UK Suddi
The news is by your side.

ರಾಮದುರ್ಗದ.ಅನಾಥಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆ.

ರಾಮದುರ್ಗ(ಬೆಳಗಾವಿ):ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಲಕ್ಷ್ಮೀ ನಗರದ ಮಹಿಳಾ ಸದಸ್ಯರು ಶ್ರೀಪತಿ ನಗರದ ಶ್ರೀ ಸಿದ್ಧಾರೂಢ ಮಠದ
ಆಶ್ರಯದಾಮದ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಸಸಿ ವಿತರಣೆ ಮಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿದ್ಧಾರೂಢ ಮಠದ ಪ.ಪೂ. ಶ್ರೀ ಜಗದಾತ್ಮಾನಂದ ಸ್ವಾಮಿಜಿ ಅವರು ಮಾತನಾಡಿ, ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಇಂತಹ ಮಹಿಳೆಯರಿಗೆ ಪ್ರೋತ್ಸಾಹದ ಜೊತೆಗೆ ನೈತಿಕ ಬೆಂಬಲ ನೀಡಬೇಕಾಗಿದೆ ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಕಾರ್ಯಸೂಚಿಯ ಬಗ್ಗೆ ಚರ್ಚೆಸಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ವರದಾನವಾಗಲಿದೆ ಎಂದು ಶ್ರೀಗಳು ಹೇಳಿದರು.

ಕೇವಲ ಸಾಮಾಜಿಕ ಜಾಲ ತಾಣಗಳ ಮೂಲಕ ಮಹಿಳಾ ದಿನಾಚರಣೆ ಕುರಿತು ಶುಭಾಶಯ ವಿನಿಮಯ ಮಾಡಿಕೊಳ್ಳುವ ಕಾಲದಲ್ಲಿ ಲಕ್ಷ್ಮೀ ನಗರದ ಮಹಿಳೆಯರು ಇಂತದ್ದೊಂದು ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸದಸ್ಯೆ ಶ್ರೀಮತಿ ಪದ್ಮಾ ಸಿದ್ಲಿಗಂಪ್ಪನವರ ಅವರನ್ನು ಮಹಿಳಾ ಸದಸ್ಯರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು 21ನೆಯ ಶತಮಾನದಲ್ಲಿ ಮಹಿಳೆ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ ಎರಡನ್ನೂ ನಾನು ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾಳೆ. ಹೆಣ್ಣಿಗೆ ಕಷ್ಟ ಬಂದರೆ ಮತ್ತೊಬ್ಬರ ಎದುರು ಕಣ್ಣಿರು ಸುರಿಸುವ ಕಾಲ ಹೋಯಿತು ಎಂದು ಅವರು ಹೇಳಿದರು.

ಮಹಿಳಾ ಸದಸ್ಯರು ಅನಾಥಾಶ್ರಮದ ಮಕ್ಕಳಿಗೆ ಉಚಿತ ಪುಸ್ತಕ, ಪೆನ್ಸಿಲ್ ಹಾಗೂ ಸಸಿಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶೋಭಾ ಸುರಪುರ, ರಂಜನಾ ದಿಂಡಿವಾರ, ಸುಮಂಗಲಾ ಮುಳ್ಳೂರ, ಸುಧಾ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮತಿ ಪುಷ್ಪಾ ಸಿದ್ಧಾಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀಮತಿ ರೇಣುಕಾ ಪಾಟೀಲ ಸ್ವಾಗತಿಸಿದರು. ರಾಮಚಂದ್ರ ಯಾದವಾಡ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಅಂಗಡಿ ವಂದಿಸಿದರು.

Comments