UK Suddi
The news is by your side.

ಮಧ್ಯಸ್ಥಗಾರಿಕೆ ನಿರ್ವಹಿಸಲು ಆಸಕ್ತಿಯ ಅಗತ್ಯವಿದೆ:ನ್ಯಾ.ಈಶಪ್ಪ ಭೂತೆ

ಧಾರವಾಡ: ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಶೀಘ್ರ ಮತ್ತು ಸುಲಭ ನ್ಯಾಯ ದೊರಕಿಸುವ ಕ್ರಮಗಳಲ್ಲಿ ಒಂದಾಗಿರುವ ಮಧ್ಯಸ್ಥಗಾರಿಕೆಯನ್ನು ಸಮರ್ಥವಾಗಿ, ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಹೆಚ್ಚಿನ ಶ್ರಮ, ಪ್ರಯತ್ನ ಮತ್ತು ಆಸಕ್ತಿಯ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.

ಅವರು ಶುಕ್ರವಾರದಂದು ಬೆಳಿಗ್ಗೆ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಧ್ಯಸ್ಥಿಕೆ ಕೇಂದ್ರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಮಧ್ಯಸ್ಥಿಕೆ ವಹಿಸುವ ನ್ಯಾಯವಾದಿಗಳಿಗೆ ಆಯೋಜಿಸಿರುವ ಮೂರು ದಿನಗಳ ಮಧ್ಯಸ್ಥಿಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

ಜಿಲ್ಲಾ ನ್ಯಾಯಾಲಯಗಳು ಸೇರಿದಂತೆ ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಪ್ರತಿ ವರ್ಷ ದಾಖಲಾಗುವ ಮತ್ತು ಬಾಕಿ ಉಳಿಯುವ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಬಹುತೇಕ ಪ್ರಕರಣಗಳು ರಾಜಿ ಮಾಡಿಸಲು ಸೂಕ್ತ ಮತ್ತು ಯೋಗ್ಯವಾಗಿದ್ದರೂ ಸಹ ಸಂಬಂಧಪಟ್ಟ ನ್ಯಾಯಾಧೀಶರ ಹಾಗೂ ನ್ಯಾಯವಾದಿಗಳ ಆಸಕ್ತಿಯ ಕೊರತೆಯಿಂದಾಗಿ ಮಧ್ಯಸ್ಥಿಗಾರಿಕೆ ಕೇಂದ್ರಗಳಿಗೆ ಸಲ್ಲಿಕೆಯಾಗದೇ ಉಳಿಯುತ್ತಿವೆ. ಧಾರವಾಡ ಜಿಲ್ಲೆಯ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದಿಂದ ಪ್ರಕರಣಗಳ ಇತ್ಯರ್ಥಪಡಿಸುವಲ್ಲಿ ಶೇ.೧೮.೮೬ ರಷ್ಟು ಸಾಧನೆಯಾಗಿದೆ. ಆದರೆ ೨೦೧೫ ರಿಂದ ೨೦೧೯ ರ ವರೆಗೆ ಮಧ್ಯಸ್ಥಗಾರರಿಗೆ ಸಂಭಾವನೆಗಾಗಿ ಸಾಕಷ್ಟು ವೆಚ್ಚ ಮಾಡಲಾಗಿದೆ. ಸಾಧನೆ ತೃಪ್ತಿಕರವಾಗಿಲ್ಲ ಎಂದು ಹೇಳಿದರು.

ಸಿಪಿಸಿ ಕಲಂ ೮೯ ರಡಿ ಪ್ರಕರಣಗಳು ಮಧ್ಯಸ್ಥಗಾರಿಕೆ ಕೇಂದ್ರಕ್ಕೆ ಕಡ್ಡಾಯವಾಗಿ ಕಳುಹಿಸುವಂತೆ ನ್ಯಾಯಾಧೀಶರು ಸ್ವಯಂ ಪ್ರಯತ್ನ ಮಾಡಬೇಕು. ಮಧ್ಯಸ್ಥಿಗಾರಿಕೆ ವಹಿಸುವ ನ್ಯಾಯವಾದಿಗಳು ಪಕ್ಷಗಾರರಿಗೆ ಸೂಕ್ತ ತಿಳುವಳಿಕೆ, ಪ್ರಕರಣ ಬೆಳೆಯುವುದರಿಂದ ಆಗುವ ಲಾಭ-ಹಾನಿ, ಸಿಗುವ ಪರಿಹಾರಗಳ ಕುರಿತು ಮನವರಿಕೆ ಮಾಡಬೇಕು. ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಪರಸ್ಪರ ಸಹಕಾರದಿಂದ ಪ್ರಕರಣ ನಿರ್ವಹಿಸಿದರೆ “ಶೀಘ್ರ ಮತ್ತು ಸುಲಭ ನ್ಯಾಯ” ದೊರಕಿಸುವ ಸಂಕಲ್ಪ ಈಡೇರುತ್ತದೆ. ಆದ್ದರಿಂದ ಎಲ್ಲರೂ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸೋಣ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ ಅಭಿಪ್ರಾಯಪಟ್ಟರು.

ಮಧ್ಯಸ್ಥಗಾರಿಕೆ ನಿರ್ವಹಿಸಲು ಆಳವಾದ ಅಧ್ಯಯನ, ಅನುಭವ ಮತ್ತು ಮುಕ್ತವಾದ ಚರ್ಚೆ ಮುಖ್ಯ. ಆತ್ಮಸಾಕ್ಷಿಯಿಂದ, ವೃತ್ತಿಬದ್ಧತೆಯಿಂದ ಪರಸ್ಪರ ಸಹಕಾರದಿಂದ ಪ್ರಕರಣಗಳನ್ನು ಸಮರ್ಥವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಲು ಎಲ್ಲರೂ ಪ್ರಯತ್ನಿಸೋಣ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ ಅವರು ಮಾತನಾಡಿ, ರಾಜಿ ಮಾಡಿಸುವಲ್ಲಿ ನ್ಯಾಯವಾದಿಗಳ ಪಾತ್ರವೂ ಮುಖ್ಯ. ಆಸ್ತಿ ವಿವಾದ, ಆಸ್ತಿ ಪಾಲು ವಿವಾದ, ಕೌಟುಂಬಿಕ ಕಲಹ ಪ್ರಕರಣ, ಗಂಡ-ಹೆಂಡತಿ ಮದ್ಯ ವೈಮನಸ್ಸಿನಿಂದ ಉಂಟಾದ ಪ್ರಕರಣಗಳು ಹೆಚ್ಚು ಬರುತ್ತವೆ. ಇಂತಹ ಪ್ರಕರಣಗಳ ನ್ಯಾಯ ತೀರ್ಮಾನದಲ್ಲಿ ರಾಜಿ ಬಹುಮುಖ್ಯವಾಗಿರುತ್ತದೆ. ಆದ್ದರಿಂದ ನ್ಯಾಯವಾದಿಗಳು ನ್ಯಾಯಾಧೀಶರ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡಿ ಸುಖಾಂತ್ಯಗೊಳಿಸಬೇಕು. ಆ ನಿಟ್ಟಿನಲ್ಲಿ ಅನುಭವಿಕರ ನೆರವು ಪಡೆಯಬೇಕೆಂದು ಅವರು ಹೇಳಿದರು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ವಿಜಯಕುಮಾರ್ ಆರ್. ಮತ್ತು ಜೋ ಜೋಶಫ್ ವೇದಿಕೆಯಲ್ಲಿದ್ದರು. ಜಿಲ್ಲಾ ನ್ಯಾಯಧೀಶರುಗಳಾದ ಗಂಗಾಧರ ಸಿ.ಎಂ., ಎಸ್.ಸಿ. ಶ್ಯಾಮಪ್ರಸಾದ, ಹೊಸಮನಿ ಸಿದ್ದಪ್ಪ ಎಚ್., ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ಕುಜ್ಜಿ, ಸಿ.ಜೆ.ಎಂ ಅವರಾದ ಶ್ರಿಕಾಂತ ಎಸ್.ವ್ಹಿ,, ಮಮತಾ ಡಿ., ಸುಜಾತಾ, ವಿಜಯಲಕ್ಷಿö್ಮ ಘನಾಪೂರ, ಕುರಣಿಕಾಂತ ಧಾಕು ಮತ್ತು ಪರಿಮಳಾ ತುಬಾಕಿ ಸೇರಿದಂತೆ ವಿವಿಧ ನ್ಯಾಯಾಧೀಶರು ಹಾಗೂ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಮಧ್ಯಸ್ಥಿಕೆದಾರ ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನ್ಯಾಯಾಲಯದ ಶಿರಸ್ತೆದಾರ ದೀಪಕ್ ವಾಳದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

-Dharawad VB.

Comments