UK Suddi
The news is by your side.

ವೆಂಕಟೇಶನ ಕೈಚಳಕದಿಂದ ಅರಳುತ್ತಿವೆ ಪಂಚಲೋಹದ ಪ್ರತಿಮೆಗಳು.

ಹುನಗುಂದ(ಬಾಗಲಕೋಟ):ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.ಕಲಾದೇವತಿ ಎಲ್ಲರನ್ನು ಕೈ ಬೀಸಿ ಕರೆಯುತ್ತಾಳೆ ಆದರೆ ಕೆಲವರನ್ನು ಮಾತ್ರ ಎತ್ತಿಕೊಳ್ಳುತ್ತಾಳೆ.ಅಂತಹ ಕಲಾದೇವಿಯ ಕೃಷಿಗೆ ಪಾತ್ರವಾದ ತಾಲೂಕಿನ ತೂರಮರಿ ಎಂಬ ಚಿಕ್ಕ ಗ್ರಾಮದ ಯುವ ಪ್ರತಿಭೆಯೊಂದು ಪಂಚಲೋಹದ ಪ್ರತಿಮೆಗಳನ್ನು ತಮ್ಮ ಕೈಚಳಕದಿಂದ ತಯಾರಿಸಿ ಹೆಸರು ಮಾಡಿದ ವೆಂಕಟೇಶ ಗೌಡರ ನಿಜಕ್ಕೂ ಒಬ್ಬ ಅದ್ಬುತ ಕಲೆಗಾರ.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ವಂಶಪಾರಂಪರಿಕ ವೃತ್ತಿಯಲ್ಲದಿದ್ದರೂ ಉಡುಪಿ ಜಿಲ್ಲೆಯ ಕರ್ಕಾಳದ ಸಿ.ಇ.ಕಾಮತ್ ಕರಕುಶಲ ತರಬೇತಿ ಸಂಸ್ಥೆಯಲ್ಲಿ 18 ತಿಂಗಳು ತರಬೇತಿಯನ್ನು ಪಡೆದುಕೊಂಡು ಕಂಚಿನ ಮತ್ತು ಪಂಚಲೋಹದ ಪ್ರತಿಮೆಗಳನ್ನು ಕತ್ತೆನೆ ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡು ಹಳ್ಳಿಯಿಂದ ರಾಜ್ಯಾಧ್ಯಂತ ಹೆಸರು ಮಾಡಿದ್ದಾರೆ.

ತನ್ನ 18 ನೆಯ ವಯಸ್ಸಿನಿಂದಲೇ ಪಂಚಲೋಹದ ಮೂರ್ತಿಗಳನ್ನು ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡು ಮೊದಮೊದಲು ಚಿಕ್ಕ ಚಿಕ್ಕ ಪ್ರತಿಮೆಗಳ ಕೆತ್ತೆನೆಯ ಮೂಲಕ ಇಂದು ಶರಣ,ಸಂತ,ಮಹಾತ್ಮರ ಪ್ರತಿಮೆಗಳನ್ನು ನಿರ್ಮಾಣ ಮಾಡುವ ಮಟ್ಟಿಗೆ ಒಂದು ಹಳ್ಳಿಯ ಪ್ರತಿಭೆ ಬೆಳೆದು.ತನ್ನ ಸ್ವಗ್ರಾಮವಾದ ತೂರಮರಿಯಲ್ಲಿಯೇ ಶಿಲ್ಪಾ ಶಂಕರ ಕಲಾ ಕೇಂದ್ರ ಸ್ಥಾಪಿಸಿ.ನೂರಾರು ಪಂಚಲೋಹದ ಪ್ರತಿಮೆಗಳನ್ನು ನಿರ್ಮಾಣ ಮಾಡಿರೋದು ನಿಜಕ್ಕೂ ಅತ್ಯದ್ಬುತ ಸಾಧನೆಯಾಗಿದೆ.

ಕಲಾವಿದನ ಹರಿತವಾದ ಕಲಾ ಕೌಶಲ್ಯದಿಂದ ಮೂಡಿ ಬಂದ ಆಂಜನೇಯ, ಶರಣಬಸವೇಶ್ವರ,ಮಳೇಂದ್ರಸ್ವಾಮಿಯಂತಹ ದೇವರ ಮೂರ್ತಿಗಳು,ಹಿಂದು ಸಾಮ್ರಾಟ ಛತ್ರಪತಿ ಶಿವಾಜಿ,ಸ್ವಾತಂತ್ರ್ಯ ಹೋರಾಟಗಾರಾದ,ಗಾಂಧೀಜಿ,ರಾಣಿ ಚೆನ್ನಮ್ಮ,ಸಂಗೋಳ್ಳಿ ರಾಯಣ್ಣ,12 ನೆಯ ಶತಮಾನದ ಶಿವಶರಣರಾದ ಬಸವೇಶ್ವರ, ಮಡಿವಾಳ ಮಾಚಿದೇವ,ದಾಸ ಪರಂಪರೆಯ ಕನಕದಾಸರ, ದೇಶಕ್ಕಾಗಿ ಗಡಿಪ್ರದೇಶದಲ್ಲಿ ಸೇವೆ ಸಲ್ಲಿಸುವ ವೇಳೆ ವೀರ ಮರಣವನ್ನು ಹೊಂದಿದ ವೀರಯೋಧರ,ಸಂತ ಶರಣರ ಮೂರ್ತಿಗಳನ್ನು ತಯಾರಿಸಿಕೊಟ್ಟಿದ್ದಲ್ಲದೆ,ಇತ್ತಿಚಿನ ದಿನಗಳಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೂರ್ತಿಯನ್ನು ಮಾಡಿ ಕೊಟ್ಟಿದ್ದೇನೆ ಎನ್ನುತ್ತಾರೆ ಕಲೆಗಾರ ವೆಂಕಟೇಶ.

ಅದು ಅಲ್ಲದೆ ಸಧ್ಯ ಲಂಬಾಣಿ ಜನಾಂಗದ ಆರೈಧ್ಯ ದೇವರ ಸಂತ ಸೇವಾಲಾಲರ 4.5 ಅಡಿಯ 170 ಕೆಜಿ ತೂಕದ ಅತಿ ಎತ್ತರದ ಕಂಚಿನ ಪ್ರತಿಮೆಗೆ ಕೊನೆಯ ಸ್ವರ್ಷ ನೀಡುತ್ತಿದ್ದಾರೆ.
ಈ ರೀತಿ ಕಂಚಿನ,ಪಂಚಲೋಹದ ಮೂರ್ತಿ ಕೆತ್ತನೆಯಿಂದ ಹೆಸರು ಮಾಡಿದ ಈ ಹಳ್ಳಿಯ ಪ್ರತಿಭೆಗೆ ವಿವಿಧ ಕಡೆಯಿಂದ ಬಹಳಷ್ಟು ಮೂರ್ತಿ ನಿರ್ಮಾಣಕ್ಕಾಗಿ ಆರ್ಡರ್‍ಗಳು ಇವರನ್ನು ಹುಡಿಕೊಂಡು ಬರುತ್ತಿದ್ದು.ಇವರ ಕೆತ್ತನೆಯ ಕೈಚಳಕಕ್ಕೆ ಮಾರು ಹೋದ ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ಮಹಾರಾಷ್ಟ್ರ ರಾಜ್ಯದ ಮಹಾನ್ ನಾಯಕರ,ದೇವರಗಳ ಮೂರ್ತಿ ತಯಾರಿಸಿ ಕೊಟ್ಟಿದ್ದು ವಿಶೇಷವಾಗಿದೆ. ಹಿತ್ತಾಳೆ,ಬೆಳ್ಳಿ,ತಾಮ್ರ ಹಾಗೂ ಕಂಚಿನ ಸೇರಿದಂತೆ ಹಲವು ಲೋಹ ಮಾದರಿಯ ದೇವಸ್ಥಾನದ ವಿಗ್ರಹ,ಬಾಗಿಲ ಚೌಕಟ್ಟು,ಪಂಚಕಳಸ,ಬೆತ್ತ,ಪಲ್ಲಕ್ಕಿ,ಕವಚ ಹಾಗೂ ಉತ್ಸವದ ಮೂರ್ತಿಗಳನ್ನು ತಯಾರಿಸಲಾಗುತ್ತದೆ.ಒಂದು ಪ್ರತಿಮೆ ನಿರ್ಮಾಣ ಮಾಡಲು ಕನಿಷ್ಠ 4 ತಿಂಗಳು ಅವಧಿಯನ್ನು ತೆಗೆದುಕೊಳ್ಳುತ್ತೆನೆ ಎನ್ನುತ್ತಾರೆ ವೆಂಕಟೇಶ ಗೌಡರ.
ಈ ರೀತಿ ಧಾರ್ಮಿಕ ಮನೋಭಾವ ಮೂಡಿಸುವ ಮತ್ತು ಧಾರ್ಮಿಕ ಸಂಪ್ರದಾಯವನ್ನು ಎತ್ತಿ ಹಿಡಿಯುವ ಕಾಯಕದಲ್ಲಿ ನಿರತರಾದ ಕಲೆಗಾರ ವೆಂಕಟೇಶರ ಕಲೆಯನ್ನು ಗುರುತಿಸಿ ರಾಜ್ಯ ಸರ್ಕಾರ,ಜಿಲ್ಲಾಡಳಿತ,ತಾಲೂಕು ಆಡಳಿತ ಹಾಗೂ ಸಂಘ ಸಂಸ್ಥಗಳು ಗೌರವ ನೀಡಬೇಕು ಎಂಬುವುದೆ ಕಲಾವಿದನ ಆಸೆ.ಆಸಕ್ತರು 8197847270 ಸಂಪರ್ಕಿಸಬಹುದು.

“ವೈಜ್ಞಾನಿಕ ತಳಹದಿಯಿಂದ ಲೋಹವನ್ನು ಕರಗಿಸಿ ಮೂರ್ತಿಯನ್ನು ನಿರ್ಮಾಣ ಮಾಡುವಾಗ ನನಗೆ ಸಂತಸವನ್ನು ಉಂಟಾಗುವುದು.ಪ್ರತಿಮೆ ಪ್ರತಿಷ್ಠಾಪಿಸಿದ ಬಳಿಕ,ಸಾವಿರಾರು ಭಕ್ತರು ಅದರಲ್ಲಿಯೇ ದೇವರನ್ನು ಕಂಡು ಭಕ್ತಿ ರಸವನ್ನು ಉಕ್ಕಿಸುವುದು, ಪೂಜೆ,ಬೇಡಿಕೆ ಸಲ್ಲಿಸತ್ತಿರುವುದರಲ್ಲಿ ನನ್ನ ಶ್ರಮದ ಸಂತಸವನ್ನು ಕಾಣುತ್ತೇನೆ”-ವೆಂಕಟೇಶ ಗೌಡರ.ಪಂಚಲೋಹ ಪ್ರತಿಮೆಯ ಕಲೆಗಾರ.

ವಿಶೇಷ ಲೇಖನ-ಚಂದ್ರು ಗಂಗೂರ.

Comments