UK Suddi
The news is by your side.

ಮಕ್ಕಳ ಸಾಹಿತ್ಯಕ್ಕೆ ಅಖಂಡ ವಿಜಯಪೂರ ಬಾಗಲಕೋಟಿ ಜಿಲ್ಲೆಯ ಮಕ್ಕಳ ಸಾಹಿತಿಗಳ ಕೋಡುಗೆ ಅಪಾರ:ಸೋಮಲಿಂಗ ಬೇಡರ.

ಬಾಗಲಕೋಟೆ:ಮಕ್ಕಳ ಸಾಹಿತ್ಯ ಸಮಾಗಮ ಬಾಗಲಕೋಟ/ ಜಿಲ್ಲಾ/ತಾಲೂಕ ಘಟಕಬಾಗಲಕೋಟ ಹಾಗೂ ಶಿರೂರ ಗ್ರಾಮದ ವಿವಿಧ ವಿದ್ಯಾಸಂಸ್ಥೆಗಳ ಸಹಬಾಗಿತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲುಕಿನ ಶಿರೂರ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಕಲ್ಯಾನ ಮಂಟಪದಲ್ಲಿ ಕಳೆದ ದಿ 2/2/2019 ರಂದು ಶನಿವಾರ ಜರುಗಿದ ಬಾಗಲಕೋಟೆ ಜಿಲ್ಲಾ 14ನೇ ಮಕ್ಕಳ ಸಾಹಿತ್ಯ ಸಮ್ಮೆಳನ ದ ಸಮಾಧ್ಯಕ್ಷತೆಯನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲುಕಿನ ಅಳ್ಳೂರ ಗ್ರಾಮದ ಬೀಳಗಿ ತಾಲುಕಿನ ಮನ್ನೀಕೇರಿ ಗ್ರಾಮದ ಶಿಕ್ಕಕ ಹಾಗೂ ಮಕ್ಕಳ ಸಾಹಿತಿ ಸೋಮಲಿಂಗ ಬೇಡರ ವಹಿಸಿದ ಅವರ ನಾಡುನುಡಿ ಮಕ್ಕಳ ಸಾಹಿತ್ಯದ ಅವರ ನುಡಿಗಳ ಅಧ್ಯಕ್ಷೀಯ ಭಾಷಣ

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೋ ಸುಂದರ
ನನಗಿದು ಬಯಸದೇ ಬಂದ ಸೌಭಾಗ್ಯ. ಜಿಲ್ಲಾ ಕಾರ್ಯಕಾರಿ ಸಮಿತಿ ಇಂತಹದೊಂದು ನಿರ್ಣಯ ತಿಳಿಸಿದಾಗ ಸಂತೋಷದಿಂದ ಒಪ್ಪಿಕೊಂಡೆ, ಅವರೆಲ್ಲರ ಹೃದಯ ವೈಶಾಲ್ಯತೆಗೆ ನಾನು ಚಿರಋಣಿಯಾಗಿರುವೆ.
ಬಾಗಲಕೋಟ ಜಿಲ್ಲೆಯಲ್ಲಿ ವಿಶಿಷ್ಟ ಗ್ರಾಮವೆನಿಸಿಕೊಂಡ ಶಿರೂರು ಐತಿಹಾಸಿಕ ಮತ್ತು ಪ್ರಾಕೃತಿಕವಾಗಿ ಗಮನ ಸೆಳೆಯುವಂತಿದೆ. ಇಲ್ಲಿಯವರೆಗೆ ಇಲ್ಲಿ ಎಂಟು ಶಾಸನಗಳು ವರದಿಯಾಗಿದ್ದು ಆ ಶಾಸನಗಳಲ್ಲಿ ಸಿರಿಯೂರು, ಶ್ರೀಪುರ ಎಂದು ಉಲ್ಲೇಖಗೊಂಡಿದೆ. ಹಿಂದೆ ಹುನಗುಂದ ಮೂವತ್ತು ಕಂಪಣದಲ್ಲಿತ್ತು. ಈ ಶಾಸನಗಳಲ್ಲಿ ರಾಷ್ಟ್ರಕೂಟ ಕೃಷ್ಣನ ಕಾಲಕ್ಕೆ ಸೇರಿದ ತಾಮ್ರ ಶಾಸನ ಸಿರಿಯೂರ ದೇವಾಲಯಗಳಿಗೆ ದಾನ ನೀಡಿದ ಅಂಶವನ್ನು ದಾಖಲಿಸಿದರೆ, ಒಂದನೆಯ ಸೋಮೇಶ್ವರನ ಕಾಲಕ್ಕೆ ಸೇರಿದ ಮೂರು ಶಾಸನಗಳು ಪುರದ ಸಿದ್ದೇಶ್ವರ ದೇವಾಲಯಕ್ಕೆ ಬಿಟ್ಟ ಭೂದಾನಗಳನ್ನು ದಾಖಲಿಸಿವೆ. ವಿಕ್ರಮಾದಿತ್ಯನ 1100 ನೆಯ ಶಾಸನ, ಜಗದೇಕಮಲ್ಲನ 1148ರ ಶಾಸನ, ಸೇವೂಣರ ಕಾಲಕ್ಕೆ ಸೇರಿದ 1248ರ ಶಾಸನ ಮತ್ತು ಕೆರೆಯ ಬಳಿಯ ಮನೆಯೊಂದರ ಗೋಡೆಯಲ್ಲಿರುವ ವೀರಗಲ್ಲು ಶಾಸನ (ಸುಮಾರು 8ನೆಯ ಶತಮಾನದ ಲಕ್ಷಣಗಳನ್ನು ಹೊಂದಿದೆ). ಇವೆಲ್ಲವುಗಳು ಇಲ್ಲಿನ ಐತಿಹಾಸಿಕ ಸತ್ಯಗಳಿಗೆ ಸಾಕ್ಷಿಯಾಗಿವೆ. ಕೆರೆಯ ದಂಡೆಯ ಮೇಲೊಂದು ಸಿರಿಯಾಳದೇವಿಯ ಚಿಕ್ಕ ಗುಡಿಯಿದೆ ಆ ದೇವಿಯ ಹೆಸರಿನಿಂದ ಸಿರೂರು ಎಂಬ ಹೆಸರು ಬಂದಿದೆ ಎಂದು ಊಹಿಸಲಾಗಿದೆ. ಹೆಸರೇ ಸೂಚಿಸುವಂತೆ ಸಿರಿ ಸಂಪದ್ಭರಿತವಾದ ಸಿರೂರಿಗೆ ಲಿಂ. ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕೃಪಾಶೀರ್ವಾದವಿದೆ. ಕಲೆ, ಸಾಹಿತ್ಯ, ಸಂಸ್ಕøತಿಗಳ ತಾಣ. ಸಾಹಿತಿಗಳು, ಶಿಲ್ಪಕಾರರು, ವೀರಯೋಧರು, ಶಿಕ್ಷಣ ತಜ್ಞರು, ರಂಗಕಲಾವಿದರು ಹಾಗೂ ಜಾನಪದ ಕಲಾವಿದರು. ಈ ಊರಿನ ಸಿರಿ.
ಸಮ್ಮೇಳನದ ಮಹಾದ್ವಾರ ಮತ್ತು ಪ್ರಧಾನ ವೇದಿಕೆಗಳಲ್ಲಿ ಹೆಸರು ರಾರಾಜಿಸುತ್ತಿರುವ ಅಕ್ಷರ ಕಲಿಸಿದ ಅಕ್ಕರೆಯ ಗುರುಗಳಾದ ಲಿಂ. ಶ್ರೀ ವ್ಹಿ. ಎಂ ಪಲ್ಲೇದ, ಲಿಂ. ಶ್ರೀ ಬಿ. ಬಿ ನಡುವಿಮನಿ, ವೈದ್ಯ ಸಾಹಿತಿಗಳಾದ ಡಾ. ವೀರೇಶ ಖೋತ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದೆ ಗುರಮ್ಮ ಸಂಕೀನ ಸಿರಿಯೂರಿನ ಬೇರು ಮಹಾಂತ ನೀಲಪ್ಪ ಗುಲಗಂಜಿ, ಅನುಪಮ ಸೇವಾಜೀವಿ ಡಾ. ಎಸ್. ಎನ್ ಶೆಡ್ಲಿಗೇರಿ, ಜಾನಪದ ಕಲಾವಿದ ಮಹಾಂತಪ್ಪ ಹೂಗಾರ, ಮುರಿದ ಮೂಳೆಗಳ ಕಟ್ಟುವ ರಂಗಪ್ಪ ಹಡಪದ ಕಾಮಣಿಯ ಚಿಕಿತ್ಸಕ ಮಹಾದೇವಪ್ಪ ಹೊಸಮನಿ, ಅರಿವು ಮರಳಿಸುವ ಅನುಭವಿ ವೈದ್ಯ ಶಂಕ್ರೆಪ್ಪ ಹಿರೇಕುಂಬಿ, ದಣಿವರಿಯದ ಪತ್ರಿಕಾ ಕೈಂಕರ್ಯದ ಶ್ರೀಮತಿ ಸಂಗನಬಸವ್ವ ಡಾವಣಗೇರಿ, ದನಗಳ ಕಾಯುವ ಕಾಯಕದ ಹನಮವ್ವ ದಂಡಿನ, ನೀರುಣಿಸುವ ನಿರಹಂಕಾರಿ ಬಸಯ್ಯ ಗಣಾಚಾರಿ, ಜಾನುವಾರುಗಳ ಸಂರಕ್ಷಕ ಪಾಂಡಪ್ಪ ಸಂಶಿ. ಮೊದಲಾದವರು ಸಿರೂರಿನ ಪ್ರಾತ:ಸ್ಮರಣೀಯರಾಗಿದ್ದಾರೆ. ಕವಿ ಸಾಹಿತಿಗಳಾದ ಬಿ. ಎನ್ ಮುಂಡರಗಿ, ಎಸ್. ಆರ್ ಎಮ್ಮಿಮಠ, ಮಹಾಂತೇಶ. ವಿ ಕಾತರಕಿ, ಆರ್. ಸಿ ಚಿತವಾಡಗಿ, ಲಕ್ಷ್ಮಣ ಬದಾಮಿ, ಕೆ. ಆರ್ ಹಲಗಿ, ಶ್ರೀರಾಮ ಅಚನೂರ, ಎಸ್. ಆರ್ ಹೂಗಾರ ಮೊದಲಾದವರು ಸಾಹಿತ್ಯಿಕ ಕೃಷಿಯಲ್ಲಿ ತೊಡಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ ಆ ಮೂಲಕ ಸಿರೂರಿನ ಕೀರ್ತಿ ನಾಡಿನಾದ್ಯಂತ ಪಸರಿಸುತ್ತಿದ್ದಾರೆ. ಇಂಥ ಊರಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯುತ್ತಿರಯವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.

ಮಕ್ಕಳ ಸಾಹಿತ್ಯ ಎಂದರೆ ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ ಆನಂದದಲ್ಲಿ ತೇಲಾಡುವಂತೆ ಮಾಡಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ. ಕನ್ನಡದಲ್ಲಿ ಈ ಉದ್ದೇಶವನ್ನು ಈಡೇರಿಸುವ ಸಾಹಿತ್ಯ ಇತ್ತಾದರೂ ಅದಕ್ಕೆ ಮಕ್ಕಳ ಸಾಹಿತ್ಯ ಎಂಬ ಸ್ವರೂಪ ಬಂದದ್ದು ಆಧುನಿಕ ಶಿಕ್ಷಣ ಹಾಗೂ ನವೋದಯ ಸಾಹಿತ್ಯ ಸಂದರ್ಭದಲ್ಲಿ ಎಂದು ಹೇಳಬಹುದು. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಇರುವಿಕೆಯನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಅಜ್ಜಿ ಹೇಳುವ ಲಾಲಿ ಪದಗಳು, ಪ್ರಾಸಬದ್ಧವಾದ ಆಟಗಳು, ಒಗಟುಗಳು, ಕಥೆಗಳು, ಅದ್ಭುತ ರಮ್ಯ ಕಥೆ, ಕಾಗಕ್ಕ ಗುಬ್ಬಕ್ಕನ ಕಥೆ, ಪಂಚ ತಂತ್ರದ ಕಥೆ, ತ್ರಿಪದಿಗಳು ಹೀಗೆ ಇವೆಲ್ಲವುಗಳು ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸಿವೆ. ಆಧುನಿಕ ಕಾಲದಲ್ಲಿ ಕನ್ನಡದ ಪ್ರಸಿದ್ಧ ಕವಿಗಳನೇಕರು ಮಕ್ಕಳ ಮನಸ್ಸನ್ನು ಪ್ರವೇಶಿಸಿ ಅವರಿಗಿಷ್ಟವಾಗುವಂಥ ಸಾಹಿತ್ಯ ರಚಿಸಿದ್ದಾರೆ. ಇದಕ್ಕೆ ಪತ್ರಿಕಾ ಮಾಧ್ಯಮವೂ ಪ್ರಚಾರ ಒದಗಿಸಿದೆ ಎಂಬುದು ಗಮನಾರ್ಹ.
ಜಾನಪದ ಪರಂಪರೆಯ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿನ ಮಕ್ಕಳ ಕವಿತೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಜಾನಪದ ಸೊಗಡಿನ ` ಗೋವಿನ ಹಾಡು ‘ ಮುಪ್ಪಿನ ಷಡಕ್ಷರಿಯ ` ತಿರುಕನ ಕನಸು ‘ ಬಹಳ ಕಾಲದಿಂದಲೂ ಮಕ್ಕಳ ಮನಸ್ಸನ್ನು ಆಕರ್ಷಿಸಿದ ಜನಪ್ರಿಯ ಕವಿತೆಗಳು. 19ನೆಯ ಶತಮಾನದ ಹೊತ್ತಿಗೆ ಇಂಗ್ಲೀಷ್ ಕವಿತೆಗಳ ಅನುವಾದಗಳು ಮಕ್ಕಳ ಸಾಹಿತ್ಯ ಬೆಳವಣಿಗೆಗೆ ಪೂರಕವೆಂಬುದು ಗೊತ್ತಾಗುತ್ತದೆ. `ಟ್ವಿಂಕಲ್ ಟ್ವಿಂಕಲ್ ಲಿಟಲ್‍ಸ್ಟಾರ್’
ಎನ್ನುವ ಕವಿತೆಯನ್ನು ಶ್ರೀನಿವಾಸರಾವ್ ಅವರು ಬಾಲಬೋಧೆಯಲ್ಲಿ
ಮಿರುಗುವ ಮಿರುಗುವ ಕಿರುತಾರೆಯೇ
ಅರಿಯೆನು ನಾನೆಲೆ ನೀನಾರೋ,
ಧರೆಗಿಳಿಯದೆ ನೀನಿರುತಿಹೆ ದೂರದಿ
ನೆರೆ ಹೊಳೆಯುವ ವಜ್ರದ ತೆರದಿ.
ಎಂದು ಅನುವಾದಿಸಿ ಮಕ್ಕಳಲ್ಲಿ ಹೊಸ ಅಭಿರುಚಿ ಮೂಡಿಸಿದರು. ನಂತರದ ಕಾಲದಲ್ಲಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಹಾಡುವ ಗುಣವುಳ್ಳ ಕವಿತೆಗಳು ಬಂದವು. ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವಾ ಹರಿ ಹರೀ ಗೋವು ನಾನು. ಎನ್ನುವಂಥ ಸರಳತೆಯಿಂದ ಕೂಡಿರುವುದರ ಜೊತೆಗೆ ಉತ್ತಮ ಮೌಲ್ಯಗಳನ್ನು ಹೊತ್ತಿರುವ ಕವಿತೆಗಳು ಮೂಡಿ ಬಂದವು. ಎಂ. ಎಸ್ ಪುಟ್ಟಣ್ಣಯ್ಯನವರು, ಎಸ್. ಜಿ ನರಸಿಂಹಚಾರ್ಯರು, ಶಾಂತ ಕವಿಗಳು ಮೊದಲಾದವರು ಈ ರೀತಿಯ ಪದ್ಯಗಳನ್ನು ಪಠ್ಯ ಪುಸ್ತಕಗಳಿಗಾಗಿ ರಚಿಸಿ, ಸಾಹಿತ್ಯದ ಕಡೆಗೆ ಮಕ್ಕಳ ಒಲವು ಮೂಡುವಂತೆ ಮಾಡಿದರು.

ತದನಂತರದಲ್ಲಿ ಪಂಜೆ ಮಂಗೇಶರಾಯರು ಮಕ್ಕಳ ಮನಸಿನ ಸೂಕ್ಷ್ಮ ಸಂವೇದನೆಗಳನ್ನು ಅರ್ಥ ಮಾಡಿಕೊಂಡು ಸರಳ, ಸುಂದರ ಗೀತೆಗಳನ್ನು ಹೆಣೆದರು. ಶಿಶು ಸಾಹಿತ್ಯದ ಜನಕರೆಂದೇ ಪ್ರಸಿದ್ಧರಾದ ಮಂಗೇಶರಾಯರ ಕವಿತೆಗಳು ಇಂದಿಗೂ ಜನಮನ್ನಣೆ ಗಳಿಸಿವೆ.
ನಾಗರ ಹಾವೆ! ಹಾವೊಳು ಹೂವೆ!
ಬಾಗಿಲ ಬಿಲದಲಿ ನಿನ್ನಯ ಠಾವೇ?
ಕೈಗಳ ಮುಗಿಯುವೆ, ಹಾಲನ್ನೀವೆ!
ಬಾ ಬಾ ಬಾ ಬಾ ಬಾ ಬಾ ಬಾ ಬಾ ( ನಾಗರ ಹಾವು )
…………………………………….
ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುನು
ಮೂಡಣ ರಂಗಸ್ಥಳದಲಿ ನೆತ್ತರು ಹರಿಸುವನು. ( ಉದಯರಾಗ )
ಇಂಥ ಕವಿತೆಗಳು ಮಕ್ಕಳ ಮನಸ್ಸನ್ನು ಅರಳಿಸುವಲ್ಲಿ ಯಶಸ್ವಿಯಾದವು. ಅದ್ಭುತ ಕಲ್ಪನೆ, ಲಯ, ಶ್ರಾವ್ಯ ಗುಣಗಳಿಂದ ಈ ಪದ್ಯಗಳು ಮಕ್ಕಳ ನಾಲಿಗೆಯಲ್ಲಿ ಕುಣಿದಾಡಿದವು. ಇದೇ ರೀತಿ ಎಂ. ಎಸ್ ಕಾಮತ್, ಹೊಯಿಸಳರು ಮಕ್ಕಳ ಮನ ತಣಿಸುವಂಥ ಕವಿತೆಗಳನ್ನು ರಚಿಸಿದರು. ಹೊಯಿಸಳರ `ತಟ್ಟು ಚಪ್ಪಾಳೆ ಪುಟ್ಟ ಮಗು’ `ಮತ್ತು ಸಂತಮ್ಮಣ್ಣ’ ಕವಿತೆಗಳನ್ನು ಕೇಳದವರೇ ಇಲ್ಲವೆಂದು ಹೇಳಬಹುದು. ಮಕ್ಕಳ ಸಾಹಿತ್ಯಕ್ಕೆ ಡಾ. ಜಿ. ಪಿ ರಾಜರತ್ನಂ ಅವರು ನೀಡಿದ ಕೊಡುಗೆ ಅಪಾರವಾದುದು. ಇವರ ಅಜ್ಜನ ಕೋಲು, ಬಣ್ಣದ ತಗಡಿನ ತುತ್ತೂರಿ, ಊಟದ ಆಟ, ನಮ್ಮ ಮನೆಯ ಸಣ್ಣ ಪಾಪ ಮುಂತಾದ ಕವಿತೆಗಳು ಇಂದಿಗೂ ಅಚ್ಚು ಮೆಚ್ಚು. ನಾಯಿ ಮರಿ ತಿಂಡಿ ಬೇಕೆ?, ಒಂದು ಎರಡು ಬಾಳೆಲೆ ಹರಡು, ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು. ಇಂಥ ಹಾಡುಗಳನ್ನು ಯಾರಾದರು ಹಾಡಿದರೆ ಸಾಕು ನಮಗರಿವಿಲ್ಲದಂತೆ ನಮ್ಮ ನಾಲಿಗೆಯಲ್ಲಿ ಹಾಡಿನ ಸಾಲುಗಳು ಹರಿದಾಡುತ್ತವೆ. ಉತ್ತಮ ಮಕ್ಕಳ ಸಾಹಿತ್ಯ ಎಂದರೆ ಹೇಗಿರಬೇಕು ಎನ್ನುವುದಕ್ಕೆ ಅವರ ಕವಿತೆಗಳು ಮಾದರಿಯಾಗಿವೆ. ಮಕ್ಕಳ ಸಾಹಿತ್ಯಕ್ಕೆ ಒಂದು ಹೊಸ ಶಕ್ತಿಯನ್ನು, ಸತ್ವವನ್ನು ತಂದುಕೊಟ್ಟವರೆಂದರೆ ಡಾ. ಶಿವರಾಂ ಕಾರಂತರು. ಇವರು ಬಾಲವನದ ಮೂಲಕ ಮಾಡಿದ ಸಾಹಿತ್ಯದ ಪ್ರಯೋಗ ಕವಿತೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ ಅಲ್ಲಿ ಬೇರೆ ಬೇರೆ ಪ್ರಕಾರದ ಮಕ್ಕಳ ಸಾಹಿತ್ಯ ಚಟುವಟಿಕೆಗಳು ರೂಪಿತಗೊಳ್ಳುತ್ತಿದ್ದವು. ಜಾನಿ ಜೇನ್ನೊಣಗಳ ಜಗಳ, ಹುಣ್ಣಿಮೆ – ಹಪ್ಪಳ, ಡಂ ಡಂ ಡೋಲು, ಕಪ್ಪೆ ಭಟ್ಟರು ಮೊದಲಾದ ಕಾರಂತರ ಕವಿತೆಗಳು ಜನಪ್ರಿಯವಾಗಿವೆ. ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಬರೆದ ರಾಷ್ಟ್ರಕವಿ ಕುವೆಂಪುರವರು ಕಿಂದರ ಜೋಗಿಯಂಥ ಶಿಶುಗೀತೆಯನ್ನು ರಚಿಸಿದ್ದಾರೆ. ಬ್ರೌನಿಂಗ್ ಕವಿಯ `ಪೈಡ ಪೈಪರ್ ಆಫ್ ಹ್ಯಾಮಲಿನ್’ ಎಂಬ ಕವಿತೆಯ ರೂಪಾಂತರವಾಗಿದ್ದರೂ ಇದು ನಮ್ಮ ನೆಲದ ಕವಿತೆ ಎನ್ನುವ ಹಾಗೆ ಮಕ್ಕಳ ಗಮನ ಸೆಳೆದಿದೆ.
ಬಂದನು ಬಂದನು ಕಿಂದರ ಜೋಗಿ/ ಕಡವೆಯ ಕೊಂಬಿನ ತಲೆಯಾ ಜೋಗಿ/ ಆನೆಯ ಕಿವಿಗಳ ಕಿಂದರ ಜೋಗಿ/ ಹಂದಿಯ ದಾಡೆಯ ಕೋರೆಯ ಜೋಗಿ. ಹೀಗೆ ಜೋಗಿಯ ಚಿತ್ರ ಮಕ್ಕಳಲ್ಲಿ ಕುತೂಹಲ, ಭಯ, ಕಲ್ಪನಾ ಶಕ್ತಿಯನ್ನು ಮೂಡಿಸುತ್ತದೆ. ಟುವ್ವಿ ಟುವ್ವಿ, ಅರ್ಧ ಚಂದ್ರ, ಕಾಮನ ಬಿಲ್ಲು ಕಮಾನು ಕಟ್ಟಿದೆ, ಮೂರ್ತಿಯ ಚಂದ್ರ ಮುಂತಾದವುಗಳು ಆಕರ್ಷಕವಾಗಿವೆ.
ಇದೇ ಪರಂಪರೆಯಲ್ಲಿ ಸಿದ್ದಯ್ಯ ಪುರಾಣಿಕರ ಅಜ್ಜನ ಕೋಲಿದು ನನ್ನಯ ಕುದುರೆ, ಪಳಕಳ ಸೀತಾರಾಮ ಭಟ್ಟರ ನನ್ನ ಅಪ್ಪ ಅಷ್ಟೆತ್ರ, ನಮ್ಮ ಅಮ್ಮ ಇಷ್ಟೆತ್ರ ಯಾಕೋ ಗೊತ್ತಿಲ್ಲ, ಸಿ. ಫ ಕಟ್ಟಿಮನಿಯವರ ಬಾರೆಲೆ ಹಕ್ಕಿ ಬಣ್ಣದ ಹಕ್ಕಿ, ಶಂ ಗು ಬಿರಾದಾರರ ಬಾ ಬಾ ಗಿಳಿಯೆ ಬಣ್ಣದ ಗಿಳಿಯೆ, ಗುರುಪಾದ ಸ್ವಾಮಿ ಹಿರೇಮಠರ ಬಾರೆಲೆ ಬಾರೆಲೆ ಬೋರಂಗಿ, ಸಿಸು ಸಂಗಮೇಶರ ಇರುವೆ ಇರುವೆ ಕರಿಯ ಇರುವೆ, ಎ. ಕೆ ರಾಮೇಶ್ವರರ ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು, ನೀ, ರೇ ಹಿರೇಮಠರ ಚಂದಿರನೇತಕೆ ಓಡುವನಮ್ಮಾ, ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿಯವರ ರೈತ ನಮ್ಮ ಅನ್ನದಾತ ಹೊಲದಿ ದುಡಿದೆ ದುಡಿವನು, ಸಿದ್ದಯ್ಯ ಪುರಾಣಿಕರ ಕರಡಿಯ ತಕ ತಕ ಕುಣಿಸುತ ಬಂದನು, ದಿನಕರ ದೇಸಾಯಿಯವರ ಗಂಟೆಯ ನೆಂಟನು ಓ ಗಡಿಯಾರ, ಅಬ್ದುಲ್ ರೇಹಮಾನರ ಗುಡುಗು ಬಡಿಯಿತು ಮೋಡ ಮುಸುಕಿತು ಕತ್ತಲಾಯಿತು ಸುತ್ತಲು. ದಾ. ರಾ ಬಳೂರಗಿವರ ಸುಗ್ಗಿಯು ಬಂದಿತು ಹಿಗ್ಗನು ತಂದಿತು, ಎಂ. ವಿ ಸೀತಾರಾಮಯ್ಯನವರ ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು, ಪರಶುರಾಮ ಚಿತ್ರಗಾರರ ಹಸಿದ ಹೊಟ್ಟೆಯಿಂದ ನಾಯಿ ರೊಟ್ಟಿಗಾಗಿ ತಿರುಗಿತು, ಕಂಚ್ಯಾಣಿ ಶರಣಪ್ಪನವರ ತಪಗಿರಿ ಪಕ್ಕದ ಸುಂದರ ಕಾಡೊಳು, ಜಿ. ಎನ್ ಲಕ್ಷ್ಮಣ ಪೈ ಅವರ ಬಿಸಿಲೂ ಮಳೆಯೂ ಕೂಡಿದವು, ಬೆಂಡವಾಡಿ ಸುಬ್ರಹ್ಮಣ್ಯ ಶರ್ಮಾರ ಆನೆ ಬಂದಿತ್ತು ಅಣ್ಣಾ ಆನೆ ಬಂದಿತ್ತು, ಕೈಯ್ಯಾರ ಕಿಂಞಣ್ಣರೈಯವರ ಸಂತೆಗೆ ಹೋದನು ಭೀಮಣ್ಣ, ಮಧುರ ಚನ್ನರ ಬಾರೆ ಗೆಳತಿ ಒಳಗೇ ಕುಳಿತಿ ಅಟ್ಟಾ ಏರಿ ಮೇಲೆ ನಿಂತಿ, ಡಿ. ಎಸ್ ಕರ್ಕಿಯವರ ನಾಡು ಬೆಡಗ ಹಾಡು ಹುಡುಗ, ನಾ. ಕಸ್ತೂರಿಯವರ ಅಮ್ಮಾ ನೀನು ಕುಳ್ ಕುಳ್ಳಾಗಿ ಪುಟಾಣಿ ಪಾಪನಾಗಿದ್ದಿದ್ರೆ, ಸಿದ್ದಣ್ಣ ಮಸಳಿಯವರ ನಾನು ಪಂಜರದ ಪಕ್ಷಿ ಇನ್ನು ನನಗಾರು ಗತಿ, ದ, ರಾ ಬೇಂದ್ರೆಯವರ ಕಬ್ಬಿಣ ಕೈಗಡಗ ಕುಣಿಕೋಲು ಕೂದಲು ಕಂಬಳಿ ಹೊದ್ದಾಂವ ಬಂದಾನ, ಟಿ. ಪಿ ಕೈಲಾಸಂರವರ ಕಾಶೀಗ್ ಹೋದ ನಂಬಾವ, ಚನ್ನವೀರ ಕಣವಿಯವರ ಗಿರಿ ಗಿರಿ ಗಿಂಡಿ ಇಬತ್ತಿ ಉಂಡಿ, ಕೆ. ಎಸ್ ನರಸಿಂಹಸ್ವಾಮಿಯವರ ಹಿಂದಿನ ಸಾಲಿನ ಹುಡುಗರು ಎಂದರೆ ನಮಗೇನು ಭಯವಿಲ್ಲ ಎನ್ನುವಂಥ ಕವಿತೆಗಳ ಮೊದಲ ಸಾಲು ಹೇಳಿದರೆ ಸಾಕು ಥಟ್ಟನೆ ಇಡೀ ಪದ್ಯ ನೆನಪಾಗಿ ಗುಣುಗುಟ್ಟುವಂತಾಗುತ್ತದೆ ಜೊತೆಗೆ ಹಾಡುಗಳನ್ನು ಹೇಳಿದ ಗುರುಗಳು ಕಣ್ಮುಂದೆ ಬರುತ್ತಾರೆ. ಮಕ್ಕಳಂತೂ ಹಾಡಿ ಕುಣಿದಾಡುತ್ತಿದ್ದರು.
ಇತ್ತಿತ್ತಲಾಗಿ ಮಕ್ಕಳ ಕವಿತೆಗಳನ್ನು ಮಕ್ಕಳೇ ಸ್ವತ: ರಚಿಸುತ್ತಿದ್ದಾರೆ. ಅವರ ಮುಗ್ದತೆಯನ್ನು ಸರಳ ಸುಂದರವಾಗಿ ತಮ್ಮ ಕವಿತೆಗಳಲ್ಲಿ ಹೇಳುವ ಮುಖಾಂತರ ಸಾಹಿತ್ಯಾಸಕ್ತಿಯನ್ನು ತೋರ್ಪಡಿಸುತ್ತಿದ್ದಾರೆ. ಆದಾಗ್ಯೂ ಬಹುಪಾಲು ಮಕ್ಕಳು ಇದರ ಪ್ರಯೋಜನವನ್ನು ಸರಿಯಾಗಿ ಪಡೆದುಕೊಳ್ಳಲಾಗುತ್ತಿಲ್ಲವೆಂಬುದು ವಿಷಾಧನೀಯ. ಇದಕ್ಕೆಲ್ಲ ಮುಖ್ಯ ಕಾರಣ ಇಂದಿನ ವಿದ್ಯಾಭ್ಯಾಸ. ಮಕ್ಕಳ ಮನಸ್ಸನ್ನು ತಟ್ಟುವ ಮಾತೃಭಾಷೆಯ ಪದ್ಯಗಳಿಗಿಂತ ಇಂಗ್ಲೀಷ್ ರೈಮ್ಸನ್ನೇ ತರಗತಿಗಳಲ್ಲಿ ಬೋಧನೆ ಮಾಡುವ ಮೂಲಕ ಪುಟ್ಟ ಹೃದಯಕ್ಕೆ ಸಿಗಬಹುದಾದ ಸಂತೋಷಕ್ಕೆ ಪೆಟ್ಟು ಬೀಳುತ್ತಿz.É ಆಧುನಿಕ ವಿದ್ಯಾಭ್ಯಾಸದ ಜೊತೆ ಜೊತೆಗೆ ಮಕ್ಕಳಲ್ಲಿ ಕವಿತೆಗಳ ಆಸ್ವಾದನೆಯ ರುಚಿ ತಿಳಿಸಿ ಕೊಟ್ಟರೆ ಅವರು ಸದೃಢ ವಿದ್ಯಾವಂತರು, ಹೃದಯವಂತರೂ ಆಗುತ್ತಾರೆಂಬುದರಲ್ಲಿ ನಿಸ್ಸಂಶಯ.
ಅಭಿನಯ, ಸಂಭಾಷಣೆ, ಹಾಡು, ವಿಶೇಷ ವಸ್ತ್ರ ವಿನ್ಯಾಸ, ದೃಶ್ಯ ವೈಭವ ಮುಂತಾದ ಮಿಶ್ರ ಕಲೆಗಳ ಸಂಯೋಜನೆಯಾದ ನಾಟಕ ಎಲ್ಲರನ್ನು ಆಕರ್ಷಿಸುವ ಕಲೆ. ನಾಟಕ ನೋಡಿ ಸಂತೋಷಿಸುವ ಹಾಗೆ ಓದಿಯೂ ಆನಂದಿಸಬಹುದು. ಈ ನಿಟ್ಟಿನಲ್ಲಿ ಆಲೋಚಿಸಿ ರಚಿಸಲ್ಪಟ್ಟ ಮಕ್ಕಳ ನಾಟಕಗಳೆಂದರೆ ನಾರಾಯಣ ಸ್ವಾಮಿಯವರ ಪೃಥ್ವಿರಾಜ, ಜಯಚಂದ್ರ, ಹುಲಿಶಿಕಾರಿ. ಕುವೆಂಪುರವರ ಮೋಡಣ್ಣನ ತಮ್ಮ, ಹೊಯಿಸಳರ ಮಕ್ಕಳ ಮಂಟಪ, ಚಂದ್ರಹಾಸ. ಶಿವರಾಂ ಕಾರಂತರ ಹೊಟ್ಟೆಯ ಹಾಡು, ಜಿ.ಪಿ ರಾಜರತ್ನಂರ ಬೆಳೆಯುವ ಪೈರು, ಆರ್ಯ ಅವರ ಮಳೆ ಬಂತು, ಚಂದ್ರಶೇಖರ ಕಂಬಾರರ ಅಲಿಬಾಬಾ ಮತ್ತು ನಲವತ್ತು ಕಳ್ಳರು, ಎನ್. ಎಸ್ ವೆಂಕಟರಾಮ್ ಅವರ ಹಿಮಾನಿ ಮತ್ತು ಏಳು ಜನ ಕಳ್ಳರು, ಅಬ್ದುಲ್ ರೆಹಮಾನ್ ಪಾಷ ಅವರ ನಕ್ಕಳಾ ರಾಜಕುಮಾರಿ, ಮೆವುಂಡಿ ಮಲ್ಲಾರಿ ಅವರ ಮಯೂರವರ್ಮ, ನಾರಾಯಣ ಸ್ವಾಮಿಯವರ ಶಿವಾಜಿ, ಎಂ. ವಿ ಸೀತಾರಾಮಯ್ಯ ಅವರ ಕರುಣೆಯ ಕುಡಿ, ಶ್ರೀನಿವಾಸ ಅವರ ಬೈಲಂಗಡಿಯ ನಾರಿ, ರಘುಸುತ ಅವರ ಹೊಸಬೆಳಕು ಮುಂತಾದವುಗಳು ಮಕ್ಕಳಲ್ಲಿ ಸಾಹಸಪ್ರೀಯತೆ, ಆದರ್ಶಗಳ ಬಗೆಗಿನ ಒಲವನ್ನು ಹೆಚ್ಚಿಸುವುದರ ಜೊತೆಗೆ ಕುತೂಹಲವನ್ನು ಹುಟ್ಟಿಸುತ್ತವೆ.
ಹೆಗ್ಗೋಡಿನ ಅಕ್ಷರ ಪ್ರಕಾಶನ ಹೊರ ತಂದಿರುವ ಅನೇಕ ಮಕ್ಕಳ ನಾಟಕಗಳು ಅಂದರೆ ಬಿ. ವಿ ಕಾರಂತರ ಪಂಜರಶಾಲೆ, ಕಂಬಾರರ ಕಿಟ್ಟಿ ಕತೆ, ಪ್ರಸನ್ನರ ಒಂದಾನೊಂದು ಕಾಡಿನಲ್ಲಿ, ಕೆ.ವಿ ಸುಬ್ಬಣ್ಣ ಅವರ ಬೆಟ್ಟಕ್ಕೆ ಚಳಿಯಾದರೆ, ನೀಲಿ ಕುದುರೆ ಮುಂತಾದವುಗಳು ನವೀನ ಶೈಲಿಯಲ್ಲಿ ರಚನೆಯಾಗಿದ್ದು ರಂಗ ಪ್ರಯೋಗಗಳಾಗಿಯೂ ಯಶಸ್ಸು ಗಳಿಸಿವೆ. ವೈದೇಹಿಯವರ ಅನೇಕ ನಾಟಕಗಳು ಸಹಿತ ಗುಣಮಟ್ಟದಲ್ಲಿ ಉತ್ತಮವೆನಿಸಿಕೊಂಡಿವೆ. ಸೂ. ಸುಬ್ರಹ್ಮಣ್ಯ ಅವರ ನಕ್ಕಿತು ನಕ್ಷತ್ರ, ಆರ್. ಕೆ ಶಾನುಭೋಗರ ಅಪೂರ್ವ ಹಾಗೂ ಉಪ್ಪಿನಕಾಯಿ ಅತ್ತೆ, ಬಿಳಿಗೆರೆ ಕೃಷ್ಣಮೂರ್ತಿಯವರ ಮಳೆಹುಚ್ಚು ಮತ್ತು ನವಿಲು ಮೊದಲಾದ ನಾಟಕಗಳು ಆಕರ್ಷಕ ಭಾಷೆಯಿಂದ ಕೂಡಿರುವ ಲವಲವಿಕೆಯ ನಾಟಕಗಳೆನಿಸಿವೆ. ಈ ದಿಸೆಯಲ್ಲಿ ಹೆಗ್ಗೋಡಿನ ನೀನಾಸಂ, ತಿಪಟೂರಿನ ಅಭೀನಯ, ಬೆಂಗಳೂರಿನ ಬಿಂಬ, ಮೈಸೂರಿನ ರಂಗಾಯಣ, ತಮರಿಯ ಕಿಣ್ಣರ ಮೇಳ ಮೊದಲಾದ ತಂಡಗಳು ಆಸಕ್ತಿಯಿಂದ ಕೆಲಸ ಮಾಡುತ್ತಿವೆ.
ಸುಮಾರು ಕ್ತಿ. ಪೂ. 200ರಲ್ಲಿ ಪಂಚತಂತ್ರ ಕತೆಗಳು ಸೃಷ್ಟಿಯಾದಂತೆ ತೋರುತ್ತವೆ. ಈ ಕತೆಗಳು ಪ್ರಪಂಚದ ಬಹು ಭಾಷೆಗಳಿಗೆ ಭಾಷಾಂತರವಾಗಿವೆ. ಕನ್ನಡಕ್ಕೆ ಇದನ್ನು ಮೊಟ್ಟಮೊದಲು ಭಾಷಾಂತರಿಸಿದವರು ಗದಗ ಜಿಲ್ಲೆಯ ಸವಡಿಯ ದುರ್ಗಸಿಂಹ ಎಂದು ತಿಳಿದು ಬಂದಿದೆ. ಪಂಚತಂತ್ರ ಕತೆಗಳು ನೀತಿಕತೆಗಳಾಗಿದ್ದು ಓದಲು ತುಂಬಾ ಕುತೂಹಲವನ್ನು ಕೆರಳಿಸಿ ಓದಿಸಿಕೊಂಡು ಹೋಗುತ್ತವೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಕಥನ ಶೈಲಿ ಈಗಲೂ ಹೊಸದೆನಿಸುತ್ತದೆ. ಕ್ರಿ. ಪೂ. 200ರಲ್ಲಿ ಆಳುತ್ತಿದ್ದ ರಾಜ ಅಮರಶಕ್ತಿಯ ಮೂವರು ಮಕ್ಕಳಾದ ಬಹುಶಕ್ತಿ, ಉಗ್ರಶಕ್ತಿ, ಅನಂತಶಕ್ತಿ ಅವರುಗಳು ವಿದ್ಯೆ ಕಲಿಯದೆ ಹಾಳಾಗುತ್ತಿರುವುದನ್ನು ನೋಡಿ ಅವರನ್ನು ವಿಷ್ಣುಶರ್ಮ ಎನ್ನುವ ಗುರುವಿನ ಹತ್ತಿರ ಕಲಿಯಲು ಬಿಡುತ್ತಾರೆ. ಅವರಿಗೆ ವಿದ್ಯೆ ಕಲಿಸುವ ಹಂತದಲ್ಲಿ ವಿಷ್ಣುಶರ್ಮ ಹೇಳುವ ಕತೆಗಳೇ ಪಂಚತಂತ್ರ ಕತೆಗಳು. ಈ ಕತೆಗಳು ಪರೋಕ್ಷವಾಗಿ ಕಲಿಸುತ್ತಿದ್ದವೆಂಬುದು ಸ್ಪಷ್ಟವಾಗುತ್ತದೆ. ಪ್ರಾಣಿಗಳ ಕತೆ ಮಕ್ಕಳಿಗೆ ಯಾವಾಗಲೂ ಆಕರ್ಷಣೀಯವೇ. ಹೀಗಾಗಿ ಪಂಚತಂತ್ರ ಕತೆಗಳು ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಇದೇ ರೀತಿ ನಾರಾಯಣ ಪಂಡಿತರ ಹಿತೋಪದೇಶ ಕತೆಗಳು ನೀತಿ, ವ್ಯವಹಾರ, ಒಳಿತು,ಕೆಡಕುಗಳ ಬಗ್ಗೆ ಬೆಳಕು ಚೆಲ್ಲುವಂಥವುಗಳಾಗಿವೆ. ಈಸೋಪನ ಕತೆಗಳು ( ತೋಳ ಬಂತು ತೋಳ, ನರಿ ಮತ್ತು ದ್ರಾಕ್ಷಿ, ಕುರಿ ವೇಷದಲ್ಲಿ ನರಿ ) ಕನ್ನಡಕ್ಕೆ ಭಾಷಾಂತರಗೊಂಡವು. ಇವು ಅಥೇನ್ಸ ನಗರದಲ್ಲಿ ಒಬ್ಬ ಗ್ರೀಕ್ ಹೇಳಿದ ಕತೆಗಳಾಗಿವೆ. ಜಾತಕ ಕತೆಗಳು ಬಂದವು ( 14ನೆಯ ಶತಮಾನ ) ಜಿಂದಾಬಾದನ ಸಾಹಸಗಳು, ಅರೆಬಿಯನ್ ನೈಟ್ಸ್, ಅಲಿಬಾಬಾ ಮತ್ತು ನಲವತ್ತು ಕಳ್ಳರು ಇತ್ಯಾದಿಗಳು ಭಾಷಾಂತರದಲ್ಲಿರುವ ಹೊಸ ದೇಶದ ಕತೆಗಳಾದರೂ ನಮ್ಮ ಸಂಸ್ಕøತಿಯಲ್ಲಿ ಬೆರೆತು ಹೋಗಿವೆ.
ಈಗಿನ ದಿನಮಾನದಲ್ಲಿಯೂ ಸಹಿತ ಪ್ರಾಣಿಗಳು ಕತೆಯಲ್ಲಿ ಪಾತ್ರಗಳಾಗಿ ಉಳಿದಿರುವುದು ವಿಶೇಷ. ಉದಾಹರಣೆಗಾಗಿ ಜಯವಂತ ಕಾಡದೇವರ ಅವರ ತೋಳ ನರಿ ಮತ್ತು ಚಿರತೆ, ನಾಗರಾಜಶೆಟ್ಟಿಯವರ ನಾಚಿದ ಬೀಜಣ್ಣ, ಸತ್ಯ ಕಲಾಧ್ವನಿಯವರ ಪ್ರೀತಿಯ ಗುಬ್ಬಿ, ಬಿ. ಟಿ ಸತೀಶರವರ ನಾಯಿ ಮತ್ತು ಯಜಮಾನ ಮೊದಲಾದವುಗಳನ್ನು ಹೆಸರಿಸಬಹುದಾಗಿದೆ. ಶಂ. ಗು ಬಿರಾದಾರ ಅವರ ಅಜ್ಜಿ ಹೇಳಿದ ಕತೆ, ಮನಿಯಾಲ್ ಗಣೇಶ್ ಶೆಣೈ ಅವರ ಹೋತದ ಜಾಣತನ, ಮೂರ್ತಿ ರಾಮನಾಥಪುರ ಅವರ ವಿದ್ಯೆ ಉಪಾಸನೆ, ವಿಶ್ವನಾಥ ಅವರ ಋಣಭಾರ ಮುಂತಾದ ಕತೆಗಳು ನೆನಪಿನಲ್ಲಿ ಉಳಿಯುವಂಥವುಗಳಾಗಿವೆ. ಇತ್ತಿತ್ತಲಾಗಿ ಕನ್ನಡದಲ್ಲಿ ಮಕ್ಕಳ ಕತೆಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತಿವೆ. ಹೀಗಾಗಿ ಪತ್ರಿಕಾ ಮಾಧ್ಯಮವೂ ಮಕ್ಕಳ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವಂತೆ ಮಾಡುತ್ತಿರುವುದು ಶ್ಲಾಘನೀಯ. ಸಿಸು ಸಂಗಮೇಶ, ಪಳಕಳ ಸೀತಾರಾಮಭಟ್ಟ ನಾ. ಡಿಸೋಜಾ, ಮತ್ತೂರು ಸುಬ್ಬಣ್ಣ, ತಮ್ಮಣ್ಣ ಬೀಗಾರ, ಪ. ಕೃಷ್ಣಶಾಸ್ತ್ರಿ, ಸಂಪಟೂರು ವಿಶ್ವನಾಥ, ಗೀತಾ ಶಾಸ್ತ್ರಿ, ಶಿವರಾಮ್ ಭಟ್, ಸಿ. ಎನ್ ಮುಕ್ತಾ, ಬಿ ಸುಮಿತ್ರಾ, ಕಂಚಾಣಿ ಶರಣಪ್ಪ, ಅಣ್ಣಾಜಿ ಫಡತಾರೆ, ಪ. ಗು ಸಿದ್ದಾಪುರ, ಕಾಡಣ್ಣ ಹೊಸಟ್ಟಿ, ಸಂಗಮೇಶ ಗುಜಗೊಂಡ, ಸಿ. ಎಂ ಗೋವಿಂದರೆಡ್ಡಿ, ಚಂದ್ರಕಾಂತ ಕದರಳ್ಳಿ, ಎ. ಕೆ ರಾಮೇಶ್ವರ, ಕೃ. ನಾರಾಯಣರಾವ್, ಜಂಬುನಾಥ ಕಂಚ್ಯಾಣಿ, ಶಿವಮೊಗ್ಗಾ ಗೀತಾಶಾಸ್ತ್ರಿ ಹೀಗೆ ಅನೇಕಾನೇಕ ಮಕ್ಕಳ ಸಾಹಿತಿಗಳು ಮಕ್ಕಳ ಕಥಾ ಪ್ರಪಂಚಕ್ಕೆ ರಂಗು ತುಂಬಿದ್ದಾರೆ.
ಮಕ್ಕಳ ಸಾಹಿತ್ಯದಲ್ಲಿ ಕಾದಂಬರಿಗಳ ಸಂಖ್ಯೆ ಅತೀ ಕಡಿಮೆ ಎಂದೇ ಹೇಳಬಹುದು. ಅತೀ ಹೆಚ್ಚಿನ ಸಖ್ಯೆಯಲ್ಲಿ ಕಂಡು ಬಂದಿರುವುದೆಂದರೆ ಕತೆಗಳು ನಂತರದಲ್ಲಿ ಜೀವನ ಚರಿತ್ರೆ, ವಿಜ್ಞಾನ ಮತ್ತಿತರ ವಸ್ತುಗಳ ಕೃತಿಗಳು ಬೆಳಕು ಕಂಡಿವೆ. ಕಾವ್ಯಗಳದ್ದು ಮೂರನೆಯ ಸ್ಥಾನ. ನಾಟಕಗಳೂ ಸಹಿತ ಬಹಳ ಕಡಿಮೆ. ಕಾದಂಬರಿ ದೀರ್ಘ ಕಾಲದ ಓದುವ ಸಹನೆಯನ್ನು ಅಪೇಕ್ಷಿಸುತ್ತದೆ. ಹನ್ನೆರಡರಿಂದ ಮೇಲ್ಪಟ್ಟ ವಯಸ್ಸಿನ ಮಕ್ಕಳು ಮಾತ್ರ ಕಾದಂಬರಿಗಳನ್ನು ಓದಬಲ್ಲವರಾಗಿದ್ದಾರೆಂದು ಹೇಳಲಾಗುತ್ತಿದೆ. ಕನ್ನಡದಲ್ಲಿ ವಯಸ್ಸಿಗನುಣವಾಗಿ ಸಾಹಿತ್ಯ ರಚನೆಯಾಗಿಲ್ಲ. ಇಂಗ್ಲೀಷಿನಲ್ಲಿ ಅಂಥ ಪ್ರಯತ್ನಗಳಾಗಿವೆ. 5 ರಿಂದ 8 ವರ್ಷದ ವಯೋಮಾನದವರು, 9 ರಿಂದ 12 ವಯಸ್ಸಿನ ಮಕ್ಕಳು, 13 ರಿಂದ 15ರ ವರೆಗಿನವರು ಎಂದು ಮಕ್ಕಳ ಸಾಹಿತ್ಯವನ್ನು ವಿಂಗಡಿಸಲಾಗಿದೆ. ಆಯಾ ವಯಸ್ಸಿನ ಮಕ್ಕಳ ಸ್ವಭಾವ, ಸಾಮಥ್ರ್ಯ, ಬೇಡಿಕೆಗಳನ್ನು ಅನುಸರಿಸಿ ಶಿಶು ಸಾಹಿತ್ಯ ರಚನೆ ಆಗಬೇಕೆಂಬುದು ಮನೋವಿಜ್ಞಾನಿಗಳ ಅಭಿಪ್ರಾಯ.
ಕಾದಂಬರಿ ಕ್ಷೇತ್ರದಲ್ಲಿ ಸಾಹಸ ಪ್ರಧಾನ ವಸ್ತುವಿನ ರಚನೆಗಳು ಹೆಚ್ಚು ಇಷ್ಟವಾಗುತ್ತವೆ. ರಸಿಕ ಪುತ್ತಿಗೆಯವರ ಕೆಂಪು ಕಾರು, ಎಂ. ಪಿ ಮನೋಹರ ಚಂದ್ರನ್ ಅವರ ಪುಪ ಕಾಡಿನಲ್ಲಿ ಪಾಪು, ಎಚ್. ಎಸ್ ವೆಂಕಟೇಶಮೂರ್ತಿಯವರ ಅಮಾನುಷರು, ಅಗ್ನಿಮುಖಿ, ಸುಮತೀಂದ್ರ ನಾಡಿಗರ ಸಾಹಸ, ಬಿ. ಎಲ್ ವೇಣುರವರ ಗುಹೆ ಸೇರಿದವರು, ಟಿ. ಕೆ ರಾಮರಾವ್ ಅವರ ದಿಬ್ಬದ ಮನೆ, ತಮ್ಮಣ್ಣ ಬೀಗಾಗರರ ಬಾವಲಿ ಗುಹೆ ಕಾದಂಬರಿಗಳು ಮಕ್ಕಳ ಮನಸ್ಸಿನ ಕತೂಹಲ ತಣಿಸುವಲ್ಲಿ ಯಶಸ್ವಿಯಾಗಿವೆ. ಜಂಬುನಾಥ ಕಂಚ್ಯಾಣಿಯವರ ಮಿಡಿದ ಕರುಳು, ಆನಂದ ಪಾಟೀಲರ ಬೆಳದೀಂಗಳು, ಎನ್. ವಿ ಶ್ರೀನಿವಾಸರಾವ್‍ರ ಹಾರೋ ಹನುಮ, ಆರ್. ವಿ ಭಂಡಾರಿಯವರ ಬಿರುಗಾಳಿ, ಗೀತಾ ಕುಲಕರ್ಣಿಯವರ ನೇಜಿ ಗುಬ್ಬಜ್ಜಿ, ರಾಜಶೇಖರ ಭೂಸನೂರಮಠರ ರಾಕ್ಷಸ ದ್ವೀಪ, ಅಟ್ಲಾಂಟಿಸ್ ಮೊದಲಾದವುಗಳು ವೈವಿಧ್ಯಮಯ ವಿಷಯ ವಸ್ತುಗಳಿಂದ ಗಮನ ಸೆಳೆಯುತ್ತವೆ. ಕೆ. ನಟರಾಜರವರ ಚಂದ್ರಲೋಕಕೆ ಹೋಗೂನು ಬಾರಾ, ಪುಟಾಣಿ ಕಂಡ ಪರಮಾಣು ಲೋಕ, ಆರ್. ಕೆ ಶಾನುಭೋಗರ ಅಂಟಾರ್ಟಿಕಾ ಮೊದಲಾದವುಗಳು ಉತ್ತಮ ವೈಜ್ಞಾನಿಕ ಕಾದಂಬರಿಗಳಾಗಿವೆ. ಒಳ್ಳೆಯ ಅನುವಾದಿತ ಕಾದಂಬರಿಗಳಾದ ನಾ. ಕಸ್ತೂರಿಯವರ ಪಾತಾಳದಲ್ಲಿ ಪಾಪಚ್ಚಿ, ಎನ್ ಪ್ರಹ್ಲಾದರಾವ್ ಅವರ ಪಿನೋಕಿಯೋ, ಭೂಗರ್ಭಯಾತ್ರೆ, ಎಂ. ಗೋಪಾಲಕೃಷ್ಣ ಅಡಿಗರ ಬನದ ಮಕ್ಕಳು, ವಾಸುದೇವರಾವ್ ಅವರ ಸಮುದ್ರ ಆಳದಲ್ಲಿ ಇಪ್ಪತ್ತು ಸಾವಿರ ಯೋಜನೆಗಳು ಮೊದಲಾದವುಗಳು ಮೇರು ಕೃತಿಗಳೆನಿಸಿವೆ.
ಕನ್ನಡ ಪತ್ರಿಕೋದ್ಯಮ ಕ್ಷೇತ್ರ ಮಕ್ಕಳ ಸಾಹಿತ್ಯ ರಚನೆಗೆ ಪ್ರೋತ್ಸಾಹ ಒದಗಿಸುತ್ತಲೇ ಬಂದಿದೆ. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ವಾರ್ಷಿಕ ವಿಶೇಷಾಂಕಗಳು ಮುಂತಾದ ನಿಯತಕಾಲಿಕೆಗಳಲ್ಲಿ ಮಕ್ಕಳ ಸಾಹಿತ್ಯ ಕೃಷಿ ನಿರಂತರವಾಗಿ ನಡೆದಿದೆ. ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳು, ಮಾಸಪತ್ರಿಕೆಗಳಲ್ಲಿ ಒಂದೆರಡು ಪುಟಗಳು ಮಕ್ಕಳ ಸಾಹಿತ್ಯ ಪ್ರಕಟಣೆಗೆಂದು ಮೀಸಲಾಗಿದ್ದರೂ ಅದು ಕಡಿಮೆಯೆನಿಸುತ್ತದೆ ಅದು ಹೆಚ್ಚಾಗಬೇಕಾಗಿದೆ. ಕೆಲವೊಂದು ಪತ್ರಿಕೆಗಳು ಈ ಸಾಹಿತ್ಯಕ್ಕೆ ಮಹತ್ವ ಕೊಡದಿರುವುದು ಕಂಡುಬರುತ್ತಿದೆ. ಅಪ್ಪಟ ಮಕ್ಕಳ ಪತ್ರಿಕೆಗಳಾದ ಬಾಲ ಮಂಗಳ, ಚಂಪಕ, ಚಂದಾಮಾಮ, ತುಂತುರು ಮುಂತಾದವುಗಳು ಕತೆ, ಕವನ, ಕಾದಂಬರಿ, ಕಾಮಿಕ್ಸ್ ಹೀಗೆ ಹಲವಾರು ವಿಷಯ ವಸ್ತುಗಳ ರಚನೆಯಿಂದ ಮಕ್ಕಳಿಗೆ ಇಷ್ಟವಾಗುತ್ತಿವೆ.
ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯಕ್ಕೆ ಅತೀ ಹೆಚ್ಚಿನ ಕೊಡುಗೆಯನ್ನು ನೀಡಿದ ಅಖಂಡ ವಿಜಯಪುರ – ಬಾಗಲಕೋಟ ಜಿಲ್ಲೆಯ ಮಕ್ಕಳ ಸಾಹಿತಿಗಳನ್ನು ಸ್ಮರಿಸದಿದ್ದರೆ ಹೇಗೆ? ಈ ಜಿಲ್ಲೆಗಳಿಂದ ಹೊರಹೊಮ್ಮಿದ ಮಕ್ಕಳ ಸಾಹಿತ್ಯದ ಕಂಪು ನಾಡಿನಾದ್ಯಂತ ಹಬ್ಬಿದೆ. ಸಿಸು ಸಂಗಮೇಶ, ಶಂ. ಗು ಬಿರಾದಾರ, ಈಶ್ವರಚಂದ್ರ ಚಿಂತಾಮಣಿ, ಕಂಚ್ಯಾಣಿ ಶರಣಪ್ಪ, ಹ. ಮ ಪೂಜಾರಿ, ಗುರುಸ್ವಾಮಿ ಗಣಾಚಾರಿ, ಜಯವಂತ ಕಾಡದೇವರ, ಪರಶುರಾಮ ಚಿತ್ರಗಾರ, ಅಣ್ಣಾಜಿ ಫಡತಾರೆ, ಸಂಗಮೇಶ ಬಾಗಲಕೋಟ, ವ್ಹಿ. ಜಿ ಮಠ, ದೊಡ್ಡಣ್ಣ ಗದ್ದನಕೇರಿ, ಪ. ಗು ಸಿದ್ದಾಪುರ, ಜಂಬುನಾಥ ಕಂಚ್ಯಾಣಿ, ವ್ಹಿ. ಎಸ್ ಶಿರಹಟ್ಟಿಮಠ, ಅನ್ನದಾನಿ ಹಿರೇಮಠ, ಪ್ರಕಾಶ ಖಾಡೆ ಮುಂತಾದ ದಿಗ್ಗಜ ಮಕ್ಕಳ ಸಾಹಿತಿಗಳ ಪರಂಪರೆಯ ನೆರಳು ಗಾಢವಾಗಿ ಮೇಳೈಸಿರುವುದು ಗಮನಿಸಬಹುದಾಗಿದೆ.
ಡಾ. ಶ್ರೀರಾಮ ಇಟ್ಟಣ್ಣವರ ಅವರು ನೂರು ಶಿಶುಗೀತೆಗಳು , ಪರಶುರಾಮ ಚಿತ್ರಗಾರರ ಪತಂಗ, ನಾವು ಭಾರತಿಯರು, ಗುಡುಗಡು ಮುತ್ಯಾ ದು. ನಿಂ ಬೆಳಗಲಿಯವರ ಈಸೋಪನ ಕತೆಗಳು ಜಾದೂ ಪಕ್ಷಿ, ಜಯವಂತ ಕಾಡದೇವರ ಅವರ ಹಕ್ರ್ಯೂಲಸನ ಸಾಹಸಗಳು, ದೇಶ ಕಟ್ಟೋಣ ಬನ್ನಿ, ಅಜ್ಜ ಹೇಳಿದ ಕತೆಗಳು, ಅಣ್ಣಾಜಿ ಫಡತಾರೆಯವರ ಬಾಲರ ಬಯಕೆ, ಗೆಳೆತನ, ಮಕ್ಕಳ ತೋಟ. ಗುರುಸ್ವಾಮಿ ಗಣಾಚಾರಿಯವರ ನಗುವ ಮಗು, ಎಚ್ಚರ, ಅನುಕಂಪ, ಶಿಶು ಪ್ರಾಸಗಳು. ಕಾಡಣ್ಣ ಹೊಸಟ್ಟಿಯವರ ನಮ್ಮ ಹಳ್ಳಿ, ಸಾಲು ಮರಗಳು, ಮುದ್ದಿನ ಜಿಂಕೆ, ಬಿ. ಆರ್ ಪೋಲೀಸ್‍ಪಾಟೀಲರ ಕಿಟ್ಟು – ಪಾಪು, ಭೋಲೋ ಭಾರತ ಮಾತಾಕಿ, ಹೆಂತಾ ಚಂದಿತ್ತ ಹಿಂದುಸ್ತಾನ, ವ್ಹಿ. ಎಸ್ ಶಿರಹಟ್ಟಿಮಠರ ಭೂಲೋಕದ ಕಾಣಿಕೆ, ಬೆಳವಡಿ ಮಲ್ಲಮ್ಮ, ಹಲಗಲಿ ಭೀಮ, ಕೆಳದಿ ಚೆನ್ನಮ್ಮ. ದೊಡ್ಡಣ್ಣ ಗದ್ದನಕೇರಿಯವರ ಮಾತಾಡುವ ಗಿಳಿ, ಹೆತ್ತವರೇ ದೇವರು, ಯಾರು ಕಳ್ಳರು. ಲಕ್ಷ್ಮಣ. ಕೆ ಕಂಬಾರರ ಹೃದಯ ಕುಸುಮ, ನಮ್ಮ ಭಾರತ, ಚಿಣ್ಣರ ನಾಡು. ಸರೋಜಾ ಇಟ್ಟಣ್ಣವರ ಅವರ ಪಾಸಿನ ಹುಡುಗರು, ಲಲಿತಾ ಹೊಸಪ್ಯಾಟಿಯವರ ಕಲ್ಪನಾಳಿಗೊಂದು ಎದೆಯ ಹಾಡು, ಪಟ್ಟಣಕ್ಕೆ ಬಂದ ಪುಟ್ಟಗುಬ್ಬಿ ಬಿ. ಎನ್ ಮುಂಡರಗಿಯವರ ತೀನ್ ತೇರಾ ನೌ ಅಟ್ರಾ, ಎಸ್. ಎಸ್ ಹಳ್ಳೂರರ ಚಿಣ್ಣರ ಚೇತನ, ಗುರುರಾಜ ಲೂತಿಯವರ ಮುದ್ದುಮರಿ ಗುಬ್ಬಿಮರಿ, ಶಂಕರ ಲಮಾಣಿಯವರ ಚಿಣ್ಣರ ಕಾವ್ಯ ಲೋಕ, ಸೋಮಲಿಂಗ ಬೇಡರರ ಮುದ್ದಿನ ಹಕ್ಕಿ, ಹಕ್ಕಿ ಗೂಡು, ಬಂಗಾರ ಬಣ್ಣದ ಹಕ್ಕಿ, ಸಿದ್ಧರಾಮ ಸುರಗಿಮಠರ ಮೊಗ್ಗಿನ ಮಾಲೆ, ಬಾಬು ಮೇಟಿಯವರ ಇವರು ನಮ್ಮವರು, ಬಾಪು ಖಾಡೆಯವರ ಮಕ್ಕಳ ಜಾತ್ರೆ, ಅಶೋಕ ಬಳ್ಳಾ ಅವರ ಕರ್ ಕರ್ ಕಪ್ಪೆ, ನಮಗೂ ರೆಕ್ಕೆಗಳಿದ್ದಿದ್ದರೆ, ಮುಂತಾದ ಕೃತಿಗಳು ಗಮನಾರ್ಹವಾಗಿವೆ ಇವರೆಲ್ಲ ನಮ್ಮ ಜಿಲ್ಲೆಯ ಹೆಮ್ಮೆಯ ಮಕ್ಕಳ ಸಾಹಿತಿಗಳಾಗಿದ್ದಾರೆ ಜೊತೆಗೆ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯವನ್ನು ಮತ್ತಷ್ಟು ಸಮೃದ್ಧಗೊಳಿಸುವಲ್ಲಿ ಅನೇಕ ಹಿರಿಕಿರಿಯ ಸಾಹಿತಿಗಳು ಶ್ರಮಿಸುತ್ತದ್ದಾರೆ ಅವರಿಂದ ಹತ್ತು ನಹಲವಾರು ಕೃತಿಗಳು ಪ್ರಕಟಗೊಂಡು ಮಕ್ಕಳ ಮನ ಅರಳಿಸುವಂತಾಗಲಿ.
ಇಂದು ಮಕ್ಕಳ ಸಾಹಿತ್ಯದ ಬೆಳೆ ಹುಲುಸಾಗಿ ಬೆಳೆಯುತ್ತಿz.É ಹಿರಿಯರು ಕಿರಿಯರೆನ್ನದೆ ಈ ಕೃಷಿಯಲ್ಲಿ ತೊಡಗಿಕೊಳ್ಳುತ್ತಿವುದು ಆಶಾದಾಯಕ ಬೆಳವಣಿಗೆಯೆಂದು ವಿಶ್ಲೇಷಿಸಲಾಗುತ್ತಿದೆ. ಆದರೂ ಟಿವಿ, ಕಂಪ್ಯೂಟರ್, ಮೊಬೈಲ್‍ಗಳ ವಿಪರೀತ ಬಳಕೆಯಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಇದರಿಂದ ಓದುವ ಸಂಸ್ಕøತಿ ನಶಿಸುತ್ತಿದೆ. ಇದು ಕಳವಳದ ಸಂಗತಿ. ಕಾಲಕ್ಕನುಗುಣವಾಗಿ ಪಠ್ಯಪುಸ್ತಕಗಳು ಬದಲಾವಣೆಯಾಗುವುದು ಸಗಜವಾದರೂ ಮಕ್ಕಳ ಕುತೂಹಲ ಕೆರಳಿಸುವಂಥ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸುವ ರೀತಿಯಲ್ಲಿ ಅಂದರೆ ಹಳೆ ಬೇರು ಹೊಸ ಚಿಗುರು ಬೆರೆಯುವಂತೆ ಪಠ್ಯ ವಿಷಯಗಳಿದ್ದರೆ ಚೆನ್ನ ಎಂಬ ಕೂಗು ಇಂದು ಕೇಳಿ ಬರುತ್ತಿದೆ. ಪುಸ್ತಕ ಪ್ರಕಟಣೆಗಳ ಸಂಖ್ಯೆ ಗಮನಿಸಿದರೆ ಅದು ಹೆಚ್ಚಿನ ರೀತಿಯಲ್ಲಿ ಸಾಗುತ್ತಿದೆ. ಅದರಂತೆ ಗುಣಮಟ್ಟವೂ ವೃದ್ಧಿಸಬೇಕಿದೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿರುವ ನಾವೆಲ್ಲ ನಾಳಿನ ಜಗತ್ತಿಗಾಗಿ, ಸೂಕ್ಷ್ಮಮತಿಗಳಾಗಿ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವದೊಡನೆ ಸಾಹಿತ್ಯ ರಚನೆ ಮಾಡುವುದು ಇಂದಿನ ಅಗತ್ಯವಾಗಿದೆ.
ಒಟ್ಟಿನಲ್ಲಿ ಬಾಗಲಕೋಟ ಜಿಲ್ಲಾ ಸಾಹಿತ್ಯ ಸಮಾಗಮದ ಕಾರ್ಯ ಚಟುವಟಿಕೆಗಳು ಶ್ಲಾಘನೀಯವಾಗಿವೆ. ಎಲೆಮರೆಯ ಕಾಯಿಯಂತಿರುವ ಅದೆಷ್ಟೋ ಪ್ರತಿಭೆಗಳಿಗೆ ವೇದಿಕೆಗಳನ್ನು ಕಲ್ಪಿಸುತ್ತಿದೆ. ಮಕ್ಕಳ ಸಾಹಿತ್ಯ ಬೆಳೆಸುವಲ್ಲಿ ಧಾಪುಗಾಲು ಹಾಕುತ್ತಿದೆ, ಜಿಲ್ಲೆಯಾದ್ಯಂತ ತಾಲೂಕು ಘಟಕಗಳನ್ನು ಪ್ರಾಂಭಿಸಿ ಅವುಗಳ ಮೂಲಕ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ, ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವುದು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ದಾನಿಗಳ ಸಹಕಾರದೊಂದಿಗೆ ನೆರವೇರಿಸುತ್ತಿದೆ. ಸಂಘಟನೆಯನ್ನು ಕಟ್ಟಿ ಬೆಳೆಸುತ್ತಿರುವ ಮಹನಿಯರಲ್ಲಿ ಹಿರಿಯರಾದ ಅನ್ನದಾನಿ ಹಿರೇಮಠ, ಸಮಾಗಮದ ಜಿಲ್ಲಾಧ್ಯಕ್ಷರಾದ ಗುರುಸ್ವಾಮಿ ಗಣಾಚಾರಿ ಗುರುಗಳು ಹಾಗೂ ಎಸ್. ಎಸ್. ಹಳ್ಳೂರ ಮತ್ತು ಸಮಾಗಮದ ಸರ್ವ ಪದಾಧಿಕಾರಿಗಳ ಕಾಳಜಿ ಅಪಾರವಾಗಿದೆ. ಅವರೆಲ್ಲರಿಗೂ, ಶಿರೂರಿನ ಎಲ್ಲ ಸಾಹಿತ್ಯಾಸಕ್ತರು, ಸಾಹಿತಿಗಳು, ಗುರುಹಿರಿಯರು, ಸಮಾದಾನದಿಂದ ಸಮ್ಮೇಳನದಲ್ಲಿ ಭಾಗವಹಿಸಿದ ವಿದ್ಯಾರ್ಥಿ ವಿದಾರ್ಥಿನಿಯರು ಹಾಗೂ ಅವರಿವರೆನ್ನದೆ ಎಲ್ಲ ನನ್ನ ಆತ್ಮೀಯರಿಗೆ ನಮನಗಳನ್ನು ಸಲ್ಲಿಸುತ್ತ ನನ್ನ ಮಾತುಗಳಿಗೆ ವಿರಾಮ ನೀಡುತ್ತೇನೆ. ಸರ್ವರೆಲ್ಲರಿಗೂ ಧನ್ಯವಾದಳು
ಜೈ ಕರ್ನಾಟಕ
ವರದಿ ಜಗದೀಶ ಮಲ್ಲಪ್ಪ ಹದ್ಲಿ
ಸಂಘಟನಾ ಕಾರ್ಯದರ್ಶಿಗಳು ‍ಮಕ್ಕಳ ಸಾಹಿತ್ಯ ಸಮಾಗಮ ತಾಲೂಕಾ ಘಟಕ ಹುನಗುಂದ

Comments