UK Suddi
The news is by your side.

ಕ್ರೀಡೆಯಿಂದ ವ್ಯಕ್ತಿತ್ವ ವಿಕಸನ: ಸಿಪಿಐ ಸಂಜಯ ಬಳಿಗಾರ್.

ಹುನಗುಂದ(ಬಾಗಲಕೋಟ):‘ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಹಾಗೂ ಕ್ರೀಡಾಸ್ಪೂರ್ತಿಯಿಂದ ಆಡುವುದು ಮುಖ್ಯ. ಕ್ರೀಡೆಯಿಂದ ವ್ಯಕ್ತಿತ್ವ ವಿಕಸನವಾಗುತ್ತದೆ’ ಎಂದು ಸಿಪಿಐ ಸಂಜಯ ಬಳಿಗಾರ್ ಹೇಳಿದರು.

ಅವರು ಈಚೆಗೆ ಇಲ್ಲಿಯ ವಿ.ಎಂ. ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ ಆಯೋಜಿಸಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಾಗಲಕೋಟ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

‘ಕಬಡ್ಡಿ ನಮ್ಮ ದೇಶಿ ಆಟ. ಈ ಆಟದಿಂದ ಧೈರ್ಯ, ಶಕ್ತಿ, ಯುಕ್ತಿ ಹೆಚ್ಚುತ್ತದೆ. ಆಟಗಳಿಂದ ಸಾಂಘಿಕ ಮನೋಭಾವ ವೃದ್ಧಿಸಿ, ಸುಂದರ ಸಮಾಜ ನಿರ್ಮಾಣವಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಕ್ರೀಡೆ ಕಡ್ಡಾಯವಾಗಬೇಕು. ಪ್ರತಿ ಮಗು ಒಂದಿಲ್ಲ ಒಂದು ಆಟದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.
ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ಧ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಬಿ.ಎಂ. ಹೊಕ್ರಾಣಿ ಮಾತನಾಡಿ, ಕಬಡ್ಡಿ, ಖೋಖೋ ಹಾಗೂ ಅಥ್ಲೆಟಿಕ್ಸ್‍ನಲ್ಲಿ ನಮ್ಮ ಕಾಲೇಜು ಹಿಂದಿನಿಂದಲೂ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಕಳೆದ 10 ವರ್ಷಗಳಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚಳಗೇರಿ ಅವರು ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ಹಾಗೂ ಪ್ರೇರಣೆ ನೀಡಿ ಉತ್ತಮ ಕ್ರೀಡಾಪಟುಗಳನ್ನು ತಯಾರಿಸಿದ್ದಾರೆ ಎಂದು ಪ್ರಶಂಸಿಸಿದರು.
ಪ್ರತಿಯೊಬ್ಬರು ಆಟೋಟಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ಹಾಗೂ ಮನಸ್ಸು ಹೊಂದಬೇಕು. ಕ್ರೀಡೆಯ ಜತೆಗೆ ಓದಿನತ್ತಲೂ ಗಮನ ಹರಿಸಬೇಕು. ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಜೀವನ ಸಾಗಿಸುವುದು ಎಲ್ಲಕ್ಕಿಂತ ಮುಖ್ಯವಾದುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅತಿಥಿಗಳಾಗಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಬಸವರಾಜ ಕೆಂಧೂರ, ವೀರಣ್ಣ ಚೆಟ್ಟೇರ್, ಎಂ.ಎನ್. ತೆನ್ನಳ್ಳಿ, ವೀರಣ್ಣ ಬಳೂಟಗಿ, ಕಬಡ್ಡಿ ಹಿರಿಯ ಆಟಗಾರ ಬಸನಗೌಡ ಆರೇಗೌಡ್ರ, ನಿವೃತ್ತ ಕ್ರೀಡಾನಿರ್ದೇಶಕ ಎಂ.ಎಸ್. ಹಳಪೇಟಿ, ಬಾಗಲಕೋಟೆ ಜಿಲ್ಲಾ ಕಬಡ್ಡಿ ಅಮೆಚೂರ್ ಅಸೋಶಿಯೇಶನ್ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮುಕ್ಕಣ್ಣವರ, ಪಿಕೆಪಿಎಸ್ ಅಧ್ಯಕ್ಷ ರವಿ ಹುಚನೂರ, ಪ್ರಥಮ ದರ್ಜೆ ಗುತ್ತಿಗೆದಾರ ಮಲ್ಲಣ್ಣ ಲೆಕ್ಕಿಹಾಳ, ಪಿಡಬ್ಲುಡಿ ಸಹಾಯಕ ಅಭಿಯಂತರ ವೆಂಕಟೇಶ ಹೂಲಗೇರಿ, ಇಳಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ನಿರ್ದೇಶಕ ನೀಲಪ್ಪ ಕುರಿ ಆಗಮಿಸಿದ್ದರು.
ಕ್ರೀಡಾಕೂಟದಲ್ಲಿ ಜಿಲ್ಲೆಯ 18 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಪ್ರಾಚಾರ್ಯೆ ಪ್ರೊ.ಶಶಿಕಲಾ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ನಿರ್ದೇಶಕ ಎಸ್.ಬಿ. ಚಳಗೇರಿ ಸ್ವಾಗತಿಸಿದರು. ಪ್ರೋ.ಎಸ್.ಆರ್. ನಾಗಣ್ಣವರ ನಿರೂಪಿಸಿದರು. ಡಾ.ಎಸ್.ಆರ್. ಗೋಲಗೊಂಡ ವಂದಿಸಿದರು.

Comments