UK Suddi
The news is by your side.

ಈ ಚೆಂದದ ಹೃದಯದಲಿ ನಿನ್ನದೇನೆ ಚಟುವಟಿಕೆ.

ಲೇಖನ:ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

ಹೇ ಹೃದಯದ ಹೃದಯವೇ!
ನಾನು ನೀನು ಜೊತೆಯಲ್ಲಿರಬೇಕು ಅಂತ ಆ ಬ್ರಹ್ಮ ಬರೆದಿರುವನೋ ಇಲ್ವೋ ಗೊತ್ತಿಲ್ಲ.ಅದೇನಾದರೂ ಆಗಲಿ ನನ್ನೆದೆಯಲ್ಲಿ ನಿನಗಾಗಿಯೇ ಅಂತ ಬಚ್ಚಿಟ್ಟಿರುವ ಬೆಚ್ಚನೆಯ ಪ್ರೀತಿಯನ್ನು ಜೀವವಿರುವವರೆಗೂ ಹಂಚಿಕೊಳ್ಳಬೇಕೆಂದು ಬಯಸುತಿದೆ ಈ ಜೀವ.ನೀ ಸನಿಹವಿದ್ದರೆ ಅದೇ ಸ್ವರ್ಗ.ನನ್ನ ಉಸಿರಿಗಿಂತ ಹೆಚ್ಚು ನಿನ್ನ ಪ್ರೀತಿಸ್ತಿನಿ ಕಣೆ.ನನ್ನ ನಿನ್ನ ಹೆಸರು ಇತಿಹಾಸದಲ್ಲಿ ದಾಖಲಾಗಲಿ ಹಾಗೆ ನಿನ್ನೊಲವಿನಲಿ ಮುಳುಗಿ ಬಿಡುವೆ. ಮೆತ್ತನೆಯ ನಿನ್ನೆದೆಯ ಮೇಲೊರಗಿ ಕರಗಿ ಬಿಡುವೆ. ನಿನ್ನದೇ ಕನಸು ಕಂಗಳಲ್ಲಿ ತುಂಬಿ ದಿನ ರಾತ್ರಿ ನವಿರಾಗಿ ಕಾಡುತಿರುವೆ.ನನ್ನ ಹೃದಯದಲ್ಲಿಯೇ ಅವಿತುಕೊಂಡಿದ್ದರೂ ಎದುರಿಗೆ ಬರದೇ ಕಾಡುತಿರುವೆ. ಪ್ರೀತ್ಸೋಕೆ ಇಂಥದೇ ಋತುಮಾನ ಬೇಕಿಲ್ಲ ಗೆಳತಿ.ನನ್ನೀ ಮೈ ಮನ ಪ್ರೀತಿಗೆ ಸದಾ ಸಿದ್ಧವಾಗಿಯೇ ಇದೆ.ನಿನ್ನ ಬರುವಿಕೆಗಾಗಿ ಚೆಲುವಾದ ತಯಾರಿ ನಡೆಸಿದೆ.ಸಮ್ಮಿಲನದ ಕ್ಷಣ ನೆನೆದು ಮನಸ್ಸು ಒಳಗೊಳಗೆ ಖುಷಿ ಪಡುತಿದೆ.ನಗು ನಗುತ ನನ್ನೆಡೆ ನೋಡುತ ಒಂದೇ ಒಂದು ಮಾತು ಆಡಿದ ಆ ಕ್ಷಣ ಮರೆಯುವುದಾದರೂ ಹೇಗೆ ಚಿನ್ನ. ಅದೇ ಚೆಂದದ ನೋಟವನ್ನು ಸದಾ ಕನವರಿಸುತ್ತದೆ ಮನಸ್ಸು.ನೀ ಜೊತೆಗಿದ್ದರೆ ಸಾಕು ಈ ಜೀವಕೆ ಜಗವನೇ ಗೆದ್ದಿರುವ ಭಾವ.

ಅಂಗೈಯಲ್ಲಿ ಬೆರಳಿಂದ ಗೀರುತ ಇನ್ನೊಮ್ಮೆ ಅಂಥ ನೋಟವನು ದಯವಿಟ್ಟು ದಯಪಾಲಿಸು ರಾಣಿ. ಅಪರೂಪದ ನಿನ್ನ ರೂಪ ಇರಳೆಲ್ಲ ಕಣ್ರೆಪ್ಪೆ ಅಂಟದಂತೆ ಮಾಡುತ್ತಿದೆ.ಹಾಯಾದ ಸಂಜೆಯಲ್ಲಿ ಬೀಸುವ ತಂಗಾಳಿಗೆ ಬಟ್ಟಲು ಕಂಗಳ ಚೆಲುವಿಯ ಹೋಳಿಗೆಯಂಥ ಮೈಗೆಲ್ಲ ಲೆಕ್ಕ ಹಾಕದೇ ಸವಿ ಮುತ್ತುಗಳ ನೀಡುವ ಆಸೆ ಹೆಚ್ಚಾಗುತಿದೆ.ನೀಳ ತೋಳುಗಳನ್ನು ಬಿಗಿದಪ್ಪಿ ನಿನ್ನ ಸುಂದರ ಗಾಬರಿ ನೋಡಿ ಖುಷಿ ಪಡುವಾಸೆ.ನಾ ನಿನ್ನ ಬಿಟ್ಟಿರಲಾರೆ. ನೀನೇ ನನ್ನ ಜೀವ ಕಣೋ ಎಂದು ನೀ ಪಿಸುಗುಡುವುದನ್ನು ಕೇಳುವಾಸೆ.ಮರೆ ಮಾಚಿದ ಆಸೆಗಳನು ಸಾವಿರದ ಸಾವಿರ ಕನಸುಗಳನು ಒಂದೊಂದೇ ನಿನ್ನ ಮುಂದಿಟ್ಟು ಪೂರೈಸಿಕೊಳ್ಳುವಾಸೆ.ಹೂ ಮಂಚದಲ್ಲಿ ಮೆಲ್ಲ ಮೆಲ್ಲನೇ ಮುತ್ತಿನ ತೇರಿನಲ್ಲಿ ಮೆರೆಯುವ ಹಾಗಾಗಿದೆ.ಹೇಳು ಗೆಳತಿ ನಿನಗೂ ಹೀಗೆ ಆಗಿದೆಯಾ?

ಯಾರೂ ಕದಿಯದ ಈ ಹೃದಯ ಕಣ್ಣು ಮುಚ್ಚಿ ತೆರೆಯುವುದರಲ್ಲಿ ದೋಚಿ ಹೋದವಳು ನೀನು. ನನ್ನಾಸೆಗಳೆಲ್ಲವನ್ನೂ ನಿನ್ನ ಪಾಲಿಗೆ ಬರೆಸಿಕೊಂಡಿರುವೆ.ಅದೇನು ಮೋಡಿ ಮಾಡಿದೆಯೋ ಹಾಡಿ,ಕಾಡಿ,ಬೇಡಿ ನಿನ್ನ ಒಲವಿನ ಅಂಗಳದಲ್ಲಿ ಬಿದ್ದೆ.ಆ ಸಮಯ ನಿಜಕ್ಕೂ ಸವಿ ಸವಿಯಾಗಿತ್ತು.ಒಲವಿರುವ ಚೆಲುವಿರುವ ಜಗವೆಲ್ಲ ನಮ್ಮದೇ ಎಂದೆನಿಸಿತ್ತು.ತೇಲುವ ಮೋಡಗಳು ನಮ್ಮ ನೋಡಿ ಬೆಳ್ಳನೆಯ ನಗೆ ಸೂಸಿದಂತಿತ್ತು. ಎದೆಗೂಡಿನಲ್ಲಿ ಪ್ರೀತಿಯ ಪುಟ್ಟ ಹಕ್ಕಿ ರೆಕ್ಕೆ ಬಿಚ್ಚದಂತಿತ್ತು.ಹೃದಯದಿ ಮೂಡಿದ ನಿನ್ನೊಲವಿನ ನಿನಾದ ಮೆಲ್ಲುಸಿರಿನಲ್ಲಿ ಬೆರೆತಂತಿತ್ತು.ನಿನ್ನ ಅಂದ ಚೆಂದವ ಕಂಡು ಅದರಗಳು ತೊದಲಿದವು. ಸರಸದಲ್ಲಿ ಸತಾಯಿಸಲು ಹವಣಿಸಿದವು ಮೈ ಮನಗಳು.ನೀನಿಲ್ಲದೇ ಬಯಕೆಗಳು ಈಗ ಬಳಲುತಿವೆ. ಎಂದೋ ಬಿದ್ದ ಒಲವಿನಲ್ಲಿ ಇಂದಿಗೂ ಕೂಡ ಹಾಯಾಗಿ ನರಳುತಿರುವೆ.ಎದೆಯಲ್ಲಿ ಹಾಯಾದ ಒಲವ ಇಳಿಸಿ,ಹೀಗೆ ದೂರಾದರೆ ಈ ಬಡಪಾಯಿ ಜೀವ ಬಾಳುವುದಾದರೂ ಹೇಗೆ ಹೇಳು ಸುಮತಿ? ಕಣ್ಮುಚ್ಚಿದರೂ ನೀನೇ ಕಣ್ತೆರೆದರೂ ನೀನೆ. ನೀ ಸಿಗುವ ಮುನ್ನ ಎಂದೂ ಯಾರೂ ನನ್ನನ್ನು ಹೀಗೆ ಕಾಡಿರಲಿಲ್ಲ.ಗೊತ್ತೆ ನಿನಗೆ? ನನ್ನ ಖುಷಿಗಳಿಗೆಲ್ಲ ನಿನ್ನ ಮನೆಯ ವಿಳಾಸ ನೀಡಿರುವೆ.
ಮಾತಿನ ಕಾರಂಜಿಯಂತಿರುವ ನಿನ್ನಿಂದ ಮಾತಿಲ್ಲ ಕತೆ ಇಲ್ಲ.ಮೈಸೂರ ಮಲ್ಲಿಗೆ ನಿನಗಿಷ್ಟವೆಂದು ತಿಳಿದು ತಂದೆ.ರಾಜಿ ಮಾಡಲು ನೋಡಿದೆ. ನಗುತ್ತಿದ್ದ ಮಲ್ಲಿಗೆ ಮಾಲೆ ಮುಡಿಯದೇ ಬಾಡಿಸಿದೆ.ಬಿರಿದ ಮಲ್ಲೆಯಂತಿದ್ದ ನಿನ್ನ ಮೊಗವೂ ಬಾಡಿದೆ.ಅದಕ್ಕೆಲ್ಲ ಕಾರಣ ನನ್ನ ಅವಸರ ಎಂದು ನನಗೀಗ ಗೊತ್ತಾಗಿದೆ.ಓದುವ ಸಮಯದಲ್ಲಿ ಓದು ನಂತರ ಕಾಯಿಸಿ ಕಾಯಿಸಿ ಪ್ರೀತಿಯಲ್ಲಿ ಸತಾಯಿಸಿ ಹಸೆ ಮಣೆ ಏರೋಣ ಎಂಬ ನಿನ್ನ ಮಾತಿಗೆ ಒಪ್ಪಿಗೆ ಹಾಕದೇ ನಿನ್ನ ತೋಳಿಗೆ ಕೈ ಹಾಕಿದ್ದು ನಿಜವಾಗಲೂ ತಪ್ಪು ಅಂತ ಅರಿಯೋಕೆ ಬಹಳ ಹೊತ್ತು ಹಿಡಿಯಲಿಲ್ಲ.‘ನಿನ್ನದೇನೂ ಸಿರಿವಂತರ ಕುಟುಂಬವೇನಲ್ಲ.ಮನೆಗೊಬ್ಬನೇ ಮಗನಾಗಿದ್ದರೂ ಸಹೋದರಿಯರ ಮದುವೆ ಜವಾಬ್ದಾರಿ ನಿನ್ನ ಮೇಲಿದೆ ನನ್ನೊಲವಿನಲ್ಲಿ ಬಿದ್ದು ಹೆತ್ತವರ ಕನಸು ನುಚ್ಚು ನೂರಾಗದಿರಲಿ.’ ಎಂಬ ಮಹದಾಸೆ ನಿನ್ನದು.ಬಹಳ ದಿನದ ಪರಿಚಯ ಮನದಲ್ಲೇ ಪ್ರೀತಿಯ ಮರಿ ಹಾಕಿತ್ತು.ಬಸ್ ಮೆಟ್ಟಿಲು ಏರುವಾಗ ಆಕಸ್ಮಿಕವಾಗಿ ಕೈ ತಾಗಿ ಮೈ ಬಿಸಿ ಏರಿಸಿತ್ತು. ಕಣ್ಣಿನಲ್ಲೇ ಕರೆಯುತ್ತ ನಿನ್ನ ಕೈಗಳನು ಬಲವಾಗಿ ಹಿಡಿದೆ. ‘ಆಗಲೇ ಬೇಡ ದೂರ ಇನ್ನೆಂದೂ.’ ಎಂದು ಹಾಡಿದೆ. ನಾಚಿ ನೀರಾದ ನೀನು ಬಸ್ಸಿನ ಸೀಟಿನಂಚಿಗೆ ಸರಿದು ಕುಳಿತೆ. ‘ನೀನಂದ್ರೆ ನನಗೂ ಇಷ್ಟ ಕಣೋ.’ ಆದ್ರೆ ಈಗ ಹೀಗೆ ಪ್ರೀತಿಯಲ್ಲಿ ಬೀಳಲು ಸಕಾಲ ಅಲ್ಲ. ಪ್ರೀತಿ ಪ್ರೇಮ ಪ್ರಣಯಕೆ ನಾವಿನ್ನೂ ಎಳಸುಗಳು.ಕಲಿಯುವ ಸಮಯದಲ್ಲಿ ಕಾಲು ಜಾರಿ ಬಾಳನು ಮಣ್ಣಿನ ಪಾಲಾಗಿಸೋದು ಬೇಡ. ಅದಲ್ಲದೇ ನಿನ್ನ ನಂಬಿದ ಜೀವಗಳಿಗೆ ನೋಯಿಸಬೇಡ. ನಿನ್ನ ಜವಾಬ್ದಾರಿ ಮೂಟೆಯ ಸವೆಸು. ಅಷ್ಟೊತ್ತಿಗೆ ಪ್ರಣಯ ಜನಿಸುತ್ತದೆ. ಮಿಲನ ಮಹೋತ್ಸವಕೆ ಈ ಹೃದಯ ಕಾದಿರುತ್ತೆ ಕಣೋ. ಜೊತೆÉ ಜೊತೆಗೆ ಬೆರಳು ಬೆಸೆಯುವ ಸಮಯ ಕೂಡಿ ಬಂದ ಮೇಲೆ ನಿನ್ನವಳಾಗುವೆ. ನಿನ್ನ ಪದಕೋಶದಲ್ಲಿ ವಿರಹ ಎನ್ನುವ ಪದ ಅಳಿಸಿ ಹಾಕುವೆ. ನಿನ್ನೆಲ್ಲ ಏಕಾಂತಕೆ ಪೂರ್ಣ ವಿರಾಮ ಇಡುವೆ ಪ್ರಾಣ ಕಾಂತ. ಎಂದು ಕೆನ್ನೆ ಹಿಂಡಿ ಕೈ ಬೀಸಿ ಹೋದೆ.

ನಿಜಕ್ಕೂ ನೀ ನನ್ನ ಕಣ್ತೆರೆಸಿದೆ ಪ್ರೇಮ ದೇವತೆ. ದೂರದಲ್ಲಿ ಇದ್ದುಕೊಂಡು ಇಷ್ಟೊಂದು ಒಲವನ್ನು ನೀಡಿದೆ. ಬಾಯಾರಿ ನಿಂತ ಹೃದಯಕೆ ದಾಹ ತೀರಿಸಿಕೊಳ್ಳುವ ಸ್ಪೂರ್ತಿ ನೀಡಿದೆ. ಬಿಕ್ಕಿ ಅಳುವ ಕುಟುಂಬಕೆ ಹೊಣೆ ಹೊರುವ ಮಗನ ನೀಡಿದೆ. ನೀ ಹೇಳಿದಂತೆ ನಾನೀಗ ನನ್ನ ಹೆತ್ತವರ ಹೆಮ್ಮೆಯ ಸುಪುತ್ರ., ಸಹೋದರಿಯರ ಮಕ್ಕಳ ಪಾಲಿನ ಮುದ್ದಿನ ಮಾವ. ಈಗಲಾದರೂ ನನ್ನೊಲವ ಒಪ್ಪಿ ಅಪ್ಪಿಕೊಳ್ಳಲಾರೆಯಾ? ಈ ಚೆಂದದ ಹೃದಯದಲಿ ನಡಿದಿದೆ ನಿನ್ನದೇನೆ ಚಟುವಟಿಕೆ. ತೆರೆದ ಹೃದಯದಿ ನಿನ್ನ ಸಮ್ಮೋಹದ ಸರಸ ಸಲ್ಲಾಪಕೆ ಕಾದಿದೆ ತನು ಮನ ಗೆಳತಿ. ಯೌವ್ವನದ ವಸಂತದ ವೈಯ್ಯಾರದಲ್ಲಿ ನಿನ್ನೊಲವಿನ ಕಚಗುಳಿಗೆ ಕಾದಿರುವೆ ಪ್ರಾಣ ಕಾಂತೆ. ಸತಾಯಿಸದಿರು ಬೇಗ ಬಂದು ಒಲವಲಿ ಉಪಚರಿಸು.

ಇತಿ ನಿನ್ನ ಹೃದಯದ
ಹೃದಯ ಶಿವ

Comments