UK Suddi
The news is by your side.

ಇಂದು ಕೇಂದ್ರ ಸರ್ಕಾರದ ಕೊನೆಯ (ಮಧ್ಯಂತರ) ಬಜೆಟ್‌.

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್‌ ಮಂಡನೆಗೆ ಮೊದಲೇ ನಿರುದ್ಯೋಗ ಸಮಸ್ಯೆ ತೀವ್ರವಾಗಿ ಚರ್ಚೆಯಾಗುತ್ತಿದೆ. ಹಾಗಾಗಿ ಇಂದು ಮಂಡನೆಯಾಗುವ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಭಾರಿ ಭರವಸೆಗಳು ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ನೇರ ಆದಾಯದ ಪ್ಯಾಕೇಜ್‌ ಘೋಷಣೆ, ಗ್ರಾಮೀಣ ಭಾರತಕ್ಕೆ ನೆರವಿನ ಯೋಜನೆಗಳು, ವೇತನದಾರರಿಗೆ ಅನುಕೂಲ ಆಗುವ ಕಾರ್ಯಕ್ರಮಗಳು ಇರಬಹುದು ಎಂದು ಭಾವಿಸಲಾಗಿದೆ. ಒಟ್ಟಿನಲ್ಲಿ, ಮುಂಬರುವ ಲೋಕಸಭಾ ಚುನಾವಣೆಯ ಮೇಲೇ ಕಣ್ಣಿಟ್ಟೇ ಬಜೆಟ್‌ ಸಿದ್ಧವಾಗಿದೆ ಎಂಬುದರಲ್ಲಿ ಅನುಮಾನ ಇಲ್ಲ.

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ ₹2.5 ಲಕ್ಷದಿಂದ 5 ಲಕ್ಷಕ್ಕೆ ಏರಿಸಬೇಕು ಎಂಬುದು ಬಹುಕಾಲದ ಬೇಡಿಕೆ. ಆದರೆ, ಹಣಕಾಸು ಸಚಿವ (ಮಧ್ಯಂತರ) ಪೀಯೂಷ್‌ ಗೋಯಲ್‌ ವಿನಾಯಿತಿಯನ್ನು ಈ ಮಟ್ಟದಲ್ಲಿ ಏರಿಸುವ ಸಾಧ್ಯತೆ ಕಡಿಮೆ.

ಇದು ಕೇಂದ್ರದ ವರಮಾನದ ಮೇಲೆ ಉಂಟು ಮಾಡುವ ಪರಿಣಾಮ ಅಪಾರ. ರೈತರ ಆದಾಯ ಹೆಚ್ಚಿಸಲು ನೇರ ಕೊಡುಗೆಯ ಬಗ್ಗೆ ಕೇಂದ್ರ ಯೋಚಿಸುತ್ತಿರುವ ಈ ಸಂದರ್ಭದಲ್ಲಿ ವರಮಾನವನ್ನು ದೊಡ್ಡ ಮಟ್ಟದಲ್ಲಿ ಕುಂದಿಸುವ ನಿರ್ಧಾರ ಕೈಗೊಳ್ಳುವುದು ಕಷ್ಟ ಎನ್ನಬಹುದು.

Comments