UK Suddi
The news is by your side.

ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾನ ಜಾಗೃತಿ ಕಾರ್ಯಾಗಾರ.

ಬಾದಾಮಿ(ಬಾಗಲಕೋಟ):ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಬಾಗಲಕೋಟ ಜಿಲ್ಲಾ ಸಹಾಯಕ ಚುನಾವಣಾಧಿಕಾರಿಗಳಾದ ರಾಯಪ್ಪ ಹುನಸಗಿ ಅವರು ಕರೆ ನೀಡಿದರು.

ಅವರು ಅಂಬೇಡ್ಕರ್ ಭವನದಲ್ಲಿ ನಡೆದ ಬಾದಾಮಿ ತಾಲೂಕಿನ ಬೂತ್ ಮಟ್ಟದ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ ಬೂತ್ ಹಂತದ ಅಧಿಕಾರಿಗಳು ಚುನಾವಣೆಯೆಂಬ ಮರದ ತಾಯಿ ಬೇರಿನಂತಿದ್ದು ತಮ್ಮ ವ್ಯಾಪ್ತಿಯಲ್ಲಿ ಬರುವ ಮತದಾರರಲ್ಲಿ ಮತದಾನದ ಪಾವಿತ್ರ್ಯತೆಯನ್ನು ತಿಳಿಸಿ ಪ್ರತಿಶತ ನೂರರಷ್ಟು ಮತದಾನವಾಗಲು ಶ್ರಮಿಸಬೇಕೆಂದು ತಿಳಿಸಿದರು.

ತಾಲೂಕಾ ದಂಡಾಧಿಕಾರಿಗಳಾದ ಸುಹಾಸ ಇಂಗಳೆ ಅವರು ಮಾತನಾಡುತ್ತ ಪಕ್ಷಾತೀತವಾಗಿ ತಮ್ಮ ಕಾರ್ಯವನ್ನು ಮಾಡುತ್ತ ಯುವ ಮತದಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು.ಮತದಾರರ ಪಟ್ಟಿಯಲ್ಲಿರುವ ಅರ್ಹ ಮತದಾರರು ಮತದಾನದಿಂದ ವಂಚಿತರಾಗದಂತೆ ಅಗತ್ಯ ಕ್ರಮವಹಿಸಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಎ ಎಸ್ ಹತ್ತಳ್ಳಿ ಅವರು ಚುನಾವಣೆ ಕಾರ್ಯ ಮುಗಿಯುವವರೆಗೆ ತಮ್ಮ ಕ್ಷೇತ್ರದಲ್ಲಿದ್ದು ಮತಗಟ್ಟೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದಿದ್ದಲ್ಲಿ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ತಿಳಿಸುತ್ತ ಚುನಾವಣಾ ಕರ್ತವ್ಯವನ್ನು ಯಾವುದೇ ಲೋಪವಾಗದಂತೆ ನಿರ್ವಹಿಸಿ,ಚುನಾವಣಾ ಕಾರ್ಯ ಯಶಸ್ವಿಗೊಳಿಸಲು ಸಹಕಾರ ಕೋರಿದರು.ದೈಹಿಕ ಶಿಕ್ಷಣ ಪರಿವೀಕ್ಷಕ ವಿವೇಕಾನಂದ ಮೇಟಿ ಉಪಸ್ಥಿತರಿದ್ದರು.ಬಿ ಎಮ್ ಬುಯ್ಯಾರ,ಇರ್ಫಾನ್ ಬಂಕಾಪೂರ,ಸಿದ್ದು ಬೀಳಗಿ ಕಾರ್ಯಗಾರದಲ್ಲಿ ತರಬೇತಿ ನೀಡಿದರು‌.ಇದೇ ಸಂದರ್ಭದಲ್ಲಿ ಸಾಹಿತಿ ರವಿ ಕಂಗಳ ಅವರು ರಚಿಸಿದ ಮತದಾನ ಜಾಗೃತಿ ಗೀತೆಗಳನ್ನು ಹಾಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಎಮ್ ಪಿ ಮಾಗಿ ಸ್ವಾಗತಿಸಿದರು.ಬಿ ಆರ್ ಪಿ,ಡಿ ಬಿ ಹಡಗಲಿ ನಿರೂಪಿಸಿ ವಂದಿಸಿದರು.

Comments