UK Suddi
The news is by your side.

ಕನ್ನಡ ಜಾನಪದ ಸಾಹಿತ್ಯಕ್ಕೆ ಬೈಲಹೊಂಗಲ ತಾಲೂಕಿನ ಕೊಡುಗೆ ಅಪಾರ: ಡಾ: ಎಸ್.ಎಸ್ ಅಂಗಡಿ

ಕನ್ನಡ ಸಾಹಿತ್ಯ ಸಮ್ಮೇಳನದ ಚಿಂತನಗೋಷ್ಠಿಯಲ್ಲಿ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ: ಅಂಗಡಿ ಮಾತನಾಡಿದರು.

ಬೈಲಹೊಂಗಲ: ಕನ್ನಡ ನಾಡು,ನುಡಿ, ನೆಲ-ಜಲ ಭಾಷೆ ಬಗ್ಗೆ ಇಂದಿನ ಯುವ ಪೀಳಿಗೆ ಭಾಷಾಭಿಮಾನ ಮೈಗೂಡಿಸಿಕೊಂಡು, ಸಂಸ್ಕೃತಿ, ಸಾಹಿತ್ಯ, ಪರಂಪರೆ ಕುರಿತು ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಅತ್ಯವಶ್ಯವಾಗಿದೆ ಎಂದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ: ಎಸ್.ಎಸ್.ಅಂಗಡಿ ಹೇಳಿದರು.

ಅವರು ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಚಿಂತನಗೋಷ್ಠಿಯಲ್ಲಿ ನಾಡು ನುಡಿಗೆ ಬೈಲಹೊಂಗಲ ತಾಲೂಕಿನ ಕೊಡುಗೆ ಕುರಿತು ಮಾತನಾಡಿ, ಕನ್ನಡ ನಾಡು, ನುಡಿಗೆ ಬೈಲಹೊಂಗಲ ತಾಲೂಕಿನ ಕೊಡುಗೆ ಅಪಾರವಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿರುವ ಜನಪದ, ಶ್ರೀಕೃಷ್ಣಪಾರಿಜಾತ, ತಾಳಮದಲೇ ಮೊದಲಾದ ಕಲಾವಿದರುಗಳು ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.

ಶಿಕ್ಷಕ ಡಾ.ಗಜಾನಂದ ಸೊಗಲನ್ನವರ ಸರ್ಕಾರಿ ಶಾಲೆಗಳ ಸಬಲೀಕರಣ, ಗುಣಾತ್ಮಕ ಶಿಕ್ಷಕ ಕುರಿತು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಜ್ಞಾನಮಟ್ಟ ಹೆಚ್ಚಿಸಲು ಶಿಕ್ಷಕರು ಉತ್ತಮ ಬೋಧನೆ, ಬೋಧನಾ ಮಾದ್ಯಮ ಅಳವಡಿಸಿಕೊಳ್ಳುವದು ಅವಶ್ಯವಾಗಿದೆ. ಕನ್ನಡ ಪ್ರಾಥಮಿಕ ಶಾಲೆಗಳು ಬೌತಿಕ, ಯಾಂತ್ರಿಕ ಸೌಲಭ್ಯಗಳ ಕೊರತೆಯಿಂದ ನರಳುತ್ತಿವೆ. ಸರ್ಕಾರ ಅವುಗಳ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಬೆಳಗಾವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನಿರ್ಮಲಾ ಬಟ್ಟಲ ಸಾಹಿತ್ಯ, ಸಂಸ್ಕೃತಿಯ ಪರಂಪರೆಯಲ್ಲಿ ಬೈಲಹೊಂಗಲ ತಾಲೂಕಿನ ಮಹಿಳೆಯರ ಪಾತ್ರ ಕುರಿತು ಮಾತನಾಡಿ, ನಾಡಿನಲ್ಲಿ ಸಾಹಿತಿಕವಾಗಿ ಮಹಿಳೆಯರು ಅಪಾರ ಕೊಡುಗೆ ನೀಡಿದ್ದಾರೆ. ಗೌರಾದೇವಿ ತಾಳಿಕೋಟಿಮಠ, ಗೌರಿ ಕರ್ಕಿ, ಅನ್ನಪೂರ್ಣಾ ಕನೋಜ, ಪ್ರೇಮಾ ಅಂಗಡಿ, ಗಿರಿಜಾ ಬೆಳವನಕಿ ಮಹಿಳಾ ಸಾಹಿತಿಗಳಾಗಿ ಸಾಹಿತ್ಯ ರಚನೆ ಮಾಡಿದ್ದಾರೆ. ಜಿಲ್ಲ್ಲೆಯ ಪ್ರಥಮ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಸಾಹಿತ್ಯದ ಅಳಿವು, ಉಳಿವಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದರು. ಶಿಕ್ಷಕ ಎಸ್.ಎಂ.ತಿರಕನ್ನವರ ಸಮಗ್ರ ಕೃಷಿ ಕುರಿತು ವಿವರಿಸಿದರು.

ಪ್ರಾಚಾರ್ಯ ಡಾ.ಎಂ.ಬಿ.ತಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬಸವರಾಜ ಪುರಾಣಿಕಮಠ ಆಶಯ ನುಡಿ ಮಂಡಿಸಿದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ನಿವೃತ್ತ ಪ್ರೊ.ಸಿ.ವಿ.ಜ್ಯೋತಿ, ಜಿ.ಎಸ್.ಸಾಲಿಮಠ, ಮಹಾಂತೇಶ ಹಾದಿಮನಿ, ಶ್ರೀಕಾಂತ ಯರಡ್ಡಿ, ಸಂಜೀವಕುಮಾರ ಖಂಡ್ರೆ ಇದ್ದರು. ಪ್ರೇಮಾ ಅಂಗಡಿ ಸ್ವಾಗತಿಸಿದರು. ಎಂ.ಎಸ್. ಹುದಲಿ ನಿರೂಪಿಸಿದರು. ಜಗದೀಶ ಸಂಕಪ್ಪನವರ ವಂದಿಸಿದರು.

ವರದಿ: ಚಿದಂಬರ ಕುರುಬರ

Comments