UK Suddi
The news is by your side.

ಕ್ಲಬ್ ಮೇಲೆ ಪೊಲೀಸರ ದಿಢೀರ್ ದಾಳಿ : 70 ಜನ ಆರೋಪಿಗಳ ವಶಕ್ಕೆ.

ಬಂಟ್ವಾಳ(ಮಂಗಳೂರು): ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರಿನಲ್ಲಿ ನಡೆಯುತ್ತಿದ್ದ ಪರವಾನಿಗೆ ರಹಿತ ರಿಕ್ರಿಯೇಶನ್ ಕ್ಲಬ್ಬಿಗೆ ಶನಿವಾರ ಸಂಜೆ ದಾಳಿ ನಡೆಸಿದ ಬಂಟ್ವಾಳ ಎಎಸ್ಪಿ ಸೈದುಲ್ ಅದಾವತ್ ನೇತೃತ್ವದ ಪೊಲೀಸರು ಕ್ಲಬ್ ಮ್ಯಾನೇಜರ್ ಸಹಿತ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ 70 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಲ್ಲದೆ ಅಪಾರ ಪ್ರಮಾಣದ ಹಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೆಲ್ಕಾರ್ ಜಂಕ್ಷನ್ ಸಮೀಪದ ಪ್ರಸನ್ನ ಕಾಂಪ್ಲೆಕ್ಸ್‍ನಲ್ಲಿ ಕಾಸರಗೋಡು-ಮಂಜೇಶ್ವರ ನಿವಾಸಿ ದಿವಾಕರ ಎಂಬವರ ಪುತ್ರ ಸಾಯಿ ಕಿರಣ್ ಎಂಬಾತ ನಡೆಸುತ್ತಿದ್ದ ಪರವಾನಿಗೆ ರಹಿತ ಬಂಟ್ವಾಳ ರಿಕ್ರಿಯೇಶನ್ ಕ್ಲಬ್ ಬಗ್ಗೆ ಖಚಿತ ಮಾಹಿತಿ ಪಡೆದ ಎಎಸ್ಪಿ ಅವರು ಬಂಟ್ವಾಳ ನ್ಯಾಯಾಧೀಶರ ಅನುಮತಿ ಪಡೆದು ಸರ್ಚ್ ವಾರಂಟ್‍ನೊಂದಿಗೆ ಶನಿವಾರ ಸಂಜೆ ಈ ದಾಳಿ ಸಂಘಟಿಸಿದ್ದಾರೆ.

ದಾಳಿ ವೇಳೆ ಕ್ಲಬ್ ಮ್ಯಾನೇಜರ್ ಸಾಯಿ ಕಿರಣ್ ಸಹಿತ 70 ಮಂದಿ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಕ್ಲಬ್ಬಿನಿಂದ ಪೊಲೀಸರು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 72,100/- ರೂಪಾಯಿ ನಗದು ಹಣ, 1 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪೆನಿಗೆ ಸೇರಿದ 51 ಮೊಬೈಲ್ ಫೋನ್‍ಗಳು, 52 ಇಸ್ಪೀಟು ಎಲೆಗಳು, 2 ಡಿವಿಆರ್, 1 ಪೆನ್ನು, ಒಂದು ಟೇಬಲ್, 7 ಕುರ್ಚಿಗಳನ್ನು ವಶಪಡಿಸಿಕೊಂಡಿದ್ದಾರೆ,

ದಾಳಿ ವೇಳೆ 2 ಜೀಪು ಹಾಗೂ ಒಂದು ಬಸ್ಸಿನಲ್ಲಿ ಬಂದ ಭಾರೀ ಸಂಖ್ಯೆಯ ಪೊಲೀಸರು ಸಂಕೀರ್ಣವನ್ನು ಸುತ್ತುವರಿದು ಈ ದಾಳಿ ಸಂಘಟಿಸಿದ್ದರಿಂದ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ದೊರೆಯದೆ ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಪರಿಸರದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕುತೂಹಲದಿಂದ ಜಮಾಯಿಸಿರುವುದು ಕಂಡು ಬಂತು. ಕಾರ್ಯಾಚರಣೆಯಲ್ಲಿ ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ್, ಸಂಚಾರಿ ಎಸ್ಸೈ ಮಂಜುನಾಥ ಸಹಿತ ಪೊಲೀಸರು ಪಾಲ್ಗೊಂಡಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಕರ್ನಾಟಕ ಪೆÇಲೀಸ್ ಕಾಯಿದೆ 1963 ರಂತೆ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ತಾಲೂಕಿನ ಬಿ ಸಿ ರೋಡು, ಮೆಲ್ಕಾರ್ ಮೊದಲಾದೆಡೆ ಈ ಹಿಂದೆಯೂ ಇಂತಹ ಅಕ್ರಮ ಕ್ಲಬ್‍ಗಳು ಕಾರ್ಯಾಚರಿಸುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ದಿಢೀರ್ ದಾಳಿ ನಡೆಸಿದ ಪೊಲೀಸರು ಇವುಗಳನ್ನು ಸಂಪೂರ್ಣವಾಗಿ ಮುಚ್ಚಲು ಕ್ರಮ ಕೈಗೊಂಡಿದ್ದರು. ಆ ಬಳಿಕ ಇದು ಮತ್ತೆ ಪೊಲೀಸರ ಕಣ್ಣು ತಪ್ಪಿಸಿ ಸಕ್ರಿಯಾಗಿತ್ತು ಎನ್ನಲಾಗಿದೆ. ಇದೀಗ ಬಂಟ್ವಾಳ ಎಎಸ್ಪಿ ಅವರಿಗೆ ದೊರೆತ ಖಚಿತ ಮಾಹಿತಿಯಂತೆ ಶನಿವಾರ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Comments