UK Suddi
The news is by your side.

ಆಸೀಸ್ ವಿರುದ್ಧ ಎರಡನೇ ಏಕದಿನ ಪಂದ್ಯ ಇಂದು:ಗೆಲ್ಲುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ.

ನಾಗ್ಪುರ: ಮೊದಲ ಪಂದ್ಯದ ಗೆಲುವಿನ ವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ತಂಡ, ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧದ ನಡೆಯುವ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ.

ವಿಶ್ವಕಪ್‌ಗೂ ಮುನ್ನ ಕೊನೆಯ ಏಕದಿನ ಸರಣಿ ಆಗಿರುವ ಹಿನ್ನೆಲೆಯಲ್ಲಿ ಭಾರತದ ಪಾಲಿಗೆ ಇದು ಅತ್ಯಂತ ಪ್ರಾಮುಖ್ಯತೆ ಗಳಿಸಿದೆ. ಹಾಗಾಗಿ, ಈ ಸರಣಿ ಗೆದ್ದು ಭಾರತ, ಆತ್ಮವಿಶ್ವಾಸವನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳುವ ತುಡಿತದಲ್ಲಿದೆ.

ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ವೈಫಲ್ಯದಿಂದಾಗಿ ಪಂದ್ಯವನ್ನು ಸೋತಿತ್ತು.ಇಂದು ನಡೆಯುವ ಪಂದ್ಯದಲ್ಲಿನ ಟಾಸ್ ಉಭಯ ತಂಡಗಳಿಗೆ ಮುಖ್ಯವಾಗಲಿದೆ. ಹೈದರಾಬಾದ್ ಪಂದ್ಯದಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿಯ ನಿರ್ಧಾರಕ್ಕೆ ಭಾರತ ತಂಡದ ಬೌಲರುಗಳು ಸಹಕರಿಸಿ ಬಲಿಷ್ಠ ಆಸ್ಟ್ರೇಲಿಯಾವನ್ನು 236 ರನ್ ಗಳಿಗೆ ಬೌಲರುಗಳು ನಿಯಂತ್ರಿಸಿದ್ದರು.ನಂತರ, ಗುರಿ ಬೆನ್ನತ್ತಿದ ಭಾರತವನ್ನು ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾದವ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರು 141 ರನ್ ಜತೆಯಾಟ ವಾಡುವ ಮೂಲಕ ಗೆಲುವಿನ ದಡ ಸೇರಿಸಿದ್ದರು.

ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಅವರು ಸತತ ವೈಫಲ್ಯದಿಂದ ಬಳಲುತ್ತಿದ್ದು, ಅವರು ಬ್ಯಾಟಿಂಗ್ ಲಯಕ್ಕೆ ಮರಳುವುದು ಕಾಂಗೂರು ಪಡೆಗೆ ಅನಿವಾರ್ಯವಾಗಿದೆ. ಕಳೆದ 2018ರ ಅಕ್ಟೋಬರ್‌ನಿಂದ 17 ಇನಿಂಗ್‌ಸ್‌‌ಗಳಲ್ಲಿ ಆಸ್ಟ್ರೇಲಿಯಾ ನಾಯಕ ಫಿಂಚ್ ಕೇವಲ 158 ರನ್ ಮಾತ್ರ ಕಲೆಹಾಕಿದ್ದಾರೆ. ಇದರಲ್ಲಿ ಕೇವಲ ಎರಡು ಬಾರಿ ಮಾತ್ರ 15 ರನ್ ಗಡಿ ದಾಟಿದ್ದಾರೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಫಿಂಚ್ ಉತ್ತಮ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾಗಬೇಕಾದ ಅನಿವಾರ್ಯತೆ ಇದೆ.

ಭಾರತ ತಂಡದಲ್ಲಿ ವಿಜಯ್ ಶಂಕರ್ ಅಥವಾ ರವೀಂದ್ರ ಜಡೇಜಾ ಅವರು ಯಜುವೇಂದ್ರ ಚಾಹಲ್ ಅವರಿಗೆ ಸ್ಥಾನ ಬಿಟ್ಟುಕೊಡಲಿದ್ದಾರೆ. ಆಸೀಸ್ ತಂಡದಲ್ಲಿ ಶಾನ್ ಮಾರ್ಷ್ ಫಿಟ್ ಆಗಿದ್ದು, ಅವರು ಅಲೆಕ್‌ಸ್‌ ಕ್ಯಾರಿ ಅಥವಾ ಟರ್ನರ್ ಅವರ ಸ್ಥಾನದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಉಭಯ ತಂಡಗಳ ನಡುವಿನ ಕಳೆದ ಐದು ಏಕದಿನ ಪಂದ್ಯ ಗಳಲ್ಲಿ ಭಾರತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಆಸ್ಟ್ರೇಲಿಯಾ ಕೇವಲ ಒಂದರಲ್ಲಿ ಜಯ ಗಳಿಸಿದೆ.

ಸಂಭಾವ್ಯ ಆಟಗಾರರು
ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ಎಂ.ಎಸ್.ಧೋನಿ (ವಿ.ಕೀ), ಕೇದಾರ ಜಾದವ್, ವಿಜಯ್ ಶಂಕರ್/ ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ: ಅರೋನ್ ಫಿಂಚ್, ಉಸ್ಮಾನ್ ಖವಾಜ, ಮಾರ್ಕುಸ್ ಸ್ಟೋಯಿನಿಸ್, ಪೀಟರ್ ಹ್ಯಾಂಡ್ಸ್ಕೊಂಬ್, ಗ್ಲೇನ್ ಮ್ಯಾಕ್ಸ್ವೆಲ್, ಟರ್ನರ್/ ಶಾನ್ ಮಾರ್ಷ್, ಅಲೆಕ್ಸ್‌ ಕ್ಯಾರಿ (ವಿ.ಕೀ), ನಥಾನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಸ್, ಆ್ಯಡಂ ಝಂಪಾ, ಜೇಸನ್ ಬೆಹ್ರೆನ್ಡ್ರಾಫ್.

ಸಮಯ: ಮಧ್ಯಾಹ್ನ 01:30
ಸ್ಥಳ: ವಿದರ್ಭ ಕ್ರಿಕೆಟ್ ಕ್ರೀಡಾಂಗಣ, ನಾಗ್ಪುರ

Comments