UK Suddi
The news is by your side.

ಸಾಮೂಹಿಕ ವಿವಾಹ ಆಯೋಜಕರು ಸರ್ಕಾರದ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ.

ಧಾರವಾಡ: ಸಾಮೂಹಿಕ ವಿವಾಹಗಳು ಇತ್ತಿಚಿನ ದಿನಗಳಲ್ಲಿ ಜನಪ್ರಿಯಗೊಳ್ಳುತ್ತಿದ್ದು, ಈ ಮೂಲಕ ವಿವಾಹದ ಹೆಸರಿನಲ್ಲಿ ದುಂದು ವೆಚ್ಚಗಳ ಮೇಲೆ ಕಡಿವಾಣ ಹಾಕುವುದರೊಂದಿಗೆ ಸರಳ ವಿವಾಹಗಳಿಗೆ ಪ್ರೊತ್ಸಾಹ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ದೇವಸ್ಥಾನಗಳು, ಟ್ರಸ್ಟ್ಗಳು ಹಾಗೂ ಸಂಘ ಸಂಸ್ಥೆಗಳು ಆಯೋಜಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದನ್ನು ಸರ್ಕಾರವು ಸಹ ಪ್ರೊತ್ಸಾಹಿಸುತ್ತದೆ. ಸಾಮೂಹಿಕ ವಿವಾಹಗಳನ್ನು ಸಮರ್ಪಕವಾಗಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಯೋಜಿಸುವ ಸಾಮೂಹಿಕ ವಿವಾಹಗಳಲ್ಲಿ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ತಡೆಗಟ್ಟುವ ದೃಷ್ಠಿಯಿಂದ ಆಯೋಜಕರ ಪಾಲನೆಗಾಗಿ ಅನೇಕ ಮಾರ್ಗಸೂಚಿಗಳನ್ನು ಸರ್ಕಾರದಿಂದ ಹೊರಡಿಸಲಾಗಿದೆ.

ಆಯೋಜಕರ ನೊಂದಣಿ ಕಡ್ಡಾಯ: ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಎಲ್ಲಾ ಆಯೋಜಕರು ವ್ಯಕ್ತಿಗಳಾಗಿರಲಿ ಟ್ರಸ್ಟ್ಗಳಾಗಿರಲಿ, ಧರ್ಮದಾಯಿಗಳಾಗಿರಲಿ, ಸಂಸ್ಥೆಗಳಾಗಿರಲಿ ಮತ್ತು ದೇವಸ್ಥಾನ ಪ್ರಾಧಿಕಾರಿಗಳಾಗಿರಲಿ ಅವುಗಳು ಕಂದಾಯ ಇಲಾಖೆಯ ಅಧೀನದಲ್ಲಿರುವ ಜಿಲ್ಲಾ ನೋಂದಣಿ ಅಧಿಕಾರಿಯವರಲ್ಲಿ ನೋಂದಣಿ ಮಾಡಿಕೊಳ್ಳತಕ್ಕದ್ದು. ನೋಂದಣಿಯನ್ನು ಪ್ರತಿ ೫ ವರ್ಷಗಳಿಗೊಮ್ಮೆ ನವೀಕರಿಸತಕ್ಕದ್ದು. ಮತ್ತು ನೊಂದಣಿಕಾಲಕ್ಕೆ ಆಯೋಜಕರುಗಳು ನೋಂದಣಿಯ ಸಮಯದಲ್ಲಿ ಈ ದಾಖಲೆಗಳನ್ನು ಸಲ್ಲಿಸತಕ್ಕದ್ದು. ವ್ಯಕ್ತಿಗಳ, ಟ್ರಸ್ಟನ, ಸಂಘದ, ದೇವಸ್ಥಾನ ಪ್ರಾಧಿಕಾರಿಗಳ, ಧಾರ್ಮಿಕ ಸಂಸ್ಥೆಗಳ, ಚರ್ಚನ, ನಿರ್ಧಿಷ್ಟ ಪಡಿಸಿದ ಇತರರ ಹೆಸರು, ವಿಳಾಸ ಮತ್ತು ಅದನ್ನು ದೃಢೀಕರಿಸುವ ದಾಖಲೆಗಳು. ಟ್ರಸ್ಟ್ ಸಂಘವಾಗಿದ್ದ ಸಂದರ್ಭದಲ್ಲಿ ನೋಂದಣಿ ಪ್ರಮಾಣ ಪತ್ರ. ಸಾಮೂಹಿಕ ವಿವಾಹಗಳನ್ನು ನಡೆಸುವ ಸಂದರ್ಭದಲ್ಲಿ ಯಾವುದೇ ಬಾಲ್ಯ ವಿವಾಹಗಳನ್ನು ನಡೆಸುವುದಿಲ್ಲ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು. ಯಾವುದೇ ಸಂಸ್ಥೆ, ವ್ಯಕ್ತಿಗಳು ನೋಂದಣಿಯಾಗದೇ ಸಾಮೂಹಿಕ ವಿವಾಹಗಳನ್ನು ನಡೆಸತಕ್ಕದ್ದಲ್ಲ. ವಿವಾಹಗಳನ್ನು ನಡೆಸಲು ಅನುಮತಿಯನ್ನು ಕೋರುವ ಸಮಯದಲ್ಲಿ ಪ್ರಾಧಿಕಾರಗಳಿಗೆ ನೋಂದಣಿಯ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. ನೋಂದಣಿ ಪ್ರಾಧಿಕಾರವು ನಿರ್ದಿಷ್ಟ ವಯಸ್ಸಿಗಿಂತ ಕಡಿಮೆ ವಯಸ್ಸಿನ ಜೋಡಿಯ ವಿವಾಹಗಳನ್ನು ಪ್ರೊತ್ಸಾಹಿಸುವ ಮೂಲಕ ಮಾನದಂಡಗಳ ಉಲ್ಲಂಘನೆ ಮಾಡಿದ ಆಧಾರದ ಮೇಲೆ ನೋಂದಣಿಯನ್ನು ರದ್ದುಪಡಿಸುವ ಅಧಿಕಾರವನ್ನು ಹೊಂದಿರುತ್ತದೆ.

ಸಾಮೂಹಿಕ ವಿವಾಹಗಳನ್ನು ನಡೆಸಲು ಅನುಮತಿ: ಆಯೋಜಕರು, ಸಾಮೂಹಿಕ ವಿವಾಹಗಳನ್ನು ನಡೆಸಲು ಅನುಮತಿಯನ್ನು ಕೋರಿ ತಾಲೂಕಿನ ತಹಶೀಲ್ದಾರರಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯೋಂದಿಗೆ ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಳ್ಳುತ್ತಿರುವ ವಧುವಿನ ಮತ್ತು ವರನ ಪ್ರತ್ಯೆÃಕ ಭಾವಚಿತ್ರ. ಜನನ ಪ್ರಮಾಣ ಪತ್ರÀ, ಶಾಲಾ ಪ್ರಮಾಣ ಪತ್ರ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಪಾಸ್‌ಪೊರ್ಟ, ವಾಹನ ಚಾಲನಾ ಪರವಾನಿಗೆ ಇತ್ಯಾದಿ ರೂಪದಲ್ಲಿರುವ ವಾಸಸ್ಥಳದ ವಿಳಾಸದ ಪುರಾವೆ ಮತ್ತು ಜೋಡಿಗಳ ಸಮ್ಮತಿಯೊಂದಿಗೆ ವಧು ಮತ್ತು ವರರು ವಿವಾಹವಾಗುವ ವಯಸ್ಸಿನವರು ಎಂದು ಹೇಳುವ ಅವರ ಪೋಷಕರಿಬ್ಬರಿಂದ ಅಫಿಡವಿಟ್ ಸಹ ಸಲ್ಲಿಸಬೇಕು.

ತಹಶೀಲ್ದಾರರಿಗೆ ಅರ್ಜಿಯನ್ನು ಸಲ್ಲಿಸುವುದಕ್ಕಾಗಿನ ಕಾಲಮಿತಿ: ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜೋಡಿಗಳ ಸಂಖ್ಯೆ ೧೦೦ ಕ್ಕಿಂತ ಕಡಿಮೆ ಇದ್ದರೆ ಆಗ ವಿವಾಹದ ದಿನಾಂಕಕ್ಕೆ ಮುಂಚೆ ಇಪ್ಪತ್ತು ದಿನಗಳು. ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜೋಡಿಗಳ ಸಂಖ್ಯೆ ೨೦೦ ರವರೆಗೆ ಇದ್ದಾಗ ವಿವಾಹದ ದಿನಾಂಕಕ್ಕೆ ಮುಂಚೆ ೪೦ ದಿನಗಳು. ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜೋಡಿಗಳ ಸಂಖ್ಯೆ ೨೦೦ಕ್ಕಿಂತ ಹೆಚ್ಚಿಗೆ ಇದ್ದಾಗ ವಿವಾಹದ ದಿನಾಂಕಕ್ಕೆ ಮುಂಚೆ ೬೦ ದಿನಗಳ ಮುಂಚಿತವಾಗಿ ಸಾಮೂಹಿಕ ವಿವಾಹ ಆಯೋಜಿಸಲು ಅನುಮತಿ ಕೇಳಿ ಸಂಬಂದಿಸಿದ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ಮತ್ತು ಅವಧಿ ಮೀರಿ ಸಲ್ಲಿಸಿದ ಅರ್ಜಿಗಳನ್ನು ತಹಶೀಲ್ದಾರರು ಸ್ವಿಕರಿಸತಕ್ಕದ್ದಲ್ಲ. ತಹಶೀಲ್ದಾರರ ಅಧಿಕೃತ ಅನುಮತಿ ಪತ್ರದೊಂದಿಗೆ ಅಧಿಪ್ರಮಾಣಿತ ಜೋಡಿಗಳ ಪಟ್ಟಿ, ವಿವಾಹದ ದಿನಾಂಕ, ಸ್ಥಳ, ಅನುಮೋದನೆಗೊಂಡ ಜೋಡಿಗಳ ಸಂಖ್ಯೆ, ಮುಂತಾದ ವಿವರಗಳನ್ನು ತಮ್ಮ ತಾಲೂಕಿನ ಶಿಶು ಅಭಿವೃಧ್ಧಿ ಯೋಜನಾ ಅಧಿಕಾರಿಗೆ ಸಲ್ಲಿಸಬೇಕು. ತಹಶೀಲ್ದಾರರ ಅನುಮತಿಯ ಪ್ರತಿ ಮತ್ತು ಅನುಮೋದನೆಗೊಂಡ ಅರ್ಜಿಯ ಪಟ್ಟಿಯ ಪರಿಶೀಲನೆಗಾಗಿ ಮತ್ತು ತಪಾಸಣೆ ಮಾಡಲು ಸಾಮೂಹಿಕ ವಿವಾಹ ನಡೆಯುವ ದಿನದಂದು ಆ ಸ್ಥಳದಲ್ಲಿ ಎಲ್ಲ ದಾಖಲೆಗಳು ಲಭ್ಯವಿರಬೇಕು. ಪರಿಷ್ಕರಣಾ ಸಮಿತಿಯು ಅನುಮೋದಿಸಿದ ಅರ್ಜಿಗಳ ಪಟ್ಟಿಯಲ್ಲಿ ಜೋಡಿಗಳ ಹೆಸರು ಇರದ ಹೊರತು ಯಾವುದೇ ವಿವಾದಕ್ಕೆ ಅನುಮತಿ ನೀಡತಕ್ಕದ್ದಲ್ಲ.

ಆಯೋಜಕರು ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದೆ ಎಂದು ಮತ್ತು ಬಾಲ್ಯ ವಿವಾಹವು ದಂಡನೀಯ ಅಪರಾಧವಾಗಿದೆ ಎಂದು ಕಡ್ಡಾಯವಾಗಿ ಜಾಹೀರು ಪಡಿಸಿ, ಉಲ್ಲಂಘನೆಗಾಗಿ ವಿಧಿಸುವ ದಂಡನೀಯ ಕ್ರಮಗಳನ್ನು ಎದ್ದು ಕಾಣುವಂತೆ ವಿವಾಹ ಸ್ಥಳದಲ್ಲಿ ಪ್ರಕಟಿಸಬೇಕು. ಆಯೋಜಕರು, ಸಾಮೂಹಿಕ ವಿವಾಹಗಳ ವಿಡಿಯೋ ಚಿತ್ರಿಕರಣ, ಭಾವಚಿತ್ರಗಳನ್ನು ವಿವಾಹವಾದ ಏಳು ದಿನಗಳೊಳಗಾಗಿ ಸಂಬಂಧಪಟ್ಟ ತಹಶೀಲ್ದಾರ್ ಅಥವಾ ಶಿಶು ಅಭಿವೃಧ್ಧಿ ಯೋಜನಾ ಅಧಿಕಾರಿಗಳಿಗೆ ಸಲ್ಲಿಸಬೇಕು ಮತ್ತು ಅರ್ಜಿಗಳನ್ನು ಪರಿಷ್ಕರಿಸುವ ಅನುಮತಿಯನ್ನು ನೀಡುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳ, ಪ್ರಾಧಿಕಾರಗಳ ಮೇಲೆ ಒತ್ತಡ ಹೇರುವ ಆಯೋಜಕರ ವಿರುದ್ಧ ಮಾರ್ಗಸೂಚಿಯಂತೆ ಕ್ರಮ ಜರುಸಲಾಗುವುದು. ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು, ಸಾಮೂಹಿಕ ವಿವಾಹಗಳಲ್ಲಿ ಭಾಗಿಯಾಗುವ ಜೋಡಿಗಳು ವಿವಾಹವಾಗುವ ವಯಸ್ಸಿಗಿಂತ ಕಡಿಮೆ ವಯಸ್ಸಿನವರೆಂದು ಕಂಡುಬಂದರೆ ಆಯೋಜಕರ ವಿರುದ್ಧ ಕಡ್ಡಾಯವಾಗಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಬೇಕು.

ಸಾಮೂಹಿಕ ವಿವಾಹಗಳಲ್ಲಿ ನಡೆದ ಪ್ರತಿಯೊಂದು ವಿವಾಹವನ್ನು ಕರ್ನಾಟಕ ವಿವಾಹಗಳ (ನೋಂದಣಿ ಮತ್ತು ಸಂಕೀರ್ಣ ಉಪಬಂಧಗಳು) ಅಧಿನಿಯಮ ೧೯೭೬ (೧೯೮೪ರ ಕರ್ನಾಟಕ ಅಧಿನಿಯಮ ಸಂಖ್ಯೆ ೨೦ರ ಮೇರೆಗೆ ಕಡ್ಡಾಯವಾಗಿ ನೋಂದಾಯಿಸತಕ್ಕದ್ದು ಮತ್ತು ಗೊತ್ತುಪಡಿಸಿದ ಸಂಬಂಧಟ್ಟ ವಿವಾಹ ನೋಂದಣಿ ಪ್ರಾಧಿಕಾರವು ಅಂಥ ವಿವಾಹಗಳು ನಡೆಯುವ ಸ್ಥಳದಲ್ಲಿ ಹಾಜರಿದ್ದು, ಅದೇ ಸ್ಥಳದಲ್ಲಿ ಅಂತಹ ವಿವಾಹಗಳನ್ನು ನೋಂದಣಿ ಮಾಡಿಕೊಳ್ಳಬೇಕು. ವಿವಾಹವಾದ ಜೋಡಿಗಳಿಗೆ ನೋಂದಣಿ ಪ್ರಮಾಣ ಪತ್ರಗಳನ್ನು ನೀಡುತ್ತಾರೆ. ಕೈಮೀರಿದ ಯಾವುದೇ ಕಾರಣಕ್ಕಾಗಿ ಅದೇ ದಿನದಂದು ಅಂತಹ ವಿವಾಹಗಳನ್ನು ನೋಂದಣಿ ಮಾಡಲು ಸಾಧ್ಯವಾಗದಿದ್ದರೆ ಅಂತಹ ವಿವಾಹ ನಡೆದ ೩೦ ದಿನಗಳೊಳಗಾಗಿ ವಿವಾಹವನ್ನು ನೋಂದಣಿ ಮಾಡತಕ್ಕದ್ದು. ವಿವಾಹವನ್ನು ನೋಂದಣಿ ಮಾಡಿಸುವುದು ಪೋಷಕರು ಮತ್ತು ಪಕ್ಷಕಾರರ ಜವಾಬ್ದಾರಿಯಾಗಿರತಕ್ಕದ್ದು. ವಿವಾಹವನ್ನು ನೋಂದಾಯಿಸಲು ತಪ್ಪಿದರೆ ಅವರು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ.

ವಿವಾಹವಾಗುವ ವಯಸ್ಸಿನ ರುಜುವಾತನ್ನು ಸಲ್ಲಿಸುವುದಕ್ಕಾಗಿ ಜನನ ಪ್ರಮಾಣ ಪತ್ರ ಅಗತ್ಯವಿದೆ. ಜನನ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದಾಗ ಶಾಲಾ ಪ್ರಮಾಣ ಪತ್ರ, ಶಾಲಾ ಪ್ರವೇಶ ದಾಖಲಾತಿ ವರ್ಗಾವಣೆ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ವಯಸ್ಸಿನ ಪ್ರಮಾಣ ಪತ್ರದ ದಾಖಲೆಗಳು ಲಭ್ಯವಿಲ್ಲದಿದ್ದಾಗ ಮಾತ್ರವೇ ತಂದೆ ತಾಯಿ, ವ್ಯಕ್ತಿಗಳು ನಾನು, ನನ್ನ ಮಗ, ಮಗಳನ್ನು ಶಾಲೆಗೆ ದಾಖಲಿಸಿರುವುದಿಲ್ಲ. ಎಂಬ ಹೇಳಿಕೆ ಇರುವ ಅಫಿಡವಿಟ್‌ನೊಂದಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಿಂದ ಪಡೆದ ವಯಸ್ಸಿನ ಪ್ರಮಾಣ ಪತ್ರವನ್ನು ನೀಡಬೇಕು. ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹ ಜರುಗಬಾರದೆಂದು ಈ ಮಾರ್ಗಸೂಚಿಗಳನ್ನು ಸರಕಾರ ಹೊರಡಿಸಿದೆ.

ಫೆಬ್ರವರಿ ತಿಂಗಳಿನಿಂದ ಮುಂದಿನ ಆರು ತಿಂಗಳ ಕಾಲ ವಿವಾಹಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಿಂದ ಸಾಮೂಹಿಕ ವಿವಾಹ ಆಯೋಜಕರು ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು. ಮತ್ತು ಬಾಲ್ಯ ವಿವಾಹ ನಡೆಯುವ ಬಗ್ಗೆ ಮಾಹಿತಿ ಬಂದಲ್ಲಿ ಉಚಿತ ಸಹಾಯವಾಣಿ ೧೦೯೮ಗೆ ಅಥವಾ ಕಚೇರಿ ದೂರವಾಣಿ ೯೪೮೨೭೫೬೪೧೩ ಗೆ ತಿಳಿಸುವಂತೆ ಜಿಲ್ಲಾ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಆಗಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-Dharawad VB