UK Suddi
The news is by your side.

ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟರ ನಾಲ್ಕು ಕೃತಿಗಳ ಲೋಕಾರ್ಪಣೆ.

ಬಾಗಲಕೋಟೆ: ‘ನನ್ನೊಳಗಿನ ಮನುಷ್ಯ
ನನ್ನು ಗುರುತಿಸಿ ಅವನನ್ನು ಮಾನವಂತ
ನಾಗಿ ಮಾಡಿದ ಶ್ರೇಯದಲ್ಲಿ ಒಂದು ಪಾಲು ಕಾವ್ಯಕ್ಕೆ ಸಂದರೆ, ಮತ್ತೊಂದು ಪಾಲು ಹಿರಿಯ ರಾಜಕಾರಣಿ ಎಸ್.ಆರ್.ಪಾಟೀಲರಿಗೆ ಸಲ್ಲುತ್ತದೆ’ ಎಂದು ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ ಹೇಳಿದರು.

ನಗರದಲ್ಲಿ ಮಂಗಳವಾರ ತಮ್ಮ ನಾಲ್ಕು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ‍ಮಾತನಾಡಿದ ಅವರು, ‘ಪಾಟೀಲರು ಜಾತಿ ಮೀರಿದ ಪ್ರೀತಿ ತೋರಿದರು. ನಮ್ಮದು 33 ವರ್ಷಗಳ ಗೆಳೆತನ. ಅವರು ನನ್ನ ಬೆನ್ನ ಹಿಂದಿನ ಬೆಳಕು. ಹಾಗಾಗಿಯೇ ‘ನಾ ಪಟ್ಟ ಪಾಡು ಅದು ನನ್ನ ಹಾಡು’ ಕೃತಿಯನ್ನು ಅವರಿಗೆ ಅರ್ಪಣೆ ಮಾಡಿದ್ದೇನೆ’ ಎಂದು ಭಾವುಕರಾದರು.

ಇಂದು ಪ್ರೀತಿಗೆ ಬರ ಇಲ್ಲ.
ಆದರೆ ಮೌಲ್ಯಗಳಿಗೆ ಬರ ಇದೆ. ಸಮಾಜದ ಋಣ ತೀರಿಸಲು ಈ ಕೆಲಸ ಮಾಡುತ್ತಿದ್ದೇನೆ. ಕವಿ, ಬರಹಗಾರನಿಗೆ ಯಾವುದೇ ಧರ್ಮ, ಜಾತಿ, ಪಕ್ಷ, ಪಂಗಡ ಏನೂ ಇರುವುದಿಲ್ಲ. ಅವನು ಸರ್ವತಂತ್ರ ಸ್ವತಂತ್ರ. ಈ ಎಲ್ಲ ಭಾವನೆಗಳನ್ನೂ ಮೀರಿ ನಿಂತಿದ್ದೇನೆ. ಹಾಗಾಗಿಯೇ ನನಗೆ ಪ್ರೀತಿ ತೋರಿದ ಮತ್ತೊಬ್ಬರಾದ ಶಾಸಕ ವೀರಣ್ಣ ಚರಂತಿಮಠರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ. ಅವರೊಬ್ಬ ಹೃದಯವಂತ ಮನುಷ್ಯ ಎಂದು ಬಣ್ಣಿಸಿದರು.

ದಲಿತರಲ್ಲಿರುವ ದೊಡ್ಡ ಪ್ರಜ್ಞಾವಂತರಲ್ಲೊಬ್ಬರಾಗಿ ಕುರ್ಚಿ ಮೀರಿ ನನ್ನನ್ನು ಪ್ರೀತಿಸಿದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಅವರನ್ನು ಸ್ಮರಿಸುವೆ. ಅವರಿಗೂ ನನ್ನ ಪುಸ್ತಕ ಅರ್ಪಣೆ ಮಾಡಿದ್ದೇನೆ ಎಂದರು.

‘ಆದರ್ಶದ ಸ್ಥಳದಲ್ಲಿ ಇಂದು ಅವ
ಕಾಶವಾದಿಗಳು ನಿಂತಿದ್ದಾರೆ. ಎಲ್ಲೆಲ್ಲೂ ಜಾತಿಯ ಮೇಲಾಟ ಸಾಧಿಸಿದೆ. ಲೇಖನಿ ಕೂಡ ಭ್ರಷ್ಟಗೊಂಡಿದೆ. ಜಾತ್ಯತೀತ ರಾಷ್ಟ್ರವೊಂದರ ದೊಡ್ಡ ದುರಂತ
ವಿದು ಎಂದು ಬೇಸರ ವ್ಯಕ್ತಪಡಿಸಿದ ಪಾತ್ರೋಟ, ‘ಅಧಿಕಾರ, ಅವಕಾಶಗಳು ಇಂದು ರಾಜಧಾನಿ (ಬೆಂಗಳೂರು) ಕೇಂದ್ರಿತವಾಗಿವೆ. ಅವೆಲ್ಲವೂ ವಿಕೇಂದ್ರೀಕರಣಗೊಂಡು ಪ್ರಾದೇಶಿಕ ಹಾಗೂ ಸಾಮಾಜಿಕ ಸಮಾನತೆ ಆದ್ಯತೆಯಾಗಬೇಕಿದೆ’ ಎಂದರು.

ಪಿ.ಎ.ಮೇಘಣ್ಣವರ ಮಾತನಾಡಿ, ‘ಆಧುನಿಕ ಸಾಹಿತ್ಯಕ್ಕೆ ದೇಸಿತನದ ಸೊಗಡು ತುಂಬಿ ಕೃಷ್ಣಾ ತೀರಕ್ಕೆ ಮೆರುಗು ತಂದುಕೊಟ್ಟ ಚಿಂತಕ ಸತ್ಯಾನಂದ ಪಾತ್ರೋಟರು ದಲಿತ–ಬಂಡಾಯ ಸಾಹಿತ್ಯಕ್ಕೂ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಸತ್ವಭರಿತ ಕವನಗಳಲ್ಲಿ ಈ ನಾಡಿನ ತಳಸಮು
ದಾಯದ ಬವಣೆಗಳನ್ನು ವೈಚಾರಿಕವಾಗಿ ಹಂಚಿಕೊಂಡಿದ್ದಾರೆ. ಕಷ್ಟದ ಬದುಕು ಮತ್ತು ಪ್ರಾಮಾಣಿಕತೆಯನ್ನು ಅಕ್ಷರಗಳಲ್ಲಿ ತುಂಬಿದ್ದಾರೆ’ ಎಂದು ಶ್ಲಾಘಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಮಾತನಾಡಿ, ‘ನೀರು, ಭೂಮಿ, ಗಾಳಿ, ಬೆಂಕಿ, ಬೆಳಕಿಗೆ ಜಾತಿ ಇಲ್ಲ. ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ಇಡೀ ದೇಶವೇ ನಲುಗಿ ಹೋಗಿರುವ ಇಂದಿನ ದಿನಗಳಲ್ಲಿ ಪಾತ್ರೋಟರ ಕವನಗಳು ಬೆಳಕಾಗಿ ಕಾಣಸಿಗುತ್ತವೆ. ಶ್ರಮಸಂಸ್ಕೃತಿಯಿಂದ ಬಂದ ಅಸಾಧ್ಯ ಪ್ರತಿಭೆ. ಅವರೊಂದಿಗಿನ ಒಡನಾಟ ನನ್ನೊಳಗೂ ಕವಿ ಹೃದಯ ಒಡಮೂಡಿಸಿತು’ ಎಂದರು.

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಮಾತನಾಡಿದರು. ಪಲ್ಲವಿ ಪಾತ್ರೋಟ ವೇದಿಕೆಯಲ್ಲಿದ್ದರು. ಹಿರಿಯ ವೈದ್ಯ ಡಾ.ಬಿ.ಎಸ್.ಕೆರೂಡಿ, ಬಿ.ವಿ.ವಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ ಇದ್ದರು.

ಜನರ ಭಾವ ಪ್ರಶಸ್ತಿಯೇ ಅದ್ಭುತ

ಸಾನ್ನಿಧ್ಯ ವಹಿಸಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ಕವಿಯನ್ನು ಗೌರವಿಸಿದ ಸಾರ್ಥಕತೆ ಆತ ಬರೆದ ಪುಸ್ತಕಗಳನ್ನು ಮನೆಗೆ ಕೊಂಡೊಯ್ದಾಗ ಪೂರ್ಣಗೊಳ್ಳುತ್ತದೆ. ಜನರ ಭಾವ ಪ್ರಶಸ್ತಿಯೆ ಅದ್ಭುತ’ ಎಂದು ಹೇಳಿದರು.

‘ಸತ್ಯಾನಂದರು ಹೆಸರಿಗೆ ತಕ್ಕಂತೆ ಸತ್ಯ ಅರಿತು ಬರೆಯುವುದರಲ್ಲಿ ಆಸಕ್ತರು. ಕಾವ್ಯ ಅವರಿಗೆ ಬದುಕು ನೀಡಿದೆ. ಹೃದಯವಂತಿಕೆ, ಅವರ ವ್ಯಕ್ತಿತ್ವದ ಹಿರಿಮೆ ಹೆಚ್ಚಿಸಿದೆ. ಗಿಡಕ್ಕೆ ನೀರು ಹಾಕಿ ಅದನ್ನು ರಕ್ಷಣೆ ಮಾಡಲು ರಕ್ಷಕರು ಬೇಕು. ಅದೇ ಪಾತ್ರವನ್ನು ಪಾತ್ರೋಟರ ವಿಚಾರದಲ್ಲಿ ಎಸ್.ಆರ್.ಪಾಟೀಲರು ಮಾಡಿದ್ದಾರೆ’ ಎಂದರು.

ಸಮಾರಂಭದಲ್ಲಿ ಸತ್ಯಾನಂದ ಪಾತ್ರೋಟರ ನಾ ಪಟ್ಟ ಪಾಡು ಅದು ನನ್ನ ಹಾಡು, ಹಂಗಿಲ್ಲದ ಅಂಗಳ, ಹೆಜ್ಜೆಗಳೆಲ್ಲ ಮಾತಾಡಿದಾಗ ಹಾಗೂ ಕಥೆ ಹೇಳಲೇ ಅಜ್ಜ ಕೃತಿಗಳನ್ನು ಪಾಟೀಲ ಪುಟ್ಟಪ್ಪ ಹಾಗೂ ಸಿದ್ದೇಶ್ವರ ಶ್ರೀಗಳು ಬಿಡುಗಡೆ ಮಾಡಿದರು. ಪುಸ್ತಕದ ಸವಿಯೊಂದಿಗೆ ಕೊನೆಗೆ ಹೋಳಿಗೆ ಊಟದ ಸಿಹಿ ಆತಿಥ್ಯವೂ ದೊರೆಯಿತು.

ಕವಿ, ಸಾಹಿತಿ, ಬರಹಗಾರರು ಟೀಕೆ, ಹೊಗಳಿಕೆಗೆ ಪ್ರಭಾವಿತರಾಗಬಾರದು. ಬಡತನ, ಸಿರಿತನದ ಮೇರೆ ಮೀರಿದ ಭಾವ ಬೆಳೆಸಿಕೊಳ್ಳಬೇಕು

ಪಾಟೀಲ ಪುಟ್ಟಪ್ಪ

ಹಿರಿಯ ಪತ್ರಕರ್ತ

Comments