UK Suddi
The news is by your side.

ಒಲವಿನ ಪೂಜೆಯಲಿ ಒಂದಾಗೋಣ.

ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ 9449234142

ಗೆಳತಿ ನಿನ್ನ ಹೆಸರು ಕೇಳಿದರೆ ಸಾಕು ಮೈಯಲ್ಲಿರುವ ನರನಾಡಿಗಳೆಲ್ಲ ಮಿಡಿಯುವ ವೀಣೆಯಾಗುತ್ತವೆ. ಮನಸ್ಸು ಬಾನಾಡಿಯಾಗಿ ಬಾನೆತ್ತರಕ್ಕೆ ಚಿಮ್ಮುತ್ತವೆ. ವರ್ಷದ ನಂತರ ನಿನ್ನ ಭೇಟಿಯಾಗುವ ಕ್ಷಣ ಸನಿಹ ಬಂದಂತೆ ಮನದಲ್ಲೇನೋ ಹೇಳಲಾಗದ ಭಾವ ಇದುವರೆಗೂ ಕಾಣದ ಕಂಪನ. ಅಂದ ಚೆಂದದ ಮೈ ಮಾಟಕ್ಕೆ ಕಿರೀಟವಿಟ್ಟಂತೆ ನಿನ್ನ ನಡತೆ. ನಿನಗೆ ಸೋಲದ ಗಂಡು ಇನ್ನೂ ಹುಟ್ಟಿಯೇ ಇಲ್ಲ ಅನಿಸುತ್ತದೆ. ಎಂಥ ಗಂಡೆದೆಯಿರುವವನೂ ನಿನ್ನ ಮುಂದೆ ಮಂಡೆಯೂರಿ ನಿನ್ನ ಪ್ರೀತಿಗಾಗಿ ಅರ್ಜಿ ಗುಜರಾಯಿಸುವನು.ನಿನ್ನ ಮೃದು ಹೃದಯ ತನ್ನದಾಗಿಸಿಕೊಳ್ಳಲು ಹಂಬಲಿಸದೇ ಇರನು. ಪರಿ ಪರಿಯಾಗಿ ಬೇಡಿಕೊಳ್ಳದೇ ಇರನು. ಕವಿಯ ಕಲ್ಪನೆಗೆ ರೂಪ ಕೊಟ್ಟಂತಿರುವ ಅಪರೂಪದ ರೂಪ ನಿನ್ನದು. ಪ್ರಥಮ ನೋಟದಲ್ಲೇ ಯಾರೂ ಕಾಲಿಡದ ನನ್ನ ಹೃದಯದ ಅರಮನೆಯ ಕೀಲಿ ತೆರೆದು ನಿನಗೆ ಪ್ರವೇಶ ನೀಡಿಯಾಗಿದೆ. ಹೊರ ಹೋಗದಂತೆ ಹೃದಯಕ್ಕೆ ದೊಡ್ಡ ಬೀಗವನ್ನೂ ಅಂದೇ ಜಡಿದಾಗಿದೆ. ಹಾಗಿದ್ದ ಮೇಲೆ ನೀನು ಹೊರ ನಡೆಯುವ ಮಾತೇ ಇಲ್ಲ.

ಮುನಿಸು ಜಗಳಗಳಲ್ಲೂ ಪ್ರೀತಿಯನ್ನೇ ತುಂಬುವ ನಿನ್ನ ಗುಣ ಅಪ್ಯಾಯಮಾನ. ನೋವುಗಳನ್ನು ನಲಿವಾಗಿ ರೂಪಾಂತರಿಸುವ ಕಲೆ ನಿನಗೆ ಅದಾವ ಕಲೆಗಾರ ಕಲಿಸಿದನೋ ನಾ ಕಾಣೆ. ನನ್ನ ಸಂಕಷ್ಟಗಳಿಗೆಲ್ಲ ಮುದ್ದಿನ ಮದ್ದು ಸವರಿ ಜೀವನವೇ ಬೇಡ ಎದ್ದು ಹೊರಟ ನನ್ನಲ್ಲಿ ಜೀವನೋತ್ಸಾಹ ತುಂಬಿದ ಶಕ್ತಿ ದೇವತೆ ನೀನು. ಬಾಳಿನ ಸುಂದರ ಅರಮನೆ ಕಟ್ಟಲು ಒಲವೇ ಆಧಾರ. ಅರಿವೇ ಸುಂದರ ಬದುಕಿನ ಮೂಲ. ಎಂದು ನುಡಿಯದೇ ನಡೆದು ತೋರುತ್ತಿದ್ದ ನಿನ್ನ ಮೆಲೆ ಅದಾವ ತತ್ವಜಾನಿಯ ನೆರಳು ಬಿದ್ದಿತ್ತೋ ಗೊತ್ತಿಲ್ಲ. ನನ್ನನ್ನೂ ಅದೇ ದಾರಿಯಲ್ಲಿ ನಡೆಯುವಂತೆ ಎಳೆದು ತಂದು ನಿಲ್ಲಿಸಿದ ಮಾಯಾದೇವತೆ ನೀನು. ನನ್ನ ಕಣ್ಣಿನ ರೆಪ್ಪೆ ಅಂಟಿಕೊಳ್ಳದಿರುವಾಗಲೂ ಅಂಟಿಕೊಂಡಾಗಲೂ ನೋಡಲು ಹಂಬಲಿಸುವ ಪುತ್ಥಳಿ ಬೊಂಬೆಯೊಂದೇ ಅದೇ ನೀನು ಎಂದು ಬೇರೆ ಹೇಳಬೇಕಿಲ್ಲ.
ನಿನ್ನದೇ ನೆನಪಿನ ಗುಂಗಲ್ಲಿ ಹಗಲು ಇರಳು ತಿಳಿಯದಾಗಿದೆ. ಎಲ್ಲ ಹುಡುಗಿಯರಲ್ಲೂ ನೀನೇ ಕಾಣುತ್ತಿರುವೆ. ಉಳಿದ ಹುಡುಗಿಯರಂತೆ ನಿನ್ನಲ್ಲಿ ಹಟಮಾರಿತನ ಸಿಡಿಮಿಡಿ ಗುಣ ಕಾಣಲೇ ಇಲ್ಲ ಜೊತೆಗಿದ್ದ ದಿನಗಳಲ್ಲೆಲ್ಲ ಕೂಡಿ ಇರುವ ಪಾಠವೊಂದನ್ನೇ ಕಲಿಸಿ ಕೊಟ್ಟಾಕೆ ನೀನು. ರೂಪ ರಾಶಿಯಂದಿಗೆ ಆ ದೇವ ನಿನಗೆ ಸದ್ಗುಣಗಳನ್ನು ಧಾರೆಯೆರೆಯುವುದನ್ನು ಮರೆತಿಲ್ಲ. ಮಾತಿಗಿಂತ ಮೌನದಲ್ಲೇ ಪ್ರೀತಿ ಅಭಿವ್ಯಕ್ತಿಸುವ ಪರಿ ಮೆಚ್ಚಲೇಬೇಕಾದುದು. ನಸುನಗುತ್ತ ಲೇ ಜೀವನದ ಅಡೆತಡೆಗಳಿಗೆ ಪರಿಹಾರ ಸೂಚಿಸುವುದನು ಕಂಡು ನಿಬ್ಬೆರಗಾಗಿದ್ದೇನೆ. ಪ್ರೀತಿಯ ಔಷಧಿಗೆ ಮನಸ್ಸಿಗಾದ ಎಂಥ ಹಳೆಯ ಗಾಯವನ್ನೂ ಮಾಯುವಾಗಿಸುವ ಶಕ್ತಿಯಿದೆ ಎಂಬುದನ್ನು ಸಾಧಿಸಿ ತೋರಿಸಿದಾಕೆ ನೀನು. ಗೆಳತಿ ಹೇಳು ಇಷ್ಟೆಲ್ಲ ನನ್ನ ಜೀವನದಲ್ಲಿ ಆವರಿಸಿಕೊಂಡ ನಿನ್ನನ್ನು ಮರೆಯುವದಾದರೂ ಹೇಗೆ ಮರೆಯಲು ಮನಸ್ಸು ಮಾಡಿದಷ್ಟು ಮತ್ತೆ ಮತ್ತೆ ನೆನಪಿಗೆ ಬರುವಂಥವಳು ನೀನು. ನನ್ನ ಹೃದಯವನ್ನು ಮುಟ್ಟುಗೋಲು ಹಾಕಿಕೊಂಡು ಅಷ್ಟು ದೂರ ನೀನಿದ್ದರೂ ನಾನು ನಿನ್ನ ಸವಿನೆನಪುಗಳಿಂದ ಮುಕ್ತಿ ಹೊಂದಲು ಸಾಧ್ಯವೇ ಇಲ್ಲ. ಹೃದಯದ ಬ್ಯಾಂಕಿನಲ್ಲಿ ನಿನ್ನದೊಂದೇ ಖಾತೆ ಅದು ಒಲುಮೆಯ ಉಳಿತಾಯದ ಖಾತೆ ಬಳಿಸಿದಷ್ಟು ಬೆಳೆಯುವಂಥದು. ಪ್ರತಿಕೂಲ ಪರಿಸ್ತಿತಿಯಲ್ಲಿ ಅನುಕೂಲವಾಗಿರುವುದು ಹೇಗೆ ಎಂದು ಹೇಳಿಕೊಟ್ಟಿದ್ದಿಯಾ ಆದರೂ ಮನಸ್ಸೇಕೋ ನಿನ್ನ ಯೋಚನೆಗಳಲ್ಲಿಯೇ ಬಿಟ್ಟೂ ಬಿಡದೇ ಸುಳಿಯುತ್ತಿದೆ.

ಸಾಗರದ ಅಲೆಗಳು ಅಪ್ಪಳಿಸುವಂತೆ ನಿನ್ನ ನೆನಪುಗಳು ಮನದ ದಡದಲ್ಲಿ ಅಪ್ಪಳಿಸುತ್ತಿವೆ. ಏರಿಳಿತದೊಂದಿಗೆ ಸದ್ದು ಹೆಚ್ಚಿಸುತ್ತಲೇ ಇವೆ. ಏಕಾಂತದಲ್ಲಂತೂ ನಿನ್ನಸವಿನೆನಪಿನ ಗಾನ ಸುಧೆ ತೇಲಿ ಬಂದು ಹೃದಯದ ಬಡಿತ ತಾಳಕ್ಕೆ ಸಿಗದೇ ಹೋಗುತ್ತದೆ. ಅದೇನು ಮೋಡಿಯೋ ನಾ ಕಾಣೆ? ಪ್ರೀತಿಯ ಹೆಸರಲ್ಲಿ ಈಗಾಗಲೇ ಅರ್ಧ ಸುಟ್ಟುಕೊಂಡ ಹೃದಯ ಹೊತ್ತು,ಪ್ರೀತಿಯ ಶಬ್ದಕ್ಕೆ ಬೆನ್ನು ತೋರಿ ನಡೆದವನಿಗೆ ಮತ್ತೆ ಹೃದಯ ಒಲವ ಪಲ್ಲವಿ ಹಾಡುವ ಹಾಗೆ ಮಾಡಿದ ಮಾಟಗಾತಿ ನೀನು. ಮರಭೂಮಿಯಂತಾದ ಎದೆಯಲ್ಲಿ ಅನುರಾಗದ ಗುಲಾಬಿ ಅರಳಿಸಿದ ಸೊಗಸುಗಾತಿ ನೀನು.

ರಾತ್ರಿಯೆಲ್ಲ ನಿನ್ನ ಚಿತ್ರವೇ ಕಣ್ಮುಂದೆ ಬಂದು ನಿಂತು ನಿದ್ದೆ ಮಾಡಲು ಬಿಡುತ್ತಿಲ್ಲ. ಹಗಲು ಹೋದಲೆಲ್ಲ ನಿನ್ನದೇ ಘಮಲು. ರಾತ್ರಿಯೂ ನಿನ್ನದೇ ಅಮಲು.ಬಿಡದಂತೆ ಕಾಡುವ ನಿನ್ನ ನೆನಪುಗಳಿಗೆ ಇತಿಶ್ರೀ ಹಾಕಲು ಮನಸ್ಸೇ ಬರುತ್ತಿಲ್ಲ. ನಾನು ನೀನು ಒಂದಾಗಿ ಬಾಳುವ ಮಧುರ ಗಳಿಗೆಗೆ ಕ್ಷಣ ಗಣನೆ ಶುರುವಾಗಿದೆ. ಅರಿಷಿಣದ ಕೊಂಬು ಕಟ್ಟಿದ ದಾರ ಹಿಡಿದು ನಿನ್ನ ಇಷ್ಟ ದೈವ ಗಣಪತಿ ಗುಡಿಯಲ್ಲಿ ಕಾಯುತಿರುವೆ. ಹೆದರದಿರು ನನ್ನ ನಿನ್ನ ಭಾವಿ ಅತ್ತೆ ಮಾವಂದರೂ ನಮ್ಮ ಶುಭ ವಿವಾಹಕೆ ಹಸಿರು ನಿಶಾನೆ ತೋರಿಸಿಹರು ಯಾವ ತಡೆಗೋಡೆಗಳು ನಮ್ಮನ್ನು ತಡೆಯಲಾರವು. ಬೇಗ ಬಂದು ಬಿಡು ಒಲವಿನ ಪೂಜೆಯಲಿ ಒಂದಾಗೋಣ.

Comments