UK Suddi
The news is by your side.

ಮರೆಯಲಾಗದ ಪ್ರೇಮಿಗಳ ದಿನದ ಸಂಭ್ರಮ.

ಗೆಳತಿ,
ನನಗೆ ಇನ್ನೂ ನೆನಪಿದೆ ಎರಡು ಸಾವಿರನೇ ಇಸವಿ. ನಾನು ಪದವಿ ವ್ಯಾಸಾಂಗ ಮಾಡುತ್ತಿದ್ದ ಕಾಲವದು. ಚಿಗುರು ಮೀಸೆ ಹೊತ್ತು ಭವಿಷ್ಯದ ಕನಸುಗಳನ್ನು ಕಾಣುತ್ತಿದ್ದವನು. ವಾಣಿಜ್ಯಶಾಸ್ತ್ರದಲ್ಲಿ ಪದವಿ ಮುಗಿಸಿ ಎಲ್ ಎಲ್ ಬಿ ಮಾಡಿಕೊಂಡು ದೊಡ್ಡ ಲಾಯರ್ ಆಗಬೇಕೆಂದುಕೊಂಡಿದ್ದವನು. ಅದೇ ಗುಂಗಿನಲ್ಲಿ ಒಮ್ಮೆ ಬಸ್ಸಿನಲ್ಲಿ ನಮ್ಮೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದಾಗ ನಿನ್ನ ಮೊದಲ ಭೇಟಿಯ ಸಿಹಿನೆನಪುಗಳ ಹಂಚಿಕೊಳ್ಳುವ ಸೌಭಾಗ್ಯ ಇದು. ಆ ಬಸ್ಸಿನ ಎಲ್ಲಾ ಸೀಟುಗಳು ತುಂಬಿದ್ದವು. ಬಸ್ಸಿನ ಮಧ್ಯಭಾಗದಲ್ಲಿ ನಾನು ಕುಳಿತ್ತಿದ್ದೆ. ಅದರಲ್ಲಿ ಒಂದು ಸೀಟು ಮಾತ್ರ ಖಾಲಿಯಿತ್ತು. ನನ್ನನೂರಿನಿಂದ ಮೂರನೇ ನಿಲ್ದಾಣದಲ್ಲಿ ನೀ ಬಸ್ ಹತ್ತಿ ಒಳ ಬಂದೆ. ತಂಗಾಳಿಯ ಕಾಲವಾದ್ದರಿಂದ ಗಾಳಿ ಸ್ವಲ್ಪ ಜೋರಾಗಿಯೇ ಬೀಸುತ್ತಿತ್ತು. ಅದರ ರಭಸಕ್ಕೆ ಕಟ್ಟಿದ್ದ ತಲೆಕೂದಲು ಅವುಗಳ ಬಂಧನವನ್ನು ಬಿಡಿಸಿಕೊಂಡು ನಿನ್ನ ಕಪೋಲಕ್ಕೆ ಎಡೆಬಿಡದೆ ಮುತ್ತಿಕ್ಕುತ್ತಿದ್ದವು. ಕೈಬೆರಳುಗಳಿಂದ. ನಿನಗೇ ಅರಿವಿಲ್ಲದಂತೆ ಅವುಗಳನ್ನು ಕರ್ಣಗಳ ಸನಿಹಕ್ಕೆ ನಾಜೂಕಾಗಿ ಸರಿಸುತ್ತಿದ್ದ ಕಂಡು ಒಮ್ಮೆ ವಿಚಲಿತನಾದೆ.

ನಿನ್ನ ಕಣ್ಣುಗಳ ಹುಡುಕಾಟವೇ ಹೇಳುತ್ತಿತ್ತು ಹೆಂಗಸರು ಕೂರುವ ಜಾಗದಲ್ಲೇ ಕೂರಬೇಕೆಂದು. ನೋಡಲು ನೀ ಅಷ್ಟೇನು ಸುಂದರವಾಗಿಲ್ಲದಿದ್ದರೂ ನಿನ್ನ ಉಡುಗೆ ತೊಡುಗೆಗಳಿಂದಲೇ ಕಾಣಬಹುದಿತ್ತು ನೀಉ ಪಾಶ್ಚ್ಯಾತ್ಯಾ ಸಂಸ್ಕೃತಿಯನ್ನ ಅಪ್ಪಿಕೊಂಡಿದ್ದವಳೆಂದು. ನಿನ್ನ ಹೈಹೀಲ್ಡ್ ಚಪ್ಪಲಿಗಲಕು, ನೀ ತೊಟ್ಟಿದ್ದ ಬಿಗಿಯಾದ ಕಪ್ಪು ಜೀನ್ಸ್ ಪ್ಯಾಂಟ್, ಅದಕ್ಕೊಪ್ಪುವ ಟೀ-ಶರ್ಟ್ , ಮೇಲೊಂದು ಹೊದಿಕೆ, ಸಾಲದೆಂಬಂತೆ ಕಂಕುಳಲ್ಲಿ ವ್ಯಾನಿಟಿ ಬ್ಯಾಗ್. ಬಸ್ಸಿನ ಕುಲುಕಾಟಕ್ಕೆ ಸರಿಯಾಗಿ ನಿಲ್ಲಲಾರದೆ ವಿಧಿ ಇಲ್ಲದೆ ನನ್ನ ಬಳಿಯೇ ಹೆಜ್ಜೆ ಇರಿಸಬೇಕಿತ್ತು.

ನನಗೆ ಸಾಂಪ್ರದಾಯಕವಾದ ಉಡುಪುಗಳೆಂದರೆ ಬಲು ಇಷ್ಟ. ಆದರೆ ನಿನ್ನ ಉಡುಗೆ ತೊಡುಗೆಗಳು ನನಗೆ ಇಷ್ಟವಾಗಿರಲಿಲ್ಲ. ಬಳಿ ಬಂದವಳೇ ನಿಲ್ಲು ತ್ರಾಣವಿಲ್ಲದವರಂತೆ ದಿಢೀರನೆ ನನ್ನ ಮೇಲೆ ಬೀಳುವಂತೆ ಮೈಯ ಸೋಕಿಸಿ ಕುಳಿತುಬಿಟ್ಟೆ. ಏನು ಹೇಳಬೇಕು ಎಂದು ನನಗೆ ತೋಚಲೇ ಇಲ್ಲ. “ಸಾರಿ” ಎಂಬ ನುಡಿ ಬೇರೆ ಕೇಳಿದ್ದರಿಂದ ಪರವಾಗಿಲ್ಲವೆಂದು ಮುಖವನ್ನು ನಗುವಂತೆ ಮಾಡಿಕೊಂಡು ನಾನೇ ಸ್ವಲ್ಪ ಪಕ್ಕಕ್ಕೆ ಸರಿಸಿ ಕುಳಿತುಬಿಟ್ಟೆ. ನಿನಗೋ ಅದಾವುದರ ಗಮನವೂ ಇಲ್ಲದಂತೆ ನಿನ್ನ ಕೂದಲನ್ನೇ ಸರಿಮಾಡಿಕೊಳ್ಳುತ್ತಿದ್ದೆ. ಅದೇನೋ ಆಗಲೇ ಸುಗಂಧ ದ್ರವ್ಯ ( ಪರ್ಫ್ಯೂನ್ ) ವನ್ನೆಲ್ಲಾ ಬಳಸುತ್ತಿದ್ದೆ ನೀನು. ಆ ನಿನ್ನ ಸುಗಂಧದ ವಾಸನೆ ನನ್ನನ್ನು ಉಸಿರುಗಟ್ಟಿಸುವಂತಿತ್ತು. ಯಾಕೆಂದರೆ ಅದರ ವಾಸನೆಯೇ ನನಗೆ ಆಗುತ್ತಿರಲಿಲ್ಲ. ಆ ಕಾಲಕ್ಕೆ ನಾನಿನ್ನು ಹಳ್ಳಿಯ ಮುಗ್ದ ಹುಡುಗನಂತೆ, ನೀನೋ ಆಧುನಿಕತೆಯ ಪ್ರತಿರೂಪದಂತೆ ಪ್ರತಿಬಿಂಬಿಸುತ್ತಿದ್ದೆ. ಇನ್ನು ನೀ ಈಗಿನ ದಶಕದಲ್ಲಿ ಇದ್ದಿದ್ದರೆ ನಿನ್ನ ಅವತಾರಗಳು ಎಷ್ಟಿರುತ್ತಿದ್ದವೋ? . ಕೈಯಲ್ಲೊಂದು ಮೊಬೈಲ್ ಹಿಡಿದಿದ್ದರೆ ಅದರೊಳಗೇ ಮುಳುಗಿರುತ್ತಿದ್ದೆ ಏನೋ ?.

ನನ್ನ ಕಸಿವಿಸಿ ನಿನಗೆ ಅರ್ಥವಾದಂತಿತ್ತು. ನನ್ನ ಇಷ್ಟವಿರದ ಮುಖವನ್ನೊಮ್ಮೆ ನೋಡಿ “Any disturb” ಎಂದು ಇಂಗ್ಲೀಷ್ ನಲ್ಲಿ ಕೇಳಿಯೇ ಬಿಟ್ಟೆ. ನಾನು ಪದವಿ ಓದುತ್ತಿದ್ದರೂ ಇಂಗ್ಲೀಷಿನ ಗಂಧ ಅಷ್ಟಕಷ್ಟೇನೇ. ನನಗೆ ತಿಳಿದ ಸ್ವಲ್ಪ ಇಂಗ್ಲೀಷಿನಲ್ಲಿ ” No No” ಎಂದೆ. “My name is Bhoomika. what about you” ಎಂದು ಮತ್ತೊಂದು ಪ್ರಶ್ನೆ.ಈ ಮಾತನ್ನು ಕೇಳಿ ನನಗೆ ಐದನೇ ತರಗತಿಯ ಇಂಗ್ಲೀಷ್ ಕಲಿಕೆಯಲ್ಲಿನ ಶುರುವಾತಿನಲ್ಲಿ ಹೇಳುತ್ತಿದ್ದದ್ದು ನೆನಪಿಗೆ ಬಂತು.ಧೃಡವಾಗಿ “My name is mahadev” ಎಂದೆ. ನನಗೆ ಅಪರಿಚಿತರ ಜೊತೆ ಹೆಚ್ಚಿಗೆ ಮಾತನಾಡಲು ಇಷ್ಟವಿರಲಿಲ್ಲ. ಆದರೂ ನೀ ಬಿಡುತ್ತಿರಲಿಲ್ಲ. ಯಾರಿಗೂ ಅಂಜದ ಎದೆಗಾರಿಕೆ. ಯಾರು ಏನು ತಿಳಿದುಕೊಳ್ಳುತ್ತಾರೋ ಎಂಬ ಭಯವಿಲ್ಲದ ತೆರೆದ ಮನಸ್ಸಿನವಳು ನೀಮು ಎಂದು ಗೊತ್ತಾಗುತ್ತಿತ್ತು. ಆದರೆ ನನಗೇ ಸಂಕೋಚ ನಿನ್ನ ಜೊತೆ ಮಾತನಾಡಲು. ಮೂಗಿಗೆ ನೀ ಹಾಕಿದ್ದ ಮಯಕುರ (ರಿಂಗ್) ನಿನ್ನ ಅಂದವನ್ನು ಹೆಚ್ಚಿಸಿತ್ತು. ಮತ್ತೊಮ್ಮೆ ನೋಡಬೇಕು ಎನ್ನುವಂತೆ ಸೆಳೆಯುತ್ತಿತ್ತು. ನೀ ತೊಟ್ಟಿದ್ದ ವಸ್ತ್ರ ಮತ್ತು ಅದರ ವಿನ್ಯಾಸವನ್ನು ನೋಡುತ್ತಿದ್ದರೆ ನೋನೊಬ್ಬಳು ಸಿರಿವಂತ ಮನೆಯ ಮಗಳೇ ಇರಬೇಕು ಎನಿಸುತ್ತಿತ್ತು.

ಸರಿಯಿಲ್ಕದ ರಸ್ತೆಯ ಓಲಾಟಕ್ಕೆ ನನ್ನ ಕೈಯಲ್ಲಿದ್ದ ವಾಣಿಜ್ಯಶಾಸ್ತ್ರದ ಪುಸ್ತಕವೊಂದು ಕೈಜಾರಿ ನಿನ್ನ ಪಾದದ ಬಳಿ ಬಿತ್ತು. “ಸಾರಿ” ಎಂದು ನಾನೂ ಕೂಡ ನಿನ್ನನ್ನೇ ಅನುಸರಿಸಿದೆ.” No mention” ಎನ್ನುತ್ತಾ ಬಗ್ಗಿ ಪುಸ್ತಕವನ್ನು ಎತ್ತಿಕೊಂಡು ನೋಡುತ್ತಲೇ “Oh ನೀವು ಬಿ.ಕಾಂ ಸ್ಟೂಡೆಂಟಾ, So nice” ಬಡ ಬಡ ಬಡಾ ಅಂತ ಮಾತನಾಡುತ್ತಲೇ ಇದ್ದೆ. ನನ್ಮ ಮನಸ್ಸಿನೊಳಗೆ ಅಯ್ಯೋ ದೇವರೆ ಯಾಕಪ್ಪಾ ಇವಳನ್ನು ಇಲ್ಲಿ ಕೂರಿಸಿದೆ ಎನಿಸಿಬಿಟ್ಟಿತ್ತು. ಇಷ್ಟೆಲ್ಲಾ ಅವಾಂತರಗಳ ನಡುವೆ ಮೈಸೂರು ಬಂದದ್ದೇ ಗೊತ್ತಾಗಲಿಲ್ಲ.ಸಿಟಿ ಬಸ್ ನಿಲ್ದಾಣಕ್ಕೆ ಬಂದಂತೆ “Bye ನನಗೆ ಬಸ್ಸಿದೆ ಬೇಗ ಹೋಗಬೇಕೆಂದು ಹೊರಟು ಬಿಡೋದೇ ?.ನಾನಂತೂ ಅಬ್ಬಾ ….ಹೋಯಿತಲ್ಲಾ ಬಿರುಗಾಳಿ ಎನಿಸಿದ್ದು ಸುಳ್ಳಲ್ಲ. ಹುಡುಗಿಯರು ಹೀಗೂ ಇರುತ್ತಾರ ಅಂತ ಆ ಕ್ಷಣದಲ್ಲಿ ನನಗೆ ಅನಿಸಿತ್ತು. ಏಕೆಂದರೆ ಬಹಳಷ್ಟು ಹೆಣ್ಣು ಮಕ್ಕಳು ಪರಿಚಯವಿಲ್ಲದವರ ಜೊತೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಹೆಣ್ಣು ಗಂಡು ಎಂದ ಮೇಲೆ ಏನೋ ಒಂದು ರೀತಿ ನೋಡುತ್ತಾರೆ. ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೋ ಎಂಬ ಭಯವಿರುತ್ತದೆ. ಅಂತಹುದರಲ್ಲಿ ಈ ಹುಡುಗಿ ಇಷ್ಟೊಂದು ತೆರೆದ ಮನಸ್ಸಿನವಳು ಎಂದು ಆಶ್ಚರ್ಯ ಚಕಿತನಾದೆ ಹಾಗೂ ಹೆಮ್ಮೆ ಪಟ್ಟೆ. ಬಿರುಗಾಳಿ ಬಂದು ಬೀಸಿ ಹೋದಂತೆ, ಆಲಿಕಲ್ಲು ಮಳೆ ರಪರಪನೆ ಬಿದ್ದು ಸದ್ದಡಗಿದಂತೆ, ಬೋರ್ಗರೆವ ಕಡಲ ಅಲೆಗಳು ತೆರೆಗೆ ಅಪ್ಪಳಿಸಿ ಹೋದಂತೆ ಆಗಿತ್ತು ನೀ ಹೋದ ಕ್ಷಣ. ನಡೆದ ಘಟನೆಯನ್ನು ಮೆಲುಕು ಹಾಕುತ್ತಾ ಕಾಲೇಜ್ ಕಡೆ ಹೊರಟೆ.

ಅಂದು ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ. ಹಬ್ಬವೆಂದ ಮೇಲೆ ಕೇಳಬೇಕೇ ?. ಹಡಣ್ಣುಮಕ್ಕಳಿಗೆ ಎಲ್ಲಿಲ್ಲದ ಸಡಗರ ಸಂಭ್ರಮ. ಹೊಸ ಬಟ್ಟೆ ತೊಟ್ಟು ಅದಕ್ಕೊಪ್ಪುವ ಮ್ಯಾಚಿಂಗ್ ಗಳನ್ನು ಹಾಕುಕೊಂಡು ಮೆರವಣಿಗೆ ಹೊರಟರೇನೇ ಸಮಾಧಾನ. ಅದೇಕೋ ಅಂದು ಶಾಲೆಗೆ ರಜೆ ಘೋಷಿಸಿದ್ದರಿಂದ ಸಮಯ ಕಳೆಯಲೆಂದು ಚಾಮುಂಡಿ ಬೆಟ್ಟಕ್ಕೆ ಹೋಗೋಣವೆಂದು ನಾನು ಮತ್ತು ನನ್ನ ಗೆಳೆಯರು ಸೇರಿ ತೀರ್ಮಾನಿದ್ದೆವು. ಕಾಕತಾಳೀಯವೋ ಅಥವಾ ನನ್ನ ಅದೃಷ್ಟವೋ ಗೊತ್ತಿಲ್ಲ. ನಿನ್ನ ಗೆಳತಿಯರೊಂದಿಗೆ ನೀನೂ ಬಂದಿರುವುದೇ ಚಾಮುಂಡಿ ಬೆಟ್ಟಕ್ಕೆ. ಹೇಳಿ ಕೇಳಿ ನೀನು ಫ್ಯಾಷನ್ ಹುಡುಗಿಯಾಗಿದ್ದರಿಂದ ಅಂದು ನೀ ಧರಿಸಿದ್ದ ಡ್ರೆಸ್ ತುಂಬಾ ಚನ್ನಾಗಿತ್ತು. ಆ ಡ್ರೆಸ್ ನಿಂದ ನೀನು ಚನ್ನಾಗಿ ಕಾಣುತ್ತಿದ್ದೆಯೋ ಇಲ್ಲಾ ನಿನ್ನಿಂದ ಡ್ರೆಸ್ ಚನ್ನಾಗಿತ್ತೋ ಗೊತ್ತಿಲ್ಲ. ಅಂತಿಮವಾಗಿ ಮತ್ತೆ ಮತ್ತೆ ನೋಡುವಂತೆ ಫಳಫಳಿಸುತ್ತಿದ್ದೆ. ಮಾತನಾಡಿಸೋಣ ಎನಿಸಿದರೂ ನನ್ನ ಗೆಳೆಯರು ಜೊತೆಯಲ್ಲಿ ಇದ್ದುದರಿಂದ ಸ್ವಲ್ಪ ಸಂಕೋಚವಾಗಿ ದೂರದಿಂದಲೇ ನಿನ್ನಂದವನ್ನು ನೋಡಿ ಅನುಭವಿಸುತ್ತಿದ್ದೆ. ನನ್ನ ಅದೃಷ್ಟಕ್ಕೆ ನೀನು ನನ್ನನ್ನು ನೋಡಿರಲಿಲ್ಲ. ಆ ಸಮಯಕ್ಕೆ ಇತ್ತೀಚಿಗೆ ನಾ ಬರೆದ ಕವನದ ಸಾಲುಗಳು ನೆನಪಿಗೆ ಬಂತು

ನೀ ಅಷ್ಟೊಂದು ಚನ್ನಾಗಿಲ್ಲದಿದ್ದರೂ
ನನಗೇಕೆ ನೀನು ಇಷ್ಟವಾದೆ
ನಿನ್ನ ಕುಡಿನೋಟ ಇರಬಹುದೇ ?
ನಿನ್ನ ಮುಗುಳ್ನಗೆ ಇರಬಹುದೇ ?
ಇಲ್ಲಾ…ನಿನ್ನ ಕೊಂಕು ನುಡಿ ಇರಬಹುದೇ..?
ತಿಳಿಯದು ಯಾವುದಿದ್ದರೂ ಸರಿಯೇ ..?

ಬಸ್ಸಿನಲ್ಲಿ ನನಗೆ ಕಸಿವಿಸಿ ಎನಿದ್ದರೂ ಬೆಟ್ಟದಲ್ಲಿ ಮಾತ್ರ ಅದೇಕೋ ನಿನ್ನ ಮೇಲೆ ಮನಸ್ಸಾಗಿ ಹೋಗಿತ್ತು. ನಿನ್ನ ಕಣ್ಣಿಗೆ ಬೀಳಬಾರದು ಎಂದುಕೊಂಡು ನನ್ನ ಗೆಳೆಯರನ್ನು ದೇವಸ್ಥಾನದ ಒಳಗೆ ಕರಡದುಕೊಂಡು ಹೋದೆ.ಅಷ್ಟರಲ್ಲಿ ಅಲ್ಲಿ ಮಂಗಳಾರತಿ ನಡೆಯುತ್ತಿತ್ತು. ಭಕ್ತಿಯಿಂದ ಕೈಮುಗಿದು ನಮ್ಮ ಬೇಡಿಕೆಗಳನ್ನ ದೇವಿಯಲ್ಲಿ ಮೊರೆಯಿಟ್ಟು ಹಿಂದಿರುಗಿ ಬರುವಾಗ ಕಂಡದ್ದು ಮಾತ್ರ ಸೋಜಿಗ.

ಮಂತ್ರಗಳ ಜಪಿಸುತ್ತಲೋ ಇಲ್ಲಾ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತಲೋ ಕಣ್ಣು ಮುಚ್ಚಿ ಪ್ರಶಾಂತತೆಯ ವದನದಿಂದ ಹಜ್ಜನಮಸ್ಕಾರವನ್ನು ಮಾಡಿತ್ತಿದ್ದೆ. ಆ ನಿನ್ನ ನಿರ್ಮಲವಾದ ವದನವ ಕಂಡು ಪುಳಕಿತನಾದೆ. ಅ ದಿನ ಹೆಣ್ಣು ಎಂದರೆ ಹೀಗೂ ಇರಬಹುದೇ ಅಂದಿದ್ದೆ, ಈ ದಿನ ಹೀಗೂ ಇರಬಹುದು ಎನಿಸಿತು. ನಿನ್ನ ಮುಗ್ಧತೆಯ ಮೌನಕ್ಕೆ ನಾ ಮತ್ತಷ್ಟು ಕರಗಿಹೋಗಿದ್ದೆ. ಮತ್ತದೇ ಕವನದ ಸಾಲುಗಳು ಇಣುಕಿದವು

ನಿನ್ನನ್ನೊಮ್ಮೆ ದೇವಸ್ಥಾನದಿ ಕಂಡಾಗ
ಅಂದು ನೀ ಧರಿಸಿದ್ದ ವಸ್ತ್ರ ನೋಡಿ
ಮರುಳಾದೆನೇ..? ಇಲ್ಲಾ
ಭಕ್ತಿಯಿಂದ ಧ್ಯಾನಿಸುವಾಗಿದ್ದ
ಪ್ರಶಾಂತ ಮೌನಕ್ಕೆ ಶರಣಾದೆನೇ ?
ತಿಳಿಯದು ಯಾವುದಿದ್ದರೂ ಸರಿಯೇ..?

ನಾ ಬರೆದ ಈ ಕವನದ ಸಾಲುಗಳು ಅಂದಿನ ಸಂದರ್ಭಕ್ಕೆ ಎಷ್ಟು ಸೂಕ್ತವಾಗಿದೆಯಲ್ಲವೇ..?.
ನಮ್ಮಿಬ್ಬರದು ಅದು ಎರಡನೇ ಭೇಟಿಯಾಗಿತ್ತು. ಧ್ಯಾನದಿಂದ ನೀ ಕಣ್ಣು ತೆಗೆಯುವಷ್ಟರಲ್ಲಿ ಹೊರಟು ಬಿಡೋಣ ಎನಿಸಿದರೂ, ಮತ್ತೊಮ್ಮೆ ನೋಡೋಣವೆನಿಸಿತ್ತು. ನನ್ನ ಗೆಳೆಯರು ಅವರ ಹತ್ತಿರದವರು ಯಾರೋ ಸಿಕ್ಕಿದರೆಂದು ಮಾತನಾಡುತ್ತಾ ಮರೆಯಾಗಿದ್ದರು. ನಾನು ಒಳಗಿನ ಕಳ್ಳ ಕಣ್ಣಿನಿಂದ ನಿನ್ನನ್ನೇ ದಿಟ್ಟಿಸುತ್ತಿದ್ದೆ. ವಾಸ್ತವವಾಗಿ ಮೈಮರೆತು ಹೋಗಿದ್ದೆ. ಎದುರಿಗೆ ಬಂದು ನಿನ್ನ ಮೂಲ ಧಾಟಿಯಲ್ಲೇ “Hello..Hello..are you there..?” ಎಂಬ ಶಬ್ಧ ಕಿವಿಗೆ ಬಿದ್ದು ತಕ್ಷಣ ಎಚ್ಚೆತ್ತುಕೊಂಡು Hello ನಮಸ್ಕಾರ ಎಂದೆ. ” ಏನ್ರೀ ಅವತ್ತು ಬಸ್ಸಿನಲ್ಲಿ ಮಾತೇ ಆಡದವರು ಇಂದು ಇಲ್ಲಿ ಬಂದು ಏನ್ ಮಾಡ್ತಾ ಇದೀರ..? ಚನ್ನಾಗಿದ್ದೀರ. ಒಬ್ಬರೇ ಬಂದಿದ್ದೀರ ..? ನಾನು ಆ ದಿನ ನಿಮ್ಮನ್ನ ಗಮನಿಸುತ್ತಾ ಇದ್ದೆ ಒಂದು ರೀತಿಯ ತಿರಸ್ಕಾರ ಮನೋಭಾವದಿಂದ ಇದ್ದಂತ್ತಿತ್ತು. ಆದರೆ ಇಂದು ತದೇಕ ಚಿತ್ತದಿಂದ ನನ್ನನ್ನೇ ನೋಡ್ತಾ ಇದೀರ”.ಮತ್ತದೇ ಮಾತಿನ ಮಳೆ. “ಹಾಗೇನಿಲ್ಲ, ಎಂದು ಮಾತು ಬದಲಿಸಿ ನೀವು ಇಂದು ತುಂಬಾ ಸುಂದರವಾಗಿದ್ದೀರಿ ಎಂದು ಧೈರ್ಯ ಮಾಡಿ ಹೇಳಿಬಿಟ್ಟಿದ್ದೆ.”Thank you ಬನ್ನಿ ದೇವಿ ದರ್ಶನ ಮಾಡೋಣ ” ಎಂದು ಬಿಡದೇ ಎಳೆದೊಯ್ದೆ. ನಾನು ಮರು ಮಾತನಾಡದೇ ನಿನ್ನನ್ನೇ ಹಿಂಬಾಲಿಸಿದೆ. “ಅರ್ಚನೆ ಮಾಡಿ ಇಂದು ನನ್ನ ಜನ್ಮದಿನ ಅಂತ ಪೂಜಾರಿಗೆ ಹೇಳಿದಾಗ ತಡಮಾಡದೇ ” ಹೌದಾ ಹುಟ್ಟಿದ ಹಬ್ಬದ ಶುಭಾಶಯಗಳು” ಎಂದು ಹಾರೈಸಿದೆ.

ಜನ್ಮ ದಿನದ ಪ್ರಯುಕ್ತ ನೀ ತಂದಿದ್ದ ರವೆ ಉಂಡೆ ಡಬ್ಬವನ್ನು ನನ್ನ ಕೈಯಲ್ಲಿರಿಸಿ ಹಿಂಬಾಲಿಸುವಂತೆ ಹೇಳಿ ರಾಣಿಯಂತೆ ಹೊರಟು ಬಿಟ್ಟೆ. ಸೇವಕನಂತೆ ನಿನ್ನ ಹಿಂದೆ ಬಂದೆ. ದೇವಸ್ಥಾನದ ಹೊರಗೆ ಕುಳಿತಿದ್ದ ಬಡವರಿಗೆ, ಭಿಕ್ಷುಕರಿಗೆ, ನಿರ್ಗತಿಕರಿಗೆ ಹಂಚುತ್ತಿದ್ದ ನೋಡಿ ಭಲೇ ಹುಡುಗಿ ಎನಿಸಿತ್ತು. ಮಾನವೀಯತೆಯ ಗುಣವನ್ನ ನಿನ್ನಿಂದ ಕಲಿಯಬೇಕು ಎನಿಸಿತ್ತು. ನನ್ನ ಗೆಳೆಯರು ನನ್ನನ್ನ ಹುಡುಕುತ್ತಿದ್ದಾರೆ ಎಂದು ತಿಳಿಯಿತು. ದೂರದಲ್ಲಿದ್ದವರ ನಾನೇ ಕೂಗಿ ಕರೆದು ರವೆ ಉಂಡೆಯನ್ನು ಅವರ ಕೈಗೂ ಇಟ್ಟೆ. ಅವರಿಗೆ ನನ್ನ ಮೇಲೆ ಅನುಮಾನ ಶುರುವಾಯಿತು. “ದೇವಸ್ಥಾನಕ್ಕೆ ಎಂದು ಕರೆದುಕೊಂಡು ಬಂದು ಏನು ಮಾಡ್ತಾ ಇದೀಯಪ್ಪಾ ಇಲ್ಲಿ” ಎಂದು ಪ್ರಶ್ನಿಸತೊಗಿದರು. ನೀನೋ ನನಗೆ ಸಂಬಂಧನೇ ಇಲ್ಲದವಳಂತೆ ಯಾರೋ ಪರಿಚಯಸ್ಥರು ಅಂತ ಹೇಳಿ ಮಾತನಾಡುತ್ತಾ ನಿಂತಿದ್ದೆ. “ಬಿಸಿ ತುಪ್ಪ ನುಂಗಲೂ ಆಗೋದಿಲ್ಲ, ಉಗಿಯೋಕ್ಕು ಆಗೋದಿಲ್ಲ” ಎಂದು ಮನಸ್ದಿನಲ್ಲಿ ಹೇಳಿಕೊಂಡು ನನ್ನ ಗೆಳಯರಿಗೆ ನಡೆದ ಎಲ್ಲಾ ಸಂಗತಿಗಳನ್ನು ಹೇಳಿಬಿಟ್ಟಿದ್ದೆ. “ರೀ ಭೂಮಿಕಾ ರವರೇ ನಾನು ಹೊರಡಬೇಕು ಬನ್ನಿ” ಎಂದಾಗಲೇ ನಿನಗೆ ಓ ನನಗಾಗಿ ಯಾರೋ ಕಾಯುತ್ತಿದ್ದಾರೆ ಎನಿದಿ “ಸಾರಿ” ಎಂದು ಬಂದವಳೇ “ಏನ್ರೀ ಸ್ವಲ್ಪ ಕಾಯೋಕ್ಕಾಗಲ್ವಾ.? ಎಂದು ನನಗೇ ದಬಾಯಿಸಿ ಬಿಟ್ಟೆ.” ಅಲ್ಲಾ ನಮಗೆ ಲೇಟಾಗ್ತಿದೆ ಹೋಗಬೇಕು” ನನ್ನ ಉತ್ತರಕ್ಕೆ “ನಮ್ಮನೆ ಏನು ಇಲ್ಲೇ ಇದೀಯ ನಾವು ಹೋಗಬೇಕು ನಸನು ಬರುತ್ತೇನೆ ಹೋಗೋಣ” ಎಂದು ನಗುತಾ ಹೇಳಿದೆ.

“ನಿಮ್ಮ ಸ್ನೇಹಿತರನ್ನು ಬಸ್ಸಿನಲ್ಲಿ ಕಳುಹಿಸಿಬಿಡಿ ನಾವು ಮೆಟ್ಟಿಲುಗಳ ಮುಖೇನ ನಡೆದು ಹೋಗುವ” ಎಂಬ ನಿನ್ನ ಮಾದಕತೆಯ ಮಾತಿಗೆ ನಾನು ಇಲ್ಲ ಎನ್ನಲಾಗಲಿಲ್ಲ. ಹೇಗೋ ನನ್ನ ಗೆಳೆಯರಿಗೆ ಸಮಾಧಾನ ಹೇಳಿ ಸಾಗಾಕಿಬಿಟ್ಟಿದ್ದೆ. ಮೊದಲನೇ ಮೆಟ್ಡಿಲಿನಿಂದ ಶುರುವಾದ ನಮ್ಮ ಮಾತುಕತೆ ಕೊನೆಯ ಮೆಟ್ಟಿಲಿನ ತನಕ ನಿಲ್ಲಿಸಲೇ ಇಲ್ಲ. ಪೂರ್ತಿ ಪರಿಚಯವೇ ಆಗಿ ಊರು , ಇಷ್ಟ , ಕಷ್ಟ ,ಆಸೆ,ತಿರಸ್ಕಾರ ಎಲ್ಲವೂ ಬಯಲಾಗಿ ಹೋಗಿತ್ತು.ನನ್ನ ಬಹುದಿನದ ಪ್ರಶ್ನೆಯೊಂದನ್ನು ಕೇಳಿದ್ದೆ ನಿನಗೆ ” ಇಷ್ಟು ಧೈರ್ಯ ಹೇಗೆ ನಿನಗೆ ” ಎಂದು. ಅದಕ್ಕೆ” ನಮ್ಮ ಮೇಲೆ ಮೊದಲು ನಮಗೆ ನಂಬಿಕೆ ಇರಬೇಕು ಆವಾಗ ಧೈರ್ಯ ತಾನಾಗೇ ಬರುತ್ತದೆ” ಎಂದೆ. ಆಗ ನಿನ್ನ ಮೇಲೆ ಗೌರವ ಹೆಚ್ಚಾಗಿತ್ತು. “:ಪರಿಚಯವೇ ಇಲ್ಲದವರ ಜೊತೆ ಇಷ್ಟೊಂದು ಸಲುಗೆ ಸರಿಯೇ” ನನ್ನ ಪ್ರಶ್ನೆಗೆ ” ನೀವು ಒಳ್ಳೆಯವರು ಅಂತ ಅನಿಸಿತು ಅದಕ್ಕೆ ನಿಮ್ಮ ಜೊತೆ ದಲುಗೆಯಿಂದ ನಡೆದುಕೊಂಡೆ. ನಿಮ್ಮನ್ನ ನಾನು ಮೊದಲ ದಿನವೇ ನಿಮ್ಮ ಮುಗ್ಧತೆಯ ನೊಇಡಿ ನಿರ್ಧರಿದಿದ್ದೆ.” ಎಂದಾಗ ಧನ್ಯವಾದಗಳು ನಿಮಗೆ ಎಂದು ಕೃತಘ್ನತೆಯನ್ನು ಸಲ್ಲಿಸಿದ್ದೆ. ಅದೇನು ಆತುರವೋ, ಕುತೂಹಲವೋ ನಿನ್ನ ನೇರ ನಡೆಯ ನೋಡಿ ಮೆಚ್ಚಿ ನಿನಗೆ ಶರಣಾಗಿ ” ನಿಮ್ಮ ಮಾನವೀಯತೆ ಗುಣ , ನೇರ ನುಡಿ ಸ್ವಭಾವ ನನಗೆ ತುಂಬಾ ಹಿಡಿಸಿತು ನಿಮ್ಮನ್ನು ಇಷ್ಟ ಪಡಬಹುದೇ” ಎಂದು ಪರೋಕ್ಷವಾಗಿ ಪ್ರೇಮ ನಿವೇದನೆ ಮಾಡಿಬಿಟ್ಟಿದ್ದೆ. ನಿನಗೆ ನನ್ನ ಮನಸ್ಸಿನ ಭಾವನೆ ಅರ್ಥವಾಗಿ ನನ್ನ ಮುಖವನ್ನೊಮ್ಮೆ ತೀಕ್ಣವಾಗಿ ನೋಡಿದವಳೇ ಹುಸಿ ನಗುವಿನೊಂದಿಗೆ ” ಅದನ್ನು ನೇರವಾಗೇ ಹೇಳಬಹುದಿತ್ತಲ್ಲಾ ಎಂದು ಛೇಡಿಸಿದೆ. ” ನನಗೆ ಸ್ವಲ್ಪ ಸಮಯ ಬೇಕು ಇಷ್ಟು ಬೇಗ ನಿಮ್ಮನ್ನ ಅರ್ಥಮಾಡಿಕೊಳ್ಳಲು ಆಗೋದಿಲ್ಲ ” ಎಂದು ಖಾರವಾಗಿ ಹೇಳಿಬಿಟ್ಟೆ. ಹಾಗೆ ಮಾತನಾಡುತ್ತಾ ಸಿಟಿ ಬಸ್ ನಿಲ್ದಾಣದ ವರೆಗೂ ಬಂದುಬಿಟ್ಟಿದ್ದೆವು. ನಾನು ಮಹಾರಾಣಿ ಕಾಲೇಜಿನಲ್ಲಿ ಓದುತ್ತಿದ್ಧೆನೆ ಯಾವಾಗಲಾದರೂ ಸಿಕ್ಕರೆ ಮತ್ತೊಮಗಮೊ ಭೇಟಿಯಾಗುವ ಎಂದು ಬಸ್ ಹತ್ತಿ ಹೊರಟುಬಿಟ್ಟೆ.ಯಾಕೆಂದರೆ ಈಗಿನ ತರ ಮೊಬೈಲ್ ಇರಲಿಲ್ಲ. ಇದ್ದಿದ್ದರೆ ನಂಬರ್ ತೆಗೆದುಕೊಂಡು ಸುಲಭವಾಗಿ ಮಾತನಾಡಬಹುದಿತ್ತು. ನಾನೂ ಏನೋ ಗೆದ್ದೆನೆಂಬ ಭಾವನೆಯೊಂದಿಗೆ ಹೊರಟೆ.

ಫೆಬ್ರವರಿ ತಿಂಗಳು 12 ನೇ ತಾರೀಖು ನಾನು ಊರಿನಿಂದ ಬಂದಿದ್ದೆ. ಸಿಟಿ ಬಸ್ ನಿಲ್ದಾಣದಲ್ಲಿ ಗೆಳತಿಯರ ಜೊತೆ ಮಾತನಾಡುತ್ತಾ ನೀ ನಿಂತಿದ್ದೆ ನನ್ನ ಕಂಡವಳೇ ಹಾಯ್ ಎಂದು ಬಳಿ ಬಂದು 14 ನೇ ತಾರೀಖು ತಪ್ಪದೇ ಚಾಮುಂಡಿ ಬೆಟ್ಟಕ್ಕೆ ಬನ್ನಿ ಕಾಯುತ್ತಿರುತ್ತೇನೆ ಎಂದವಳೇ ಗೆಳತಿಯರ ಕಡೆ ನಡೆದೇ ಬಿಟ್ಟೆ. ನನಗೆ ಆಶ್ಚರ್ಯ ಸರಿ ಎನ್ನುವಂತೆ ತಲೆ ಅಲ್ಲಾಡಿಸಿ ಕಾಲೇಜಿಗೆ ಹೊರಟೆ. ಏನಿರಬಹುದು 14 ನೇ ತಾರೀಖು ಎಂದು ಆಲೋಚಿಸುತ್ತಲೇ ಒಬ್ಬನೇ ಹೊರಟೆ. ಹಸಿರು ಲೆಹಂಗ ತೊಟ್ಟು ದೇವಸ್ಥಾನದ ಮುಂಭಾಗ ನಿನಗೆ ತೃಪ್ತಿ ನೀಡುವ ಕೆಲಸ ಭಿಕ್ಷುಕರಿಗೆ ದಾನ ಮಾಡುತ್ತಿದ್ದೆ. ನನ್ನನ್ನು ನೋಡಿ “ಯಾಕಿಷ್ಟು ಲೇಟು ಬನ್ನಿ”‘ ಎಂದು ದೇವರ ಗುಡಿ ಹತ್ತಿರ ಕರೆದುಕೊಂಡು ಹೋಗಿ ನನ್ನ ಹೆಸರಿನಲ್ಲಿ ಅರ್ಚನೆ ಮಾಡಿಸಿದೆ. “ಏನು ಈದಿನ ವಿಶೇಷ ನನ್ನ ಹೆಸರಲ್ಲಿ ಅರ್ಚನೆ ” ಎಂದೆ. ” ಈದಿನ ಪ್ರೇಮಿಗಳ ದಿನ ನಮ್ಮಿಬ್ಬರಿಗು ಶುಭದಿನ ನೀವು ಅಂದು ಕೇಳಿದ ಪ್ರೇಮ ನಿವೇದನೆಗೆ ನಾನು ಸಂಪೂರ್ಣ ಒಪ್ಪಿದ್ದೇನೆ ಅದಕ್ಕೆ ಈ ದೇವರೇ ಸಾಕ್ಷಿ ” ಎಂದು ಪ್ರಾಮಾಣಿಕವಾಗಿ ಒಪ್ಪಿಸಿಬಿಟ್ಟಿದ್ದೆ. ಸಂತೋಷದ ಜೊತೆಗೆ ನನ್ನ ದಡ್ಡತನಕ್ಕೆ ಬೇಸರವಾಗಿತ್ತು. ಇಂದು ಪ್ರೇಮಿಗಳ ದಿನ ಎಂದು ತಿಳಿದುಕೊಳ್ಳುವ ಅಷ್ಟೂ ಪರಿಜ್ಞಾನವೂ ನನಗಿರಲಿಲ್ಲವಲ್ಲ ಎಂದು. ನೀನೋ ಮೊದಲೇ ಫ್ಯಾಶನ್ ಆಗಿದ್ದವಳು ಬಹಳ ಬುದ್ಧಿವಂತೆಯಾಗಿದ್ದವಳು. ನನ್ನನ್ನು ಹೇಗೆ ಒಪ್ಪಿಕೊಂಡಿದ್ದೆ ಎಂಬುದೇ ನನಗೆ ಈಗಲೂ ಕಾಡುವ ಪ್ರಶ್ನೆ. ನಮ್ಮ ಆ ಪ್ರೇಮ ಎಷ್ಟು ದಿವಸ ಉಳಿಯಿತು ಎಂಬುದು ಒಂದು ಇತಿಹಾಸ. ಸ್ವಲ್ಪ ದಿನಗಳ ಕಾಲ ಪ್ರೇಮ ಪಕ್ಷಿಗಳಾಗಿ ಹಾರಾಡಿ ನಂತರ ನಿಮ್ಮ ಮನೆಯವರು ನೋಡಿದ ಹುಡುಗನನ್ನು ಮದುವೆಯಾಗಿ ಹಾಯಾಗಿರುವೆ ಎಂದುಕೊಂಡಿರುವೆ. ಎಲ್ಲೇ ಇದ್ದರೂ ಚನ್ನಾಗಿರಲೆಂದು ಆಶಿಸುತ್ತೇನೆ. ಆದರೆ ಫೆಬ್ರವರಿ 14 ಪ್ರೇಮಿಗಳ ದಿನ ಬಂದಾಗಲೆಲ್ಲಾ ನಿನ್ನ ನೆನಪಾಗೋದಂತೂ ನಿಶ್ಚಿತ.

✍ಮಹದೇವ್ ಬಿಳುಗಲಿ.
9611349024

Comments