನುಸಾರ ಕಿಲೋಗಳಲ್ಲಿ ತಗೆದುಕೊಂಡು.ಮದುವೆ ನಿಶ್ಚಯವಾದ ಹೆಣ್ಣು ಮಕ್ಕಳಿಗೆ ಹಾಗೂ ಹೊಸದಾಗಿ ಕನ್ಯೆಯರಾದ ಹೆಣ್ಣು ಮಕ್ಕಳಿಗೆ ಹೊಸ ಸೀರೆ,ಹೂವು,ಹೂವಿನ ದಂಡೆ,ಬಂಗಾರ(ಅವರವರ ಯೋಗ್ಯತೆಯನುಸಾರ) ತಗೆದುಕೊಂಡು ಗೌರಿ ಹುಣ್ಣಿಮೆಗೆ ಹೋಗುವ ಸಂಪ್ರದಾಯವಿದೆ.

ಈ ಹುಣ್ಣಿಮೆ ಇನ್ನೂ ಐದು ದಿನ ಇರುವಾಗಲೇ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಹೀರೆಕಾಯಿ ಸವತೆಕಾಯಿಗಳನ್ನು ಗಾಲಿ ಆಕಾರ(ಸುರುಳಿ) ಕತ್ತರಿಸಿ ಅದರಲ್ಲಿ ಕಡ್ಲಿ ಬತ್ತಿಯನ್ನು ತುಪ್ಪದಲ್ಲಿ ಅದ್ದಿ ಇಟ್ಟು.ಸಕ್ಕರೆ ಆರುತಿಯೊಂದಿಗೆ ಗೌರಿ ಮೂರ್ತಿಗೆ ಬೆಳಗುತ್ತಾರೆ.ಈ ಹುಣ್ಣಿಮೆಗೆ ಹಳ್ಳಿಗಳಲ್ಲಿರುವ ದೇವಾಲಯದಲ್ಲಿ ಕಟ್ಟಿಗೆಯಿಂದ ಪರಮೇಶ್ವರ ಪಾರ್ವತಿಯರ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ.ಅಥವಾ ಗೌರವ್ವನ ಮಣ್ಣಿನ ಮೂರ್ತಿ ಮಾಡಿ ಪೂಜಿಸಿರುತ್ತಾರೆ ಅಂಥ ಸ್ಥಳಕ್ಕೆ ಓರಗೆಯ ಹೆಣ್ಣು ಮಕ್ಕಳು ಈ ರೀತಿ ಆರುತಿ ತಗೆದುಕೊಂಡು ಹೋಗಿ ಭಕ್ತಿಯಿಂದ ನಮಿಸುವರು.
ಐದನೆಯ ದಿನದ ವೇಳೆಗೆ ಗಂಡಿನ ಕಡೆಯವರು ಅಥವ ಹೆಣ್ಣು ಮಕ್ಕಳ ಮಾವಂದಿರಾದವರು ತಮ್ಮ ತಮ್ಮ ಊರುಗಳಿಂದ ನಡತೆ ತರುತ್ತಾರೆ.ಕೇವಲ ಅವರಷ್ಟೇ ಅಲ್ಲ ಅವರ ಜೊತೆಗೆ ಸಂಬಂಧಿಕರು ಆಗಮಿಸುತ್ತಾರೆ.ಆ ದಿನ ಅಂಥ ಮನೆಗಳಲ್ಲಿ ಹಬ್ಬದ ವಾತಾವರಣ.ಬೀಗರು ನಡತೆ ತಂದಿದ್ದಾರೆ ಎಂದು ಹುಡುಗಿಯರ ತಾಯಂದಿರು ಅಕ್ಕ ಪಕ್ಕದ ಮನೆಗಳಿಗೆ ತೆರಳಿ ಅವರಿಗೆ ಆರತಿ ಮಾಡಲು ಬನ್ನಿ ಎಂದು ಕರೆದು ಬರುತ್ತಾರೆ.ಅಷ್ಟೊತ್ತಿಗೆ ಹುಡುಗಿಯರ ಮನೆಯವರೆಲ್ಲ ಸೇರಿ ದೇವಾಲಯಕ್ಕೆ ಹೋಗಿ ಬಂದು ಸಿಹಿ ಭೋಜನ ಊಟ ಮಾಡಿ ಸಂಜೆ ಬೀಗರು ತಂದಿರುವ ಹೊಸ ಸೀರೆ ಉಡಿಸಿ.ತಲೆಗೆ ಹೂವಿನ ದಂಡೆ ಮುಡಿಸಿ.ಸಕ್ಕರೆ ಆರುತಿ ಇಟ್ಟು ಎಲ್ಲರೂ ಸಾಲಾಗಿ ಕನ್ಯಾಮಣಿಗೆ ಬೆಳಗುವ ಮೂಲಕ ಭಾವೀ ಗಂಡನ ಹೆಸರು ಕೇಳುವುದು.ವಿವಾಹ ನಿಶ್ಚಯವಾಗದ ಕನ್ಯೆಯರಿಗೆ ಅವರ ಮಾವಂದಿರ ಹೆಸರು ಹೇಳು ಎಂದು ಚೇಷ್ಟೆ ಮಾಡುವ ಮೂಲಕ ಪರಸ್ಪರ ಸುಮಧುರ ಬಾಂಧವ್ಯ ಬೆಸೆಯಲು ನಡತೆ ತರುವ ಹಬ್ಬವಾಗಿ ಗೌರಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಇಂಥ ಸಂದರ್ಭ ಬಂಗಾರದ ಓಲೆ,ಉಂಗುರ,ಒಡವೆ ಇತ್ಯಾದಿ ವಸ್ತುಗಳನ್ನು ಹೊಸದಾಗಿ ಗಂಡು ನಿಶ್ಚಯವಾದ ಹೆಣ್ಣು ಮಕ್ಕಳಿಗೆ ಅವಳ ಗಂಡನ ಮನೆಯ ಕಡೆಯವರು ಕೊಡುವ ಸಂಪ್ರದಾಯವೂ ಇದೆ.ಈ ಸಡಗರವನ್ನು ಹುಡುಗಿಯ ತಾಯಿ ಕೂಡ ಹೇಳಿಕೊಳ್ಳುವ ಪರಿಯನ್ನು ಗ್ರಾಮೀಣ ಪ್ರದೇಶದಲ್ಲಿ ನೋಡುವುದೇ ಒಂದು ಸಂತಸದ ಸಂಗತಿ.
ಇಂದಿಗೂ ಕೂಡ ಗ್ರಾಮೀಣ ಸ್ಥಳಗಳಲ್ಲಿ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ತಮ್ಮ ತಮ್ಮ ಓಣಿ/ಗಲ್ಲಿ/ಕೇರಿಗಳಲ್ಲಿ ಮಹಿಳೆಯರೆಲ್ಲ ದುಡ್ಡು ಕೂಡಿಸಿ ಪೆಂಡಾಲ್ ಹಾಕಿಸಿ ಅದರಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಈ ಹುಣ್ಣಿಮೆಯನ್ನು ಸಡಗರದಿಂದ ಆಚರಿಸುವರು.ಅಲ್ಲಿ ಗೌರಿ ಮೂರ್ತಿಗೆ ಪೂಜೆ ಸಲ್ಲಿಸುವ ಜೊತೆಗೆ ಐದು ದಿನಗಳ ಕಾಲ ವಿವಿಧ ಕಾರ್ಯಗಳನ್ನುಕೈಗೊಳ್ಳುವರು.ಮೊದಲ ದಿನ ಗೌರಿ ಮೂರ್ತಿ ಪ್ರತಿಷ್ಠಾಪಿಸಿದರೆ.ಎರಡನೆಯ ಎರಡೂ ಹೊತ್ತು ಮುಂಜಾನೆ ಮತ್ತು ಸಂಜೆ ಗೌರಿಗೆ ಪೂಜೆ ಶೃದ್ದೆ ಭಕ್ತಿಯಿಂದ ಜರುಗುವುದು.ಮೂರನೆಯ ದಿನ ಗೌರಿಗೆ ಸೀಮಂತ(ಕುಬಸ) ಕಾರ್ಯ ಮುತ್ತೈದೆಯರೆಲ್ಲ ಸೇರಿ ಮಾಡುವರು.ನಾಲ್ಕನೆಯ ದಿನ ಮಗುವಿನ ನಾಮಕರಣ ತೊಟ್ಟಿಲಲ್ಲಿ ಮಗುವಿನ ಪ್ರತಿಕೃತಿಯನ್ನು ಇಟ್ಟು ನಾಮಕರಣಕಾರ್ಯ ಜರುಗಿಸುವರು.ಐದನೆಯ ದಿನ ಗೌರಿ ವಿಸರ್ಜನೆ ಜರುಗುವುದು.ಈ ರೀತಿ ಇಂದಿಗೂ ಕೂಡ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಈ ಹುಣ್ಣಿಮೆ ಆಚರಣೆಯಲ್ಲಿದೆ.

ಹಬ್ಬದ ಹಿನ್ನಲೆ

ಆಗಿ ಹುಣ್ಣಿಮಿ ಮಾಡಿ.ಸೀಗಿ ಹುಣ್ಣಿಮಿ ಮಾಡಿ
ಗೌರಿ ಹುಣ್ಣಿಮಿ ಮಾಡಿ ಬರಲೇನೋ ನನರಾಯ
ಹಬ್ಬದ ಮಾರ್ದಿನ ಬರುವೇನೋ

ಇದು ಪರಶಿವನನ್ನು ಕುರಿತು ಗೌರಿ ಹೇಳುವ ಮಾತು.ಅಂದರೆ ಪರಮೇಶ್ವರನಿಗೆ ಇಬ್ಬರು ಪತ್ನಿಯರು ಗಂಗೆ ಮತ್ತು ಗೌರಿ.ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗೌರಿ(ಪಾರ್ವತಿ) ಮಗನೊಡನೆ ಮೊದಲು ಬರುವಳು.ಗಣೇಶ ಚತುರ್ಥಿ ಸಂದರ್ಭದಲ್ಲಿಯೂ ಕೂಡ ಗೌರಿ ಪೂಜೆ ಸಲ್ಲಿಸುವರು.ಗಣೇಶ ವಿಸರ್ಜನೆಯಾದ ಬಳಿಕವೂ ಕೂಡ ಗೌರಿ ಭೂಲೋಕದಲ್ಲಿ ನೆಲೆಸುವಳು.ಆಗವಳು ಮುಂದೆ ಬರುವ ಹಬ್ಬಗಳಾದ ಆಗಿ ಹುಣ್ಣಿಮಿ,ಸೀಗಿ ಹುಣ್ಣಿಮಿಯ ಸಡಗರವನ್ನು ತವರು ಮನೆಯಲ್ಲಿ ಸಡಗರ ಸಂತಸದಿಂದ ಆಚರಿಸುತ್ತಿರಲು ಪರಶಿವನು ಅವಳನ್ನು ಕರೆಯಲೆಂದು ಬರುವನು.ಆಗ ಗೌರಿಯು ಈಗಾಗಲೇ ಆಗಿ ಹುಣ್ಣಿಮಿ ಮತ್ತು ಸೀಗಿ ಹುಣ್ಣಿಮಿ ಮುಗಿದಿವೆ.ಮುಂದೆ ಗೌರಿ ಹುಣ್ಣಿಮಿ ಇದೆ ಅದೊಂದನ್ನು ಮುಗಿಸಿ ಬರುವೆನು ಎಂಬುದನ್ನು ತಿಳಿಸುವಳು.ಈ ಹಿನ್ನಲೆಯಲ್ಲಿ ಸಾಕ್ಷಾತ್ ಗೌರವ್ವಳೇ ಗೌರಿ ಹುಣ್ಣಿಮಿ ಮಾಡುವ ಮೂಲಕ ಗೌರಿ ಹುಣ್ಣಿಮಿ ಆಚರಣೆ ಬಂದಿರುವುದು ಎಂಬುದನ್ನು ಜನಪದರು ತಮ್ಮದೇ ಆದ ಶೈಲಿಯಲ್ಲಿ ಮೇಲಿನ ತ್ರಿಪದಿಯನ್ನು ಉದಾಹರಿಸಿ ತಿಳಿಸುವರು.ಹೀಗಾಗಿಯೇ ಹೆಣ್ಣು ಮಕ್ಕಳು ಗೌರಿ ಪೂಜೆಯನ್ನು “ಗಜಗೌರಿ,ಸಂಪತ್ ಗೌರಿ,ಮಂಗಳ ಗೌರಿ,ಶುಕ್ರಗೌರಿ” ಎಂಬ ಹೆಸರುಗಳಿಂದ ಪೂಜಿಸಿ ಸಂಕಲ್ಪಗೈಯುತ್ತಾರೆ.ಈ ಹಿನ್ನಲೆಯಲ್ಲಿ ತವರಿಗೆ ಬಂದ ಗೌರಿಯ ನೆನಪಲ್ಲಿ ಗೌರಿ ಹುಣ್ಣಿಮಿ ಸಂದರ್ಭದಲ್ಲಿ ತವರಿನಲ್ಲಿ ಇನ್ನಷ್ಟು ದಿನ ಇದ್ದು ಬರಲು ಅನುಮತಿ ನೀಡಿದ ಪರಶಿವನ ಜೊತೆ ಗೌರಿಯ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವರು.
ತಮ್ಮ ಪತಿ ಕೂಡ ಎಲ್ಲ ಹಬ್ಬಗಳಿಗೂ ತವರು ಮನೆಗೆ ಕಳಿಸಲಿ.ತವರಿನ ಖುಷಿ ಸದಾ ಅನುಭವಿಸಲು ಅವಕಾಶ ಕೊಡಲಿ ಎಂದು ಮದುವೆಯಾದ ಹೆಣ್ಣುಮಕ್ಕಳು ಇಚ್ಚೆ ಪಟ್ಟರೆ ಮದುವೆಯಾಗದ ಕನ್ಯೆಯರು ಕೂಡ ತಮಗೂ ಕೂಡ ಮದುವೆಯಾದ ನಂತರ ತಮ್ಮ ಪತಿ ತವರು ಮನೆಯಲ್ಲಿ ಜರುಗುವ ಹಬ್ಬಗಳಿಗೆ ಕಳಿಸುವಂತಿರಲಿ ಎಂದು ಆಶಿಸುತ್ತಾರೆ.ಹೀಗಾಗಿ ಪರಶಿವನು ಗೌರಿಯೊಂದಿಗೆ ಪೂಜೆಗೊಳ್ಳುವನು ಎಂಬುದು ನಂಬಿಕೆ.ಒಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಬರುವ ಸಾಲು ಸಾಲು ಹಬ್ಬಗಳು ತವರು ಮನೆಯವರೊಂದಿಗೆ ಬೆರೆತು ಕಷ್ಟ ಸುಖ ಹಂಚಿಕೊಂಡು ಸಂತಸದಿಂದ ಗಂಡನ ಮನೆಗೆ ಹೋಗಲು ಹಾಕಿಕೊಟ್ಟ ಸಂಪ್ರದಾಯಗಳಂತೆ ಒಂದರ ಹಿಂದೆ ಒಂದು ಬರುವ ಮೂಲಕ ಅವರ ಸಂತಸ ಸಡಗರ ಇಮ್ಮಡಿಗೊಳಿಸುತ್ತವೆ.ಇಂಥ ಹಬ್ಬಗಳಲ್ಲಿ ಗೌರಿ ಮಹಿಮೆ ಸಾರುವ ಕೋಲಾಟ,ಸೋಬಾನ ಪದಗಳನ್ನು ಹೇಳುವರು ಅಷ್ಟೇ ಅಲ್ಲ ಹೆಣ್ಣು ಮಕ್ಕಳು ತಮ್ಮ ಗೆಳತಿಯರೊಡಗೂಡಿ ಲಗೋರಿ, ಕುಂಟಾಟ,ಕೋಲಾಟಗಳಂತಹ ಆಟಗಳನ್ನು ಆಡುವ ಮೂಲಕ ಸಂತಸ ಹಂಚಿಕೊಳ್ಳುವ ದೃಶ್ಯಗಳು ಗ್ರಾಮೀಣ ಭಾಗದಲ್ಲಿ ಸಿಗುತ್ತವೆ.

ಈ ಗೌರಿ ಹಬ್ಬವನ್ನು ವಿಶೇಷವಾಗಿ ಧಾರವಾಡ ಜಿಲ್ಲೆ,ಬೆಳಗಾವಿ ಜಿಲ್ಲೆಯ ಕೆಲವು ಭಾಗ,ಬಾಗಲಕೋಟೆ,ಗದಗ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಹೆಚ್ಚಾಗಿ ಆಚರಿಸುವರು.ಇನ್ನು ಈ ಭಾಗದಿಂದ ಬೇರೆ ಜಿಲ್ಲೆಗಳಿಗೆ ಸಂಬಂಧ ಬೆಳೆಸಿದ ಕುಟುಂಬಗಳವರು ಕೂಡ ಈ ಸಂಪ್ರದಾಯದ ವಿಶೇಷತೆ ಕಂಡುಕೊಂಡು ತಮ್ಮ ತಮ್ಮ ಮನೆಗಳಲ್ಲಿ ಕೂಡ ಗೌರಿ ಹುಣ್ಣಿಮಿ ಆಚರಿಸುವರು.ಸಕ್ಕರೆ ಆರುತಿಗಳು ಮಾತ್ರ ಎಲ್ಲ ಜಿಲ್ಲೆಗಳಲ್ಲಿ ಕಂಡು ಬರದೇ ಹೆಚ್ಚು ಆಚರಣೆಯಿರುವ ಸ್ಥಳಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿರುತ್ತವೆ.

ವಿಶೇಷ ಲೇಖನ:ವೈ.ಬಿ.ಕಡಕೋಳ
9449518400

Comments