UK Suddi
The news is by your side.

ಬಿಜೆಪಿ ವಿರುದ್ಧ ಹರಿಹಾಯ್ದ ಮುದ್ದೇಬಿಹಾಳ ಜೆಡಿಎಸ್ ಜಿಲ್ಲಾಧ್ಯಕ್ಷೆ ವಿದ್ಯಾ ಪಾಟೀಲ.

ಮುದ್ದೇಬಿಹಾಳ: ಗುರುಮಿಟ್ಕಲ್‍ನ ಜೆಡಿಎಸ್ ಶಾಸಕ ನಾಗನಗೌಡರು ರಡ್ಡಿ ಸಮಾಜಕ್ಕೆ ಸೇರಿದವರಾಗಿದ್ದಾರೆ. ರೆಡ್ಡಿ ಸಮಾಜದವರಿಗೆ ಹಣದ ಆಮೀಷ ತೋರಿಸಿ ಬಿಜೆಪಿಯವರು ಕೊಂಡುಕೊಳ್ಳಲು ನಡೆಸುತ್ತಿರುವ ಪ್ರಯತ್ನ ಕೈಗೂಡುವುದಿಲ್ಲ. ಏಕೆಂದರೆ ರೆಡ್ಡಿ ಸಮಾಜದವರು ಯಾರದೇ ಆಸೆ, ಆಮೀಷಗಳಿಗೆ ಬಲಿಯಾಗುವವರಲ್ಲ ಎಂದು ರಡ್ಡಿ ಸಮಾಜದ ಮಹಿಳಾ ಧುರೀಣೆ, ವಿಜಯಪುರ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಪಾಟೀಲ ಹೇಳಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಎಷ್ಟೇ ಪ್ರಯತ್ನಪಟ್ಟರೂ ಆಪರೇಷನ್ ಕಮಲ ಯಶಸ್ವಿಯಾಗೊಲ್ಲ, ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ ಅವರು ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ಮಗ ವಿಜಯೇಂದ್ರ ಜೊತೆಗೂಡಿ ದೇವದುರ್ಗದ ಬಳಿ ದೇವರ ದರ್ಶನಕ್ಕೆಂದು ಬಂದು ಶಾಸಕ ನಾಗನಗೌಡರ ಮಗ ಶರಣಗೌಡರನ್ನು ಕರೆಸಿಕೊಂಡು ಆ ಶಾಸಕರನ್ನು ಖರೀದಿಸುವ ಷಡ್ಯಂತ್ರ ನಡೆಸಿದ್ದಾರೆ. ನಾಗನಗೌಡರು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬದ ಒಂದು ಭಾಗದಂತಿದ್ದಾರೆ ಎನ್ನುವುದನ್ನು ಯಡಿಯೂರಪ್ಪ ಮರೆತಂತಿದೆ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ಉಂಡ ಮನೆಯ ಜಂತಿ ಎಣಿಸೋ ಪದ್ಧತಿ ಇದೆ. ರಡ್ಡಿಗಳನ್ನು ಕೊಂಡುಕೊಳ್ಳುವುದು ಅಷ್ಟು ಸುಲಭ ಅಲ್ಲ. ಯಡಿಯೂರಪ್ಪರು ವಿಧಾನಸಭೆಯ ಸಭಾಪತಿ ಅವರನ್ನೇ ರು.50 ಕೋಟಿಗೆ ಕೊಂಡುಕೊಳ್ಳಲು ಮುಂದಾಗಿರುವುದು, ಜಡ್ಜಗಳನ್ನು ಮ್ಯಾನೇಜ್ ಮಾಡುವುದಾಗಿ ಹೇಳಿದ್ದು ಎಲ್ಲವೂ ಜನತೆಗೆ ಆಘಾತ ತಂದೊಡ್ಡಿದೆ. ಇಂಥವರನ್ನು ಆಯ್ಕೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳುವಂತಾಗಿದೆ. ಅಪ್ಪ ಮಗ ಸೇರಿ ಸೇರಿ ಸಂಚು ನಡೆಸಿ ಹಿಂಬಾಗಿಲಿಂದ ಅಧಿಕಾರ ಹಿಡಿಯಲು ನಡೆಸುತ್ತಿರುವ ಪ್ರಯತ್ನ ಯಶಸ್ಸು ಕಾಣುವುದಿಲ್ಲ ಎಂದರು.

ಯಡಿಯೂರಪ್ಪಗೆ ನಾಚಿಕೆ ಇಲ್ಲ ಅಂತೆಯೇ ತಮ್ಮ ಮಗನನ್ನೂ ಹಾಗೆಯೇ ಬೆಳೆಸಿದ್ದಾರೆ ಎಂದು ಹರಿಹಾಯ್ದ ಅವರು ಮುಂದಿನ ದಿನಗಳಲ್ಲಿ ರಾಜ್ಯದ ಆರೂವರೆ ಕೋಟಿ ಜನತೆ ಇಂಥವರಿಂದ ದೂರ ಇರಬೇಕು. ಉತ್ತಮ ಜನಪರ ಬಜೆಟ್ ಮಂಡಿಸಿರುವ ಕುಮಾರಸ್ವಾಮಿ ಮತ್ತು ಜೆಡಿಎಸ್ ಬೆಂಬಲಿಸಬೇಕು ಎಂದು ಕೋರಿದರು. ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಕೌಸರಬಾನು ಬಿದರಕುಂದಿ, ಜಿಲ್ಲಾ ಉಪಾಧ್ಯಕ್ಷೆ ಅನ್ನಪುರ್ಣ ಹೊಟಗಾರ ಮತ್ತಿತರರು ಇದ್ದರು.