UK Suddi
The news is by your side.

ಶಿರೂರನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೆಳನ-ಜನಸಾಮಾನ್ಯರಿಗೆ ದಾರಿ ದೀಪವಾದ ಮಕ್ಕಳ ಸಾಹಿತ್ಯ.

ಸಾಂದರ್ಭಿಕ ಚಿತ್ರ.

(ಬಾಗಲಕೋಟ ಜಿಲ್ಲೆಯ ಶಿರೂರಿನಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗಲಿದ್ದು.ಈ ಪ್ರಯುಕ್ತ ಈ ಕಿರು ಲೇಖನ)

ಬಾಗಲಕೋಟ:ಮಕ್ಕಳ ಸಾಹಿತ್ಯ ಕೇವಲ ಮಕ್ಕಳಿಗಾಗಿ ಅಷ್ಟೇ ಅಲ್ಲ ಅದು ಹಿರಿಯರಿಗೂ ಬೇಕು. ಸರಳ ಪದ್ಯಗಳಿದ್ದು ನೈತಿಕ ಪ್ರಜ್ಞೆ, ಸಮಾನತೆ, ಹೃದಯವಂತ ಗುಣಗಳನ್ನು ಬೆಳೆಸುವ ಎಲ್ಲಾ ಸಾಹಿತ್ಯವು ಮಕ್ಕಳ ಸಾಹಿತ್ಯವಾಗಬಲ್ಲದು. ಅದು ಮಕ್ಕಳಿಗೆ ಹಿರಿಯರಿಗೆ ಮಾರ್ಗದರ್ಶನ ನೀಡಿ ಪ್ರೀಯವಾಗುತ್ತದೆ. ಮಕ್ಕಳಿಗೆ ಅರ್ಥವಾಗುವ ಸರಳ ಪದ್ಯಗಳ ಸಾಹಿತ್ಯ ಬಸವಾದಿ ಶರಣರ ವಚನಗಳು, ದಾಸರ ಕೀರ್ತನೆಗಳು, ಜನಪದರ ಹಾಡು, ಕಥೆಗಳು, ಹಿರಿ-ಕಿರಿಯರಿಗೆ ನೈತಿಕ ಪ್ರಜ್ಞೆ ಬೆಳೆಸುವ ಕವಿತೆಗಳು, ಮಕ್ಕಳ ಸಾಹಿತ್ಯವಾಗಬಹುದು. ಇದು ಬಹಳ ವಿಸ್ತಾರವಾದ ವಿಷಯ. ಆದ್ದರಿಂದ ನಾನು ಇಲ್ಲಿ ಕೆಲವು ಕವಿತೆಗಳನ್ನು ಮಾತ್ರ ಉದಾರಿಸುತ್ತೇನೆ.

ನೋಬೆಲ್ ಪ್ರಶಸ್ತಿ ಪಡೆದ ಮೆಕ್ಸಿಕೋ ದೇಶದ ಕವಿ ಪಾಝು ಕಾವ್ಯ ಜಗತ್ತನ್ನು ಬದಲಾಯಿಸುವ ಕ್ರೀಯೆ ಎಂದಿದ್ದಾನೆ. ಒಂದು ಉತ್ತಮವಾದ ಕವಿತೆ ಜನರ ಹೃದಯವನ್ನು ಪ್ರವೇಶಿಸಿ ಬದಲಾವಣೆಗೆ ಸಹಕರಿಸಿದ ಉದಾಹರಣೆಗಳು ಸಾಕಷ್ಟು. ಸ್ವಾತಂತ್ರ್ಯ ಹೋರಾಟದಲ್ಲಿ ದೇಶಭಕ್ತಿ ಕವಿತೆಗಳು ಹೋರಾಟಕ್ಕೆ ಸ್ಪೂರ್ತಿ ನೀಡಿದ್ದವು ಎಂಬುದು ಈಗ ಕೇವಲ ಇತಿಹಾಸ. ಇದು ಸಾಹಿತ್ಯದ ಶಕ್ತಿಯಾಗಿದೆ.
ದುರ್ಗಾಸುತೆಯ ನಾಲ್ಕು ಸಾಲುಗಳು ದೇಶ ಭಕ್ತಿಗೆ ಪ್ರೇರಕವಾಗಿವೆ.

ಭಾರತ ಮಾತೆಯ ನಲ್ಮೆಯ ಮಕ್ಕಳು
ಭವ್ಯ ಭಾರತವ ಕಟ್ಟೋಣ
ಸಾಧನೆಯಿಂದಲೆ ಸಿದ್ದಿ ಎನ್ನುವ
ಮಂತ್ರವ ನಾವು ಪಠಿಸೋಣ.

ವಿಜ್ಞಾನಕ್ಕೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದ್ದರೂ ಅದು ಮನುಷ್ಯನ ನಡುವೆ ಬೆಳೆದಿರುವ ಅಂತರವನ್ನು ತುಂಬಿಕೊಳ್ಳಲಾರದು. ಬದುಕಿನ ಕತ್ತಲೆಯನ್ನು ಸಾಹಿತ್ಯ ಮಾತ್ರ ತುಂಬಿ ಕೊಡಬಲ್ಲದು ಸಾಹಿತಿಯು ತನ್ನ ಸಾಹಿತ್ಯದ ಮೂಲಕ ವಾಸ್ತವವನ್ನು ಸೃಷ್ಠಿಸುತ್ತಾನೆ. ಈ ದಿಸೆಯಲ್ಲಿ ಮಕ್ಕಳ ಸಾಹಿತ್ಯದ ಪಾತ್ರ ಹಿರಿದಾಗಿದೆ.
ನೈತಿಕ ಪ್ರಜ್ಞೆಯನ್ನು ಬೆಳೆಸುವ ಜನಪದ ಗೀತೆಯ ಸಾಲುಗಳು ನಮಗೆ ಮಾರ್ಗದರ್ಶನ ನೀಡುತ್ತವೆ.
ಆಚಾರಕ್ಕರಸಾಗು, ನೀತಿಗೆ ಪ್ರಭುವಾಗು
ಮಾತಿನಲ್ಲಿ ಚೂಡಾಮಣಿಯಾಗು ಕಂದಯ್ಯ
ಜ್ಯೋತಿಯೇ ಆಗು ಜಗಕೆಲ್ಲ

ಚರಿತ್ರೆ ಏನೇ ಇರಲಿ, ಹೇಗೆ ಇರಲಿ, ಜಗತ್ತನ್ನು ಪ್ರೀತಿಸುವುದು ಕವಿಯ ಮುಖ್ಯ ಗುಣವಾಗಬೇಕು. ಪ್ರೀತಿಯೆ ಸಾಹಿತ್ಯಕ್ಕೆ ಮೂಲ ಪ್ರೇರಣೆ, ಜಗತ್ತನ್ನು ಕರುಣೆಯಿಂದ ಕಂಡವರು ಮಾತ್ರ ಉತ್ತಮ ಸಾಹಿತ್ಯವನ್ನು ಕೊಡಬಲ್ಲರು ಎಂಬುದು ಲೋಕ ರೂಡಿಯ ಮಾತು. ಈ ಗುಣಗಳೇ ಮಕ್ಕಳ ಸಾಹಿತ್ಯಕ್ಕೆ ಶಕ್ತಿಯಾಗಿ ನಿಲ್ಲುತ್ತವೆ.
ಎಸ್.ಎಸ್. ಹಳ್ಳೂರ ಅವರ ಕವನದ ಸಾಲುಗಳು ಆತ್ಮೀಯವಾಗಿವೆ.
ಹಕ್ಕಿ ಹಾಡಿಗೆ ಮನುಜ ಹೃದಯಕೆ
ಪ್ರೀತಿ ಅಮೃತ ಧಾರೆಯು

ಕಾಡು ನಾಡನು ವೃದ್ಧಿಗೊಳಿಸಿದ
ದೇವ ನಿರ್ಮಿತ ಜಾಲವು.
ಒಂದು ಮಾತ್ರ ಸತ್ಯ, ಪ್ರತಿಯೊಬ್ಬನ ಹೃದಯದಲ್ಲಿ ಸಾಹಿತ್ಯದ ಶಕ್ತಿಯಿದೆ. ಆದರೆ ಸಾಹಿತಿಯಾಗಲಿಕ್ಕೆ ಸರಿಯಾದ ಪ್ರಯತ್ನ ಮಾಡಿಲ್ಲ, ಯಾರ ಹೃದಯದಲ್ಲಿ ಪ್ರೀತಿ, ಕರುಣೆ, ದಯೆ, ತುಂಬಿದೆ ಅವರೆಲ್ಲರೂ ಸಾಹಿತಿಗಳೇ, ಮನುಷ್ಯನಲ್ಲಿ ಏನೆಲ್ಲಾ ಇದೆಯೊ ಅದರ ಆತ್ಮವೇ ಪ್ರೇಮ. ಈ ಗುಣಗಳು ಮನುಷ್ಯನಿಗೆ ಹುಟ್ಟಿನಿಂದ ಬಂದಿರುತ್ತವೆ. ಜೀವನವನ್ನು ಕಾವ್ಯಮಯ ಆಗಿಸುವುದು ಕೇವಲ ಪ್ರೇಮ ಮಾತ್ರ. ಕ್ರೂರತನ ಎನ್ನುವುದು ಬೆಳೆಯುತ್ತ ಬಂದ ಗುಣ. ಆದ್ದರಿಂದ ಪ್ರತಿಯೊಬ್ಬರೂ ಸಾಹಿತಿಯಾಗಬಹುದು. ಮಕ್ಕಳ ಸಾಹಿತ್ಯಕ್ಕೆ ಒಳ್ಳೆಯ ಗುಣಗಳೇ ಪ್ರೇರಣೆಯಾಗಿವೆ.
ಶಂ.ಗು. ಬಿರದಾರ ಅವರ ಕವಿತೆಯ ಸಾಲುಗಳು ನಮಗೆ ಪ್ರೇರಣೆ ನೀಡುತ್ತವೆ.
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮಕನಸಿದೋ ಸುಂದರ
ಸಾಹಿತ್ಯ ಸಮಾಜದ ತಾಯಿ ಎಂದರು ಬೀಚಿ. ಪ್ರತಿಯೊಬ್ಬ ತಾಯಿ ತನ್ನ ಮಗು ಜಗತ್ತಿನ ಸರ್ವಶ್ರೇಷ್ಠ ವ್ಯಕ್ತಿಯಾಗಬೇಕೆಂದು ಬಯಸುತ್ತಾಳೆ, ಹಾಗೆ ಸಾಹಿತ್ಯವು ಈ ಸಮಾಜ ಸರ್ವಶ್ರೇಷ್ಠ ಸಮಾಜ ಆಗಬೇಕು ಬಯಸುತ್ತದೆ. ಈ ದಿಸೆಯಲ್ಲಿ ಮಕ್ಕಳ ಸಾಹಿತ್ಯ ಸಮಾಜ ಪರಿವರ್ತನೆಗೆ ನಿರಂತರ ಪ್ರಯತ್ನಿಸುತ್ತಿದೆ.
ಕವಿ ಚನ್ನವೀರ ಕಣವಿಯವರ ನಾಲ್ಕು ಸಾಲುಗಳು ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡಬಲ್ಲವು
ಅರಿವೇ ಗುರು, ನುಡಿ ಜೋರ್ತಿಲಿಂಗ
ದಯವೇ ಧರ್ಮದ ಮೂಲತರಂಗ
ವಿಶ್ವಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಲ ಜಯಭೇರಿ !
ವಿಶ್ವ ವಿನೂತನ ವಿದ್ಯಾಚೇನತ.
ಸಮಾಜ ಎನ್ನವುದು ಉತ್ತು ಬಿತ್ತಿದ ಭತ್ತದ ಗದ್ದೆಯಿದ್ದಂತೆ. ಗದ್ದೆಯಲ್ಲಿ ನಮಗೆ ಬೇಕಾದ ಸಮೃದ್ಧವಾದ ಪೈರಿಗಿಂತ ಮೊದಲು ಕಸ ಬೆಳೆಯುತ್ತದೆ. ರೈತ ಕಸ ತೆಗೆದು ಸಮೃದ್ದವಾದ ಪೈರನ್ನು ಬೆಳೆಯುತ್ತಾನೆ. ಹಾಗೆ ಸಮಾಜದಲ್ಲಿರುವ ಅಂದ ಶ್ರದ್ಧೆ, ಕೌರ್ಯ, ಸ್ವಜನ ಪಕ್ಷಪಾತ, ಅಸಮಾನತೆ, ಭ್ರಷ್ಟಾಚಾರ, ಭಯೋತ್ಪಾದನೆಯಂತ ಕಸವನ್ನು ಸಾಹಿತ್ಯದಿಂದ ಕಳೆಯಬೇಕಾಗಿದೆ. ಸಮಾಜ ಪರಿವರ್ತನೆ ಎನ್ನುವುದು ಬೇಗ ಆಗುವಂತಹದ್ದಲ್ಲ ಇದಕ್ಕೆ ದೀರ್ಘ ಸಮಯ ಬೇಕಾಗುತ್ತದೆ, ಸುಂದರ ಸಮಾಜದ ನಿರ್ಮಾಣಕ್ಕೆ ಮಕ್ಕಳ ಸಾಹಿತ್ಯದ ಪ್ರೇರಣೆಯನ್ನು ಅಲ್ಲಗಳೆಯುವಂತಿಲ್ಲ.
ಡಾ. ದೊಡ್ಡ ರಂಗೇಗೌಡ ಅವರ “ದಾರಿ ದೀಪ” ಕವನದ ಸಾಲುಗಳು
ತಿಮಿರ ಸಾಗರದಿ ದಿನವೂ ತೊಳಲಿರಲು
ಬೆಳಕ ತೋರುವರು ಗುರುಗಳು
ಭವದ ಬಂಧನದಿ ನಿತ್ಯ ನರಳಿರಲು
ದಾರಿ ದೀಪ ನಮ್ಮ ಶ್ರೀಗಳು !
ಅದಕ್ಕಾಗಿಯೆ ಕವಿಯಿತ್ರಿ ಅಮೃತಾ ಪ್ರಿಯತಮ್ ಒಂದು ಮಾತು ಹೇಳುತ್ತಾರೆ “ಮಾನವನ ಒಳಗಿರುವ ಎಲ್ಲ ದೇವತೆಗಳನ್ನು ಎಚ್ಚರಿಸುವ ಪ್ರಯತ್ನ ನಿರಂತರ ನಡೆಯಬೇಕು ಅದು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾರೆ. ಮಕ್ಕಳ ಸಾಹಿತ್ಯ ಅಂತಃ ಸತ್ವವನ್ನು ಬೆಳೆಸಬಲ್ಲದು”.
ಗುರುಸ್ವಾಮಿ ಗಣಾಚಾರಿಯವರ ನಾಲ್ಕು ಸಾಲುಗಳು ನಮಗೆ ಆತ್ಮೀಯವಾಗುತ್ತವೆ.
ಒಂದೇ ದೇಶ ಒಬ್ಬನೆ ಈಶ
ಒಂದೇ ಬಾವವು
ಬಂದುಗಳಂತೆ ಜೀವನ ನಡೆಸಲು
ಅದುವೇ ಶಕ್ತಿಯು
ಕಳ್ಳತನ, ಮೋಸ, ಸುಳ್ಳು, ವಂಚನೆ, ಭ್ರಷ್ಟಾಚಾರ ಇವುಗಳನ್ನು ಕಲಿಸಲಿಕ್ಕೆ ಎಲ್ಲಿಯೂ ಶಾಲೆಗಳನ್ನು ತೆಗೆದಿಲ್ಲ ಆದರೂ ಇವು ಸಮಾಜದಲ್ಲಿ ಇದ್ದೆ ಇವೆ. ಇವುಗಳನ್ನು ನಿಯಂತ್ರಿಸಬೇಕಾದರೆ ಮಗುವಿದ್ದಾಗಲೇ ಸಾಹಿತ್ತಿಕ ಸಂಸ್ಕಾರ ಕೊಡಬೇಕು. ಸತ್ಯದ ಬಗ್ಗೆ ಒಲವು ಮೂಡಿಸಬೇಕು ಇದೆಲ್ಲಕ್ಕಿಂತ ಮುಖ್ಯವಾಗಿ ಮಗುವಿನ ಹೃದಯಲ್ಲಿ ಸಾಹಿತ್ಯ ಪ್ರವೆಶವಾಗಬೇಕು.
ಗೋವಿನ ಹಾಡಿನ ನಾಲ್ಕು ಸಾಲುಗಳು
ಸತ್ಯವೆ ನಮ್ಮ ತಂದೆ ತಾಯಿ
ಸತ್ಯವೆ ನಮ್ಮ ಬಂದು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.
ಸತ್ಯದ ಬಗ್ಗೆ ಇಷ್ಟು ಸರಳವಾಗಿ ಹೇಳಿದ್ದುದನ್ನು ನಾನಂತೂ ಎಲ್ಲಿಯೂ ಕೇಳಿಲ್ಲ ಇದು ಜನಪದ ಸಾಹಿತ್ಯದ ಶಕ್ತಿಯನ್ನು ತೋರಿಸುತ್ತದೆ. ಇದು ಯಾವ ವಿಶ್ವವಿದ್ಯಾಲಯದ ಜ್ಞಾನಕ್ಕೆ ಕಡಿಮೆಯಾಗಿದೆ ? ಇದೆ ಅಲ್ಲವೆ ಜಾನಪದದ ವೈಶಿಷ್ಟ್ಯ. ಇಂಥ ಸಾಹಿತ್ಯ ಮಕ್ಕಳ ಸಾಹಿತ್ಯಕ್ಕೆ ಶಕ್ತಿ ತುಂಬಿದೆ.
ಒಟ್ಟಾರೆ ಹೇಳುವುದಾದರೆ ಮಕ್ಕಳ ಸಾಹಿತ್ಯ ಜನಸಾಮಾನ್ಯರ ಹೃದಯವನ್ನು ಪ್ರವೇಶಿಸುವಂತಹದ್ದು ಸಮಾಜ ಪರಿವರ್ತನೆಯಲ್ಲಿ ಸಾಹಿತ್ಯ ನಿರಂತರ ಪ್ರಯತ್ನಿಸುತ್ತದೆ. ಮಕ್ಕಳ ಸಾಹಿತ್ಯ ಜನಮನದ ಸಾಹಿತ್ಯವಾಗಿದ್ದುದು ಇತಿಹಾಸದಿಂದ ನಮಗೆ ತಿಳಿಯುತ್ತದೆ. ಜನಸಾಮಾನ್ಯರ ದಾರಿ ದೀಪವಾಗಿ ಮಕ್ಕಳ ಸಾಹಿತ್ಯ ನಮ್ಮ ನಡುವೆ ಇಂದಿಗೂ ಇದೆ ಮುಂದೆಯು ಇರುತ್ತದೆ.

ಲೇಖನ- ಜಗದೀಶ ಹದ್ಲಿ ತಿಮ್ಮಾಪೂರ
ಮೊ. 9900895218 ವಾಟ್ಸಾಪ್ ನಂ : 9611761979

Comments