UK Suddi
The news is by your side.

ವಿಕಲಚೇತನರು ಹಿರಿಯ ನಾಗರಿಕರರ ಮತದಾನಕ್ಕೆ ಉತ್ತೇಜನ:ಜಿಲ್ಲಾಧಿಕಾರಿ ದೀಪಾ ಚೋಳನ್

ಹುಬ್ಬಳ್ಳಿ:ಲೈಂಗಿಕ ಅಲ್ಪಸಂಖ್ಯಾತರು, ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಸಮಾಜದಲ್ಲಿ ನಿರ್ಲಕ್ಷಿತರಾಗಬಾರದು, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ವಿಕಲಚೇತನರಿಗೆ ಮತಗಟ್ಟೆಗೆ ಬರಲು ವಾಹನ, ಗಾಲಿಕುರ್ಚಿ ಮತ್ತಿತರ ಸಾಧನ ಸಲಕೆರಣೆಗನ್ನು ಅಗತ್ಯವಿರುವ ಕಡೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಹೇಳಿದರು.
ಮಿನಿ ವಿಧಾನಸೌಧದಲ್ಲಿ ಇಂದು ವಿಕಲಚೇತನರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಹಿರಿಯ ನಾಗರಿಕರಿಗೆ ಏರ್ಪಡಿಸಿದ್ದ ಮತದಾನ ಜಾಗೃತಿ, ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಬಳಕೆ ಪ್ರಾತ್ಯಕ್ಷಿಕೆ ಉದ್ದೇಶಿಸಿ ಅವರು ಮಾತನಾಡಿದರು. ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ 1872 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಇರುವ ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರ ಸಂಖ್ಯೆಯನ್ನು ವಲಯ ಅಧಿಕಾರಿಗಳ ಮೂಲಕ ನಿಖರವಾಗಿ ಸಂಗ್ರಹಿಸಲಾಗುತ್ತಿದೆ. ಅಗತ್ಯವಿರುವ ಎಲ್ಲಾ ಮತಗಟ್ಟೆಗಳಿಗೆ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರನ್ನು ಕರೆತರಲು ವಾಹನ ವ್ಯವಸ್ಥೆ, ವೀಲ್ ಚೇರ್ ಹಾಗೂ ಮತದಾನ ಕೇಂದ್ರಕ್ಕೆ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುವಂತೆ ಇಳಿಜಾರು(ರ್ಯಾಂಪ್) ಮಾರ್ಗವನ್ನು ನಿರ್ಮಿಸಲಾಗುವುದು. ಅಂಧ ಮತದಾರರಿಗೆ ಮೂರು ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅವರಿಗೆ ಬ್ರೈಲ್ ಲಿಪಿಯಲ್ಲಿ ಮತಪತ್ರದ ನಮೂನೆ ಅಳವಡಿಸಲಾಗುವುದು. ಬ್ರೈಲ್ ತಿಳಿಯದ ಮತದಾರರು ತಮ್ಮ ಜೊತೆಗೆ ಓರ್ವ ಸಹಾಯಕರನ್ನು ಇವಿಎಂ ಯಂತ್ರದವರೆಗೆ ಕರೆದೊಯ್ಯಲು ಅನುಮತಿ ನೀಡಲಾಗಿದೆ. ಇದಕ್ಕೂ ಮುನ್ನ ಮತಗಟ್ಟೆಯಲ್ಲಿರುವ ಅಣುಕು ಮತಯಂತ್ರದ ಮೂಲಕ ಅವರಿಗೆ ಮತ ಚಲಾವಣೆಯ ವಿಧಾನ ಕುರಿತು ಮಾಹಿತಿ ನೀಡಲಾಗುವುದು ಎಂದರು.
ತ್ರೀವ್ರ ಅಸ್ವಸ್ಥರಾಗಿ ಹಾಸಿಗೆ ಹಿಡಿದಿರುವ ಹಿರಿಯ ನಾಗರಿಕರು ಹಾಗೂ ವಯೋವೃದ್ಧರನ್ನು ಅಲಕ್ಷಿಸಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಅವರಿಗೆ ಸಾರಿಗೆ ಹಾಗೂ ಸಹಾಯ ಒದಗಿಸಲಾಗುತ್ತಿದೆ. ಮಾಜಿ ದೇವದಾಸಿಯರು, ದಮನಿತ ಮಹಿಳೆಯರು, ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಕೂಡ ಯಾವುದೇ ಹಿಂಜರಿಕೆ, ಕೀಳರಿಮೆಗಳನ್ನು ಇಟ್ಟುಕೊಳ್ಳದೇ, ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವರಲ್ಲಿ ಆತ್ಮವಿಶ್ವಾಸ ರೂಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ 13450 ವಿಕಲಚೇತನರು ಇದ್ದಾರೆ. ಅವರ ಹೆಸರು ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿರುವುದನ್ನು ಖಚಿತ ಪಡಿಸಿಕೊಂಡಿದ್ದೇವೆ. ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ್, ಮಾತನಾಡಿ, ಜಿಲ್ಲೆಯ ಎಲ್ಲಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಎರಡು ಸುತ್ತಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಾಗುತ್ತಿದೆ. ಈಗಾಗಲೇ ಒಂದು ಸುತ್ತಿನ ಕಾರ್ಯಕ್ರಮಗಳು ಮುಗಿದಿವೆ. ಮತದಾನಕ್ಕೆ ಮುನ್ನ ಎರಡನೇ ಸುತ್ತಿನ ಜಾಗೃತಿ ಕಾರ್ಯಕ್ರಮಗಳು ಪೂರ್ಣಗೊಳ್ಳಲಿವೆ. ಕಾರ್ಮಿಕರು, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಕೃಷಿಕರು ಹೀಗೆ ವಿವಿಧ ಜನ ಸಮುದಾಯಗಳನ್ನು ಸಂಘಟಿಸಿ ಅವರಿಗೆ ಮತದಾನದ ಮಹತ್ವ ಮತ್ತು ಇವಿಎಂ, ವಿವಿಪ್ಯಾಟ್ ಬಳಕೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುತ್ತಿದೆ. ಎಲ್ಲಾ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‍ಗಳನ್ನು ರಚಿಸಿ, ನವಯುವ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಯುವ ಮತದಾರರು ವೈಯಕ್ತಿಕ ಅಥವಾ ಸಾಮೂಹಿಕವಾಗಿ ಗುಂಪಿನೊಂದಿಗೆ ಮತಚಲಾಯಿಸಿ ಬೆರಳಿಗೆ ಹಾಕಿಸಿಕೊಂಡ ಶಾಹಿ ಕಾಣಿಸುವ ಹಾಗೆ ಸೆಲ್ಪಿ ಫೋಟೋ ತೆಗೆದುಕೊಂಡು ಜಿಲ್ಲಾ ಸ್ವೀಪ್ ಸಮಿತಿಗೆ ಕಳುಹಿಸಿದರೆ, ಅದರಲ್ಲಿ ಅತ್ಯತ್ತಮವಾದುದನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಗುವುದು ಎಂದರು.
ಲೈಂಗಿಕ ಅಲ್ಪಸಂಖ್ಯಾತರ ಮತದಾರ ನೋಂದಣಿ ಸಮಸ್ಯೆಗೆ ಪರಿಹಾರ ಸೂಚಿಸಿದ ಜಿಲ್ಲಾಧಿಕಾರಿ: ಮಿನಿವಿಧಾನ ಸೌಧದಲ್ಲಿ ಇಂದು ನಡೆದ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಭೇಟಿ ಮಾಡಿದ ಲೈಂಗಿಕ ಅಲ್ಪಸಂಖ್ಯಾತರು ಮತದಾರರ ಪಟ್ಟಿ ನೋಂದಣಿಗೆ ಅಗತ್ಯವಿರುವ ವಾಸಸ್ಥಳ ಧೃಡೀಕರಣ, ಆಧಾರ ಕಾರ್ಡ ಒದಗಿಸಲು ತಮಗೆ ಆಗುತ್ತಿರುವ ಸಮಸ್ಯೆಯನ್ನು ನಿವೇದಿಸಿಕೊಂಡರು. ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿಗಳು ಬೂತ್ ಮಟ್ಟದ ಅಧಿಕಾರಿಗಳೇ ಖುದ್ದಾಗಿ ಭೇಟಿ ನೀಡಿ ನೀವು ವಾಸಿಸುವ ಸ್ಥಳ ಖಚಿತ ಪಡಿಸಿಕೊಂಡು ಪ್ರಮಾಣ ಪತ್ರ ನೀಡಿ ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲು ನಿರ್ದೇಶನ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ತಹಶೀಲದಾರರಾದ ಶಶಿಧರ ಮಾಡ್ಯಾಳ, ಸಂಗಪ್ಪ ಬಾಡಗಿ, ಅಪರ ತಹಶೀಲದಾರ ಪ್ರಕಾಶ್ ನಾಸಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಧಿಕಾರಿ ಅಮರನಾಥ್, ಹಿರಿಯ ಸ್ವಾತಂತ್ರ ಹೋರಾಟಗಾರ ಕೃಷ್ಣಾಜಿ ಗೋಪಾಲರಾವ್ ಕುಲಕರ್ಣಿ ಭಾಗವಹಿಸಿದ್ದರು.
ನೂರಾರು ಜನ ವಿಕಲಚೇತನರು, ಲೈಂಗಿಕ ಅಲ್ಪಸಂಖ್ಯಾತರು, ಹಿರಿಯ ನಾಗರಿಕರು ಅಣುಕು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತಚಲಾಯಿಸಿದರು. ಮತದಾನ ಜಾಗೃತಿಗೆ ಜಿಲ್ಲಾಡಳಿತ ಕೈಗೊಂಡಿರುವ ಈ ಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

Comments