UK Suddi
The news is by your side.

ಭಾರತೀಯ ಪಿಜಿಯೋಥೆರಪಿ ತಜ್ಞರ ಸಂಘದ 57ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ.

ಬೆಂಗಳೂರು: ಭಾರತೀಯ ಪಿಜಿಯೋಥೆರಪಿ ತಜ್ಞರ ಸಂಘದ (ಐಎಪಿಕಾನ್‍ಬೆಂಗಳೂರು 2019) 57ನೇ ವಾರ್ಷಿಕ ಸಮ್ಮೇಳನವನ್ನು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಖಾತೆ ಸಚಿವ ಯು.ಟಿ.ಖಾದರ್ ಇಂದು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಯುಎಇ ತುಂಬೆ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯಿದೀನ್ ಅವರು ಪ್ರಧಾನ ದಿಕ್ಸೂಚಿ ಭಾಷಣ ಮಾಡಿದರು. ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸಚ್ಚಿದಾನಂದ ಅವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು.

ಈ ಎರಡು ದಿನಗಳ ಸಮ್ಮೇಳನ ವಿಶ್ವದ ವಿವಿಧೆಡೆಗಳಿಂದ 5000 ಪ್ರತಿನಿಧಿಗಳನ್ನು ಆಕರ್ಷಿಸಿದ್ದು, ಫಿಜಿಯೋಥೆರಪಿ ಹೇಗೆ ಇಂದು ಪುನಶ್ಚೇತನ ಸೇವೆಗಳ ಅವಿಭಾಜ್ಯ ಅಂಗವಾಗಿ ಬೆಳೆದಿದೆ ಎನ್ನುವುದನ್ನು ಇದು ಬಿಂಬಿಸುವಲ್ಲಿ ಯಶಸ್ವಿಯಾಗಿದೆ.

ಐಎಪಿಕಾನ್‍ಬೆಂಗಳೂರು 2019ರ ಧ್ಯೇಯವಾಕ್ಯ, “ಲೆಟ್ ಅಸ್ ಮೂವ್ ದ ಫಿಜಿಯೊ ವೇ” ಎಂದಾಗಿದೆ. ಇದು ದೈಹಿಕ ಸಕ್ರಿಯತೆಯ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ದೈಹಿಕ ಚಟುವಟಿಕೆಗಳು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ನೇರ ಸೂಚಕ ಎನ್ನುವುದು ಇದೀಗ ಹೆಚ್ಚು ಹೆಚ್ಚು ಮನವರಿಕೆಯಾಗುತ್ತಿದೆ. ವೈಜ್ಞಾನಿಕ ಗೋಷ್ಠಿಗಳನ್ನು ಯೋಚನಾಬದ್ಧವಾಗಿ ರೂಪಿಸಲಾಗಿದ್ದು, ಫಿಜಿಯೊಥೆರಪಿ ತಜ್ಞರು ಜಾಗತಿಕವಾಗಿ ಬಳಸಲ್ಪಡುವ ಪ್ರಸ್ತುತ ತಂತ್ರಗಳನ್ನು ಮತ್ತು ಅನುಶೋಧನಾತ್ಮಕ ದೃಷ್ಟಿಕೋನಗಳನ್ನು ತಿಳಿದುಕೊಳ್ಳಲು ನೆರವಾಗಲಿದೆ. ಅಂತರರಾಷ್ಟ್ರೀಯ ತಜ್ಞರ ಉಪಸ್ಥಿತಿಯು, ಸಮ್ಮೇಳನಕ್ಕೆ ವಿಶೇಷ ಮೆರುಗು ನೀಡಲಿದೆ.

ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ಅಲಿ ಮತ್ತು ಸಂಘಟನಾ ಕಾರ್ಯದರ್ಶಿ ಡಾ.ಎ.ಸುರೇಶ್‍ಬಾಬು ರೆಡ್ಡಿ ಅವರ ಪ್ರಕಾರ, “ಐಎಪಿಕಾನ್‍ಬೆಂಗಳೂರು 2019” ಜಾಗತಿಕವಾಗಿ ಬಳಕೆಯಲ್ಲಿರುವ ಹಲವಾರು ದೃಷ್ಟಿಕೋನ/ ತಂತ್ರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದ್ದು, ವಿದೇಶಗಳಿಗೆ ಹೋಗಿ ಫಿಜಿಯೊಥೆರಪಿ ತಜ್ಞರು ಇದನ್ನು ತಿಳಿದುಕೊಳ್ಳುವುದು ತೀರಾ ದುಬಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಖ್ಯಾತಿಯ ವೃತ್ತಿಪರರ ಗೋಷ್ಠಿಗಳು ಹಾಗೂ ಬೆಂಗಳೂರು ಹಾಗೂ ಮಂಗಳೂರಿನಲ್ಲಿರುವ ವಿವಿಧ ಕಾಲೇಜುಗಳು ಹಾಗೂ ಆಸ್ಪತ್ರೆಗಳು ಭಾರತೀಯ ವೃತ್ತಿಪರರಿಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ತರಬೇತಿಯನ್ನು ಒದಗಿಸುವಲ್ಲಿ ಸಹಾಯಕವಾಗಲಿದೆ.

ಅಮೆರಿಕದ ಡಾ.ಗ್ರೇ ಕ್ರಸಿಲೊವಸ್ಕಿ ಅವರು ಕ್ಲಿನಿಕಲ್ ಅನ್ವಯಿಕೆ ಆಧರಿತ ಅನುಭವಜನ್ಯ ದೃಷ್ಟಿಕೋನದ ಬಗ್ಗೆ ವಿವರ ನೀಡಿದರು. ಈ ವಿನೂತನ ವಿಧಾನವನ್ನು ಪಾಶ್ರ್ವವಾಯು, ತಲೆ ಗಾಯ ಮತ್ತು ಕ್ರೀಡಾ ಗಾಯಗಳ ಸಂದರ್ಭದಲ್ಲಿ ಅನ್ವಯಿಸಬಹುದಾಗಿದ್ದು, ಮಾಂಸಖಂಡಗಳ ನಿಖರತೆ/ ಕ್ಷಮತೆ ಮತ್ತು ಮಾಂಸಖಂಡಗಳ ಬಲದ ಬಗ್ಗೆ ನಿಖರ ಮಾಹಿತಿ ಪಡೆಯಲು ಇದು ಸಹಕಾರಿಯಾಗಿದೆ ಎಂದು ವಿವರಿಸಿದರು.

ಅಂತೆಯೇ ಜರ್ಮನಿಯ ಡಾ.ಅಲ್ರಿಚ್ ಜಿ.ರಂಡೋಲ್ ಅವರು, ಮ್ಯಾಟ್ರಿಕ್ಸ್ ರಿದಂ ಥೆರಪಿ ಬಗ್ಗೆ ಉಪನ್ಯಾಸ ನೀಡಿದರು. ಈ ವಿಧಾನವನ್ನು ಅಸ್ಥಿಪಂಜರದ ಮಾಂಸಖಂಡಗಳಿಗೆ ಬಳಸಲಾಗುತ್ತಿದ್ದು, ಅಥ್ಲೀಟ್‍ಗಳು ಮತ್ತು ಕ್ರೀಡಾಪಟುಗಳಲ್ಲಿ ರಿದಂ ಥೆರಪಿ ಬಳಸಿಕೊಂಡು ತರಬೇತಿಯನ್ನು ಬಲಪಡಿಸಬಹುದು. ಇದು ಸಂಭಾವ್ಯ ಹಾನಿಯನ್ನು ತಡೆಗಟ್ಟಿ, ಹೆಚ್ಚಿನ ಸ್ಥಿತಿಸ್ಥಾಪಕತ್ವಕ್ಕೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರೆಡ್ ಫ್ಲ್ಯಾಗ್ಸ್ ಇನ್ ಫಿಜಿಯೊಥೆರಪಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಬ್ರಿಟನ್‍ನ ಡಾ.ಮುರಳಿರಾಜು ರಾಜನ್ ಅವರು, ಎಲುಬು ಸಾಂದ್ರತೆ ಕಡಿಮೆಯಾಗಿರುವ ಸ್ಥಿತಿ, ತೀವ್ರ ಗಾಯಗಳು, ವಿಭಿನ್ನ ಚಿಕಿತ್ಸೆಯೊಂದಿಗೆ ನೀಡಲಾಗುತ್ತಿರುವ ಆರೈಕೆ ವಿಷಯದಲ್ಲಿ ಎದುರಾಗಬಹುದಾದ ಅಪಾಯ ಸಾಧ್ಯತೆಗಳನ್ನು ವಿವರಿಸಿದರು.

ಫಿಜಿಯೊಥೆರಪಿಯಲ್ಲಿ ಪುರಾವೆ ಆಧರಿತ ವಿಧಾನ ಮತ್ತು ಕ್ಲಿನಿಕಲ್ ಪ್ರಾಕ್ಟಿಸ್ ಮಾರ್ಗಸೂಚಿಯ ಪಾತ್ರ ಎಂಬ ವಿಷಯದ ಬಗ್ಗೆ ಬಹರೇನ್‍ನ ವೈದ್ಯೆ ಡಾ.ಲಿಲ್ಲಿ ಮ್ಯಾಥ್ಯೂಸ್ ಶಿಬಟ್ ಮಾತನಾಡಿ, ಪುರಾವೆ ಆಧರಿತ ವಿಧಾನ ಹಾಗೂ ಸಂಶೋಧನೆ ಕೇಂದ್ರಿತ ವಿಧಿವಿಧಾನಗಳು ಹೇಗೆ ಉತ್ತಮ ಎನ್ನುವುದನ್ನು ವಿವರಿಸಿದರು. ಕ್ರೀಡಾ ಗಾಯ, ಸೆರೆಬ್ರೆಲ್ ಪ್ಲಾಸಿ, ಪ್ರಸೂತಿ & ಸ್ತ್ರೀರೋಗ, ನರರೋಗ ಸ್ಥಿತಿ, ಮೆದು ಅಂಗಾಂಶ ತಿರುಚುವಿಕೆ, ಚಿಕಿತ್ಸಾ ವಿಧಾನಗಳು, ಐಸಿಯು ನಿರ್ವಹಣೆ ಮತ್ತು ದಾಖಲಾತಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಅಂತರರಾಷ್ಟ್ರೀಯ ಉಪನ್ಯಾಸಕರ ಜತೆಗೆ ಭಾರತದ ವಿವಿಧೆಡೆಗಳಿಂದ ಆಗಮಿಸಿದ್ದ 30 ಮಂದಿ ಖ್ಯಾತ ಫಿಜಿಯೋಥೆರಪಿ ತಜ್ಞರು ಕೂಡಾ, ಭುಜ ಪುನಶ್ಚೇತನ, ಮುಂಗೈ ಗಾಯ, ಬಾಲ್ಯದ ಬೊಜ್ಜು, ವಿಶೇಷ ಅಗತ್ಯತೆಯ ಮಕ್ಕಳಿಗೆ ಏರೊಬಿಕ್ ಅಭ್ಯಾಸಗಳ ಅಗತ್ಯತೆ, ಮಹಿಳೆಯರಲ್ಲಿ ಉತ್ತಮ ಆರೋಗ್ಯಕ್ಕೆ ವ್ಯಾಯಾಮದ ಅಗತ್ಯತೆ, ನೋವು ನಿರ್ವಹಿಸುವ ವಿಧಾನ, ಕ್ರೀಡಾ ಪುನಶ್ಚೇತನ, ಪ್ರಮುಖ ಸ್ಥಿರತೆ ವಿಷಯಗಳಲ್ಲಿ ಹೊಸ ದೃಷ್ಟಿಕೋನ/ ಸಂಶೋಧನೆ ಹಾಗೂ ಪುರಾವೆ ಆಧರಿತ ಪರಿಕಲ್ಪನೆಗಳ ಬಗ್ಗೆ ಉಪನ್ಯಾಸಗಳನ್ನು ನೀಡಿದರು.

Comments