UK Suddi
The news is by your side.

ಆರೋಗ್ಯ ಸಂಪತ್ತು ಎಲ್ಲ ಸಂಪತ್ತಿಗಿಂತ ಮಿಗಿಲಾದದು:ವೀರಣ್ಣ ಬಳೂಟಗಿ

ಹುನಗುಂದ : ಇಲ್ಲಿಯ ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಾಗಲಕೋಟ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥೇಯ ತಂಡ ಪ್ರಥಮ ಸ್ಥಾನ ಪಡೆಯಿತು.

ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ವೀರಣ್ಣ ಬಳೂಟಗಿ ಮಾತನಾಡಿ, ಆರೋಗ್ಯ ಸಂಪತ್ತು ಎಲ್ಲ ಸಂಪತ್ತಿಗಿಂತ ಮಿಗಿಲು. ಕ್ರೀಡಾಪಟುಗಳು ಆಟದ ಮೂಲಕ ಸಹಜವಾಗಿಯೇ ಉತ್ತಮ ಆರೋಗ್ಯ ಪಡೆಯುತ್ತಾರೆ ಎಂದರು.

ವಿಶ್ರಾಂತ ಪ್ರಾಚಾರ್ಯ ಪ್ರೊ.ಬಿ.ಎಂ. ಚಲವಾದಿ ಮಾತನಾಡಿ, ಪ್ರಶಸ್ತಿಯು ಗೆದ್ದವರಿಗೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿಯಾದರೇ, ಸೋತವರಿಗೆ ಮತ್ತೊಂದು ಅವಕಾಶಕ್ಕಾಗಿ, ಸಿಗುವ ಆ ಅವಕಾಶದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಶಶಿಕಲಾ ಮಠ ಮಾತನಾಡಿ, ಕ್ರೀಡಾಕೂಟ ಅಚ್ಚುಕಟ್ಟಾಗಿ ಆಯೋಜಿಸಿದ ಕ್ರೀಡಾ ನಿರ್ದೇಶಕರಿಗೆ, ರೆಫರಿಗಳಿಗೆ ಹಾಗೂ ಕಾಲೇಜಿನ ಕ್ರೀಡಾಪಟುಗಳು ಅಭಿನಂದನಾರ್ಹರು. ಸೋಲು ಗೆಲುವಿಗಿಂತ ಉತ್ತಮ ಆಟವು ಎಲ್ಲರ ಮನಸೂರೆಗೊಳ್ಳುತ್ತದೆ. ಕಾರಣ ಆಟದತ್ತ ಗಮನ ಹರಿಸಿ ಎಂದು ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು.
ಅತಿಥೇಯ ತಂಡದ ನಾಯಕ ನಾಗರಾಜ ಡೊಂಗರಗಾವಿ ಹಾಗೂ ಇತರ ಕ್ರೀಡಾಪಟುಗಳು ಪ್ರಥಮ ಬಹುಮಾನ ಸ್ವೀಕರಿಸಿದರು. ದ್ವಿತೀಯ ಬಹುಮಾನವು ಮುಧೋಳದ ಎಸ್.ಆರ್. ಕಂಠಿ ಪದವಿ ಮಹಾವಿದ್ಯಾಲಯ ಪಡೆದುಕೊಂಡಿತು.
ಅತಿಥಿಗಳಾಗಿ ನಗರಸಭೆ ಸದಸ್ಯ ಪ್ರವೀಣ ಹಳಪೇಟಿ, ಮಲ್ಲಣ್ಣ ಲೆಕ್ಕಿಹಾಳ, ರವಿ ಹುಚನೂರ, ಪಿಡಿಓ ಅಮರೇಗೌಡ ಜಾರಡ್ಡಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಬಿ. ಜೀರಗಿ, ವಿ.ಮ. ಉಚಿತ ಪ್ರಸಾದ ನಿಲಯದ ಚೇರಮನ್ ಸಂಗಣ್ಣ.ಉಪನ್ಯಾಸಕ ನಾಗರಾಜ ನಾಡಗೌಡರ. ಚಿನಿವಾಲರ ಹಾಗೂ ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಹಾಗೂ ಮಹಾವಿದ್ಯಾಲಯದ ಕ್ರೀಡಾ ನಿರ್ದೇಶಕ ಎಸ್.ಬಿ. ಚಳಗೇರಿ ವೇದಿಕೆಯ ಮೇಲಿದ್ದರು.

Comments