UK Suddi
The news is by your side.

ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದ ನಟ ಶಿವರಾಜ್‌ ಕುಮಾರ್

ತುಮಕೂರು: ನಗರದ ಸಿದ್ದಗಂಗಾ ಮಠಕ್ಕೆ ಖ್ಯಾತ ಚಿತ್ರನಟ ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಭೇಟಿ ನೀಡಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ನಡೆದಾಡುವ ದೇವರಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ನಿಸ್ವಾರ್ಥ ಸೇವೆಯನ್ನು ಯಾರೂ ಮೀರಿಸಲಾಗದು. ಶ್ರೀಮಠದ ಮಕ್ಕಳು, ಕಲ್ಲು ಬಂಡೆಗಳು, ಬೆಟ್ಟ ಸೇರಿದಂತೆ ಎಲ್ಲ ರೂಪದಲ್ಲಿ ಶ್ರೀಗಳನ್ನು ಕಾಣಬಹುದಾಗಿದೆ ಎಂದರು.

ಮನುಕುಲದ ಉದ್ಧಾರಕ್ಕೆ ಶ್ರೀಗಳು ಸಲ್ಲಿಸಿರುವ ಸೇವೆ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನ್ನಲ್ಲ. ಶ್ರೀಗಳ ಹೆಸರಲ್ಲೇ ಒಂದು ದೊಡ್ಡ ಶಕ್ತಿ ಇದೆ. ಇಂಥಹ ಮಹಾನ್ ಪುರುಷರ ನಡೆ, ನುಡಿ, ಸೇವಾ ಮನೋಭಾದಿಂದಲ್ಲೇ ಸಮಾಜದಲ್ಲಿ ಉತ್ತಮ ಮಳೆ, ಬೆಳೆಯಾಗುತ್ತಿದೆ ಎಂದರು.

ಶ್ರೀಗಳ ಲಿಂಗೈಕ್ಯರಾದಾಗ ನಾನು ಯುಎಸ್‌ಎಯಲ್ಲಿದ್ದೆ. ಶ್ರೀಗಳ ಲಿಂಗೈಕ್ಯ ಸುದ್ದಿ ಕೇಳಿ ತುಂಬಾ ನೋವಾಯಿತು. ಇನ್ನು ಹತ್ತಾರು ವರ್ಷಗಳ ಕಾಲ ಶ್ರೀಗಳ ಮಾರ್ಗದರ್ಶನ, ಆಶೀರ್ವಾದ ನಮಗೆ ಅಗತ್ಯವಿತ್ತು ಎಂದು ಹೇಳಿದರು.

ಈ ಹಿಂದೆ ಟಗರು ಸಿನಿಮಾ ಚಿತ್ರೀಕರಣದ ವೇಳೆ ಶ್ರೀಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದ ಸಂದರ್ಭವನ್ನು ಎಂದೂ ಮರೆಯಲಾಗದು ಎಂದು ಅವರು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಚಿತ್ರನಟ ಗುರುದತ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಕಿರುತೆರೆ ನಟ ದಯಾನಂದ ಸಾಗರ್, ಜಿಲ್ಲಾ ವಿಷ್ಣು ಸೇನಾ ಸಮಿತಿಯ ಸ್ವಾಧೀನ್‌ಕುಮಾರ್, ಶಿವಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಕುಣಿಗಲ್ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

Comments