UK Suddi
The news is by your side.

ವಿದ್ಯುನ್ಮಾನ,ಸಾಮಾಜಿಕ ಮಾಧ್ಯಮಗಳಿಗೆ ಜಾಹೀರಾತು ಪೂರ್ವಾನುಮತಿ ಅಗತ್ಯ:ಡಿಸಿ ದೀಪಾ ಚೋಳನ್

ಹುಬ್ಬಳ್ಳಿ:ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಿಕೊಂಡು ಬಂದಿರುವ ಹಿರಿಮೆಯನ್ನು ಭಾರತ ಚುನಾವಣಾ ಆಯೋಗ ಹೊಂದಿದೆ. ನಿಷ್ಪಕ್ಷಪಾತ ಚುನಾವಣೆಗಳಿಗೆ ಮಾಧ್ಯಮಗಳ ಕೊಡುಗೆಯೂ ದೊಡ್ಡದಿದೆ. ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ವಿದ್ಯನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳ ಮುಖಾಂತರ, ಬಲ್ಕ್ ಎಸ್‌ಎಂಎಸ್ ಮೂಲಕ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯನ್ನು ಬೆಂಬಲಿಸಿ ಜಾಹೀರಾತು ಪ್ರಕಟಿಸುವ ಮುನ್ನ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಸಮಿತಿಯ ಅನುಮತಿ ಪಡೆಯುವದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ,ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಹೇಳಿದರು.

ಇಲ್ಲಿನ ಮಿನಿವಿಧಾನಸೌಧದ ಸಭಾಂಗಣದಲ್ಲಿ ಗುರುವಾರದಂದು ಜಿಲ್ಲಾಡಳಿತ, ಹುಬ್ಬಳ್ಳಿ ತಹಸೀಲ್ದಾರ ಕಾರ್ಯಾಲಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಮಾಧ್ಯಮ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳಲ್ಲಿ ಜಾಹೀರಾತು ಪ್ರಕಟಿಸುವ ಮುನ್ನ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಸಮಿತಿಗೆ ಜಾಹೀರಾತಿನ ಲಿಖಿತ ಮತ್ತು ಡಿಜಿಟಲ್ ಪ್ರತಿಗಳನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಈ ನಿಯಮವು ಬಲ್ಕ್ ಎಸ್‌ಎಂಎಸ್,ಆಟೋ, ಜೀಪ್ , ವಿದ್ಯುನ್ಮಾನ ವಿಡಿಯೋ ಫಲಕ ಹೊಂದಿರುವ ವಾಹನಗಳ ಮೂಲಕ ಕೈಗೊಳ್ಳುವ ಪ್ರಚಾರಕ್ಕೂ ಅನ್ವಯಿಸುತ್ತದೆ. ಮುದ್ರಣ ಮಾಧ್ಯಮಗಳಿಗೆ ಈ ನಿರ್ಬಂಧ ಇಲ್ಲ ಆದರೆ ಅವುಗಳ ಆನ್‌ಲೈನ್ ಆವೃತ್ತಿ,ಇಪೇಪರ್‌ಗಳಲ್ಲಿ ಜಾಹೀರಾತು ಪ್ರಕಟಣೆಗೆ ಅನುಮತಿ ಕಡ್ಡಾಯ. ಜೊತೆಗೆ ಮತದಾನಕ್ಕೆ ೪೮ ಗಂಟೆಗಳ ಮುನ್ನ ಅವಧಿಯಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸುವ ಜಾಹೀರಾತುಗಳಿಗೆ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆಯ 171ಹೆಚ್ ಕಲಂ ಅನ್ವಯ ಕ್ರಮ ಕೈಗೊಳ್ಳಲು ಅವಕಾಶವಿದೆ. ಯಾವುದೇ ಪಕ್ಷ ಮತ್ತು ಅಭ್ಯರ್ಥಿಯ ಪರವಾಗಿ ಪ್ರಭಾವ ಬೀರುವ, ಅವರ ಅಭ್ಯರ್ಥಿತನವನ್ನು ಪ್ರೊತ್ಸಾಹಿಸುವ ರೀತಿಯಲ್ಲಿ ಸುದ್ದಿಗಳನ್ನು ಪ್ರಕಟಿಸಿದಾಗ ಜಿಲ್ಲಾ ಮಾಧ್ಯಮ ನಿಗಾ ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿಯ ನಿರ್ಣಯದಂತೆ ಅದನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಿ,ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುವುದು.ಅಂತಹ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ಕುರಿತು ಭಾರತ ಚುನಾವಣಾ ಆಯೋಗದ ಮೂಲಕ ಭಾರತೀಯ ಪ್ರೆಸ್ ಕೌನ್ಸಿಲ್ ಹಾಗೂ ನ್ಯಾಷನಲ್ ಬ್ರಾಡಕಾಸ್ಟಿಂಗ್ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷರಾಗಿರುವ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಜಿಲ್ಲೆಯಾದ್ಯಂತ ಇರುವ 1634 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಧಾರವಾಡ ಲೋಕಸಭಾ ಕ್ಷೆತ್ರ ವ್ಯಾಪ್ತಿಯಲ್ಲಿರುವ ಹಾವೇರಿ ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೆತ್ರದ 238 ಮತಗಟ್ಟೆಗಳಲ್ಲಿ ಅಲ್ಲಿನ ಸ್ವಿಪ್ ಸಮಿತಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ. ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳ ಬಳಕೆಯ ಪ್ರಾತ್ಯಕ್ಷಿಕೆಗಳಲ್ಲಿ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದರು.

-Dharawad VB

Comments