UK Suddi
The news is by your side.

ಮಂಡ್ಯ ಲೋಕಸಭಾ ಅಖಾಡಕ್ಕೆ ದುಮುಕಿದ ಜಾಗ್ವಾರ್ …

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಕುಮಾರಸ್ವಾಮಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಸಿಲ್ವರ್‍ ಜೂಬಿಲಿ ಪಾರ್ಕ್‍ನಲ್ಲಿ ಆಯೋಜಿಸಿದ್ದ ಬೃಹತ್ ಸಮಾರಂಭದಲ್ಲಿ, ನಿಖಿಲ್ ಕುಮಾರಸ್ವಾಮಿ ಅವರನ್ನ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಘೋಷಿಸಿ ಮೊದಲ ಬಾರಿ ರಾಜಕೀಯ ಪ್ರವೇಶ ಮಾಡಿರುವ ನಿಖಿಲ್ ಅವರನ್ನು ಚುನಾಯಿಸಬೇಕೆಂದು ಜೆಡಿಎಸ್ ನಾಯಕರು ಮಂಡ್ಯ ಜನರಲ್ಲಿ ಮನವಿ ಮಾಡಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಜಿಲ್ಲೆಯ 8 ಮಂದಿ ಶಾಸಕರು ಹಾಗೂ ಮೂವರು ಸಚಿವರ ಒಪ್ಪಿಗೆ ಪಡೆದು ತಮ್ಮ ಮೊಮ್ಮಗನನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು. ನಿನ್ನೆ ಭಾವುಕರಾಗಿ ಹಳ್ಳಿ ಜನರ ಭಾವನೆಗೆ ಸ್ಪಂಧಿಸಿ ಪ್ರೀತಿಯಿಂದ ಕಣ್ಣೀರು ಸುರಿಸಿದ್ದನ್ನು ವ್ಯಂಗ್ಯ ಮಾಡಲಾಗುತ್ತಿದೆ. ಮಂಡ್ಯದಲ್ಲಿ ತಾವು ಕಣ್ಣೀರು ಹಾಕುವುದಿಲ್ಲ. ನಾನು ದೈವ ನಂಬಿ ಬಂದು 60 ವರ್ಷ ರಾಜಕಾರಣ ಮಾಡಿದ್ದೇನೆ. ಇದು ನಮ್ಮ ವಂಶಪಾರಂಪರ್ಯ ರಾಜಕಾರಣ ಅಲ್ಲ. ನಿಮ್ಮ ಪ್ರೀತಿಯನ್ನು ದುರ್ಬಳಕೆ ಮಾಡಿಕೊಳ್ಳಲ್ಲ ಎಂದು ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಗೆದ್ದು ಹೋಗಲು ಬಂದಿಲ್ಲ. ಗೋ ಬ್ಯಾಕ್ ನಿಖಿಲ್ ಅಂದಿದ್ದು ತುಂಬಾ ನೋವಾಗಿದೆ. ನಿಮ್ಮ ಆಶೀರ್ವಾದದಿಂದ ನಿಖಿಲ್ ಗೆದ್ದೇ ಗೆಲ್ಲುತ್ತಾನೆ.‌ ಮಂಡ್ಯ ರಾಜಕಾರಣದ ಹೃದಯ. ನಿಖಿಲ್ ಅಭಿವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಾನೆ ಎಂದು ಮಂಡ್ಯ ಜನರಿಗೆ ಭರವಸೆ ನೀಡಿದ್ದಾರೆ.

ಇದೇ ವೇಳೆ ರಾಜ್ಯದ ಮೈತ್ರಿ ಸರ್ಕಾರದ ರಚನೆ ಕುರಿತು ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಸಂದರ್ಭ ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲ. ಹಾಗಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಿ. ಅವರನ್ನು ಸಿಎಂ ಮಾಡಿದರೆ ಬೆಂಬಲಿಸುವುದಾಗಿ ಹೇಳಿದ್ದೆ. ಕಾಂಗ್ರೆಸ್ ನಾಯಕರೇ ಒಪ್ಪಲಿಲ್ಲ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ 15-20 ವರ್ಷಗಳಿಂದ ನೀವು ನನಗೆ ಪ್ರೀತಿ ಕೊಟ್ಟಿದ್ದೀರಿ, ನಿಖಿಲ್ ಸ್ಪರ್ಧೆಗೆ ನಿಮ್ಮ ಅನುಮತಿ ಬೇಕಿದೆ. ನಿಮ್ಮ ಋಣ ತೀರಿಸಲು ನಾನು ಮಗನನ್ನು ಚುನಾವಣೆಗೆ ನಿಲ್ಲಿಸುತ್ತೇನೆ. ಗೆಲ್ಲಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು ಎಂದರು. ಮಂಡ್ಯ ಜಿಲ್ಲೆಯ ಋಣ ನನ್ನ ಹೃದಯದಲ್ಲಿದೆ, ಹುಟ್ಟಿದ್ದು ಹಾಸನದಲ್ಲಿ, ರಾಜಕೀಯ ಜನ್ಮ ತಾಳಿದ್ದು ರಾಮನಗರದಲ್ಲಿ ರಾಜಕೀಯವಾಗಿ ಹೆಮ್ಮರವಾಗಿ ಬೆಳೆಸಿದ್ದು ಮಂಡ್ಯ ಜಿಲ್ಲೆಯ ಜನತೆ. ನೀವುಗಳೇ ನನ್ನ ನಿಜವಾದ ಆಸ್ತಿ. ಮಗನಿಗಾಗಿ ನಾನೆಂದು ಆಸ್ತಿ ಮಾಡಲು ಹೊರಟವನಲ್ಲ ಎಂದು ಹೇಳಿದ್ದಾರೆ. ನಿಖಿಲ್ ಸಂಸದನಾಗಿ ದೆಹಲಿಯಲ್ಲಿ ಮೆರೆಯುವುದಕ್ಕೆ ಬಂದಿಲ್ಲ ಮಂಡ್ಯದಲ್ಲೇ ಬದುಕುವುದಕ್ಕೆ ಬಂದಿದ್ದಾನೆ. ಮಂಡ್ಯ ಜಿಲ್ಲೆಯವರು ಒರಟರಲ್ಲ, ಮುಗ್ಧರು. ನಾವಿರುವವರೆಗೂ ನಿಮಗ್ಯಾವ ತೊಂದರೆಯಾಗುವುದಕ್ಕೂ ಬಿಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ಅಂಬರೀಶ್ ವಿಚಾರವಾಗಿ ಮಾತನಾಡಿದ ಎಚ್ಡಿಕೆ, ಅವರ ತಮ್ಮನಾಗಿ ಅಂದು ನಿಮ್ಮ ಜತೆ ಬೆರೆತಿದ್ದೆ. ನನಗೆ ನಿಖಿಲ್ ಬೇರೆಯಲ್ಲ, ಅಂಬಿ ಮಗ ಬೇರೆಯಲ್ಲ. ಅಂಬರೀಶ್ ನಿಧನದ ಸುದ್ದಿ ನನಗೆ ನೀಡಿದ್ದೇ ನಿಖಿಲ್. ಅಂಬರೀಶ್ ಮತ್ತು ನನ್ನ ನಡುವಿನ ಸಂಬಂಧ ನಿಮಗ್ಯಾರಿಗೂ ಗೊತ್ತಿಲ್ಲ ಎಂದರು.

Comments