UK Suddi
The news is by your side.

ಯಕ್ಷಗಾನದಲ್ಲೂ ನಿಖಿಲ್ ಎಲ್ಲಿದ್ದೀಯಪ್ಪಾ ಹಾಸ್ಯ ತುಣುಕು..!

ಮಂಗಳೂರು: ಈಗಾಗಲೇ ಟ್ರೋಲ್ಗೊಳಗಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆ ಯಕ್ಷಲೋಕದಲ್ಲೂ ಹಾಸ್ಯದ ಹೊನಲು ಹರಿಸಿದೆ. ನಿಖಿಲ್ ಎಲ್ಲಿದ್ದೀಯಪ್ಪಾ, ಜನರ ಮಧ್ಯೆ ಆಗ್ಲೇ ಸೇರಿಬಿಟ್ಟಿದ್ದೀಯಾ ಅನ್ನೋ ಈ ಸಂಭಾಷಣೆ ಈಗ ಎಲ್ಲರ ಅಚ್ಚುಮೆಚ್ಚಿನ ಸ್ಟೇಟಸ್ ಟ್ರೋಲ್ ಆಗಿದೆ.

ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲೂ ಈ ಹಾಸ್ಯ ತುಣುಕು ಇಣುಕು ಹಾಕಿದೆ. ತಂದೆ ಮಗನ ಸಂಭಾಷಣೆ ಯಾವ ರೀತಿ ನಗು ಬುಗ್ಗೆ ಹರಿಸಿತು ಅನ್ನೋದಕ್ಕೆ ಈಗ ಕರಾವಳಿಯಾದ್ಯಂತ ಹರಿದಾಡುತ್ತಿರುವ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಪ್ರಸಂಗದ ತುಣುಕು ಸಾಕ್ಷಿಯಾಗಿದೆ. ಅದರಲ್ಲೂ ಈ ಹಾಸ್ಯದ ತುಣುಕು ಪ್ರಸಿದ್ಧ ಹಾಸ್ಯ ಕಲಾವಿದರ ಬಾಯಲ್ಲಿ ವಿಭಿನ್ನವಾಗಿ ಯಕ್ಷ ಪ್ರಿಯರನ್ನು ತಲುಪಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೊಳಗಾಗಿ ಹಾಸ್ಯಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಈ ಋತುವಿನ ಜನಪ್ರಿಯ ಯಕ್ಷಗಾನ ಪ್ರಸಂಗ ‘ಬೊಳ್ಳಿದ ಬೊಲ್ಗೊಡೆ’ (ಬೆಳ್ಳಿಯ ಛತ್ರಿ)ಯಲ್ಲಿ ಈ ಹಾಸ್ಯದ ತುಣುಕು ಕಾಣಿಸಿಕೊಂಡಿದೆ. ಖ್ಯಾತ ಹಾಸ್ಯ ಕಲಾವಿದರಾದ ಪ್ರಸನ್ನ ಶೆಟ್ಟಿ ಬೈಲೂರು, ಕಡಬ ಶ್ರೀನಿವಾಸ ರೈ ಯಕ್ಷ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರೆ, ಸಭಿಕರ ಮಧ್ಯೆಯಿಂದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೊಡಪಡವು ನಟಿಸಿದ್ದಾರೆ. ಯಕ್ಷಗಾನದ ಚೌಕಟ್ಟು ಮೀರದಂತೆ ಹಾಗೂ ಯಾರಿಗೂ ನೋವಾಗಬಾರದೆನ್ನುವ ದೃಷ್ಟಿಕೋನದಿಂದ ಯಥಾವತ್ತಾಗಿ ಸಂಭಾಷಣೆ ಗೊತ್ತು ಮಾಡದೇ, ‘ವಾಮನ ಎಲ್ಲಿದ್ದೀಯಾ, ನೀನು ಬಿರುದು ಸಿಕ್ಕಿದ ಕೂಡಲೇ ಜನರ ಮಧ್ಯೆ ಹೋಗಿ ಕೂತಿದ್ದೀಯ ಮಗಾ’ ಎನ್ನುವ ಕಾಲ್ಪನಿಕ ಸಂಭಾಷಣೆ ನಡೆಯುತ್ತೆ. ಇದು ಹೆಚ್ಡಿಕೆ- ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆಯಂತೆಯೇ ಭಾಸವಾಗುತ್ತಿದ್ದು, ಯಕ್ಷಾಭಿಮಾನಿಗಳ ಅಚ್ಚುಮೆಚ್ಚಿನ ಟ್ರೋಲ್ ತುಣುಕಾಗಿ ಹರಿದಾಡತೊಡಗಿದೆ.‌ ಅಂದಹಾಗೆ ಈ ಯಕ್ಷಗಾನ ಪ್ರಸಂಗವು ಉಡುಪಿಯ ಪಳ್ಳಿಯಲ್ಲಿ ಅತಿಥಿ ಕಲಾವಿದರ ಸಹಯೋಗದೊಂದಿಗೆ ಬಪ್ಪನಾಡು ಮೇಳದ ಕಲಾವಿದರು ನಿನ್ನೆಯಷ್ಟೇ ಪ್ರದರ್ಶಿಸಿದ್ದರು.‌

Comments