UK Suddi
The news is by your side.

29 ರಂದು ಸಾಧುನವರ ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಜೆಡಿಎಸ್ ಒಗ್ಗಟ್ಟು ಪ್ರದರ್ಶನ.

ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಅಭ್ಯರ್ಥಿಯಾಗಿ ಡಾ. ವಿ. ಎಸ್. ಸಾಧುನವರ ಮಾರ್ಚ್ 29 ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಈ ವಿಷಯ ಪ್ರಕಟಿಸಿದರು.

ನಂತರ ಬೆಳಗಾವಿ ಲೋಕಸಭಾ ವ್ಯಾಪ್ತಿಯ ಎಲ್ಲಾ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ -ಜೆಡಿಎಸ್ ಜಂಟಿ ಸಮಾವೇಶಗಳನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಯಕರ್ತರು ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದೂ ಸಚಿವರು ತಿಳಿಸಿದರು.

ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಸಾಧನೆ ಹಾಗೂ ಸದ್ಯದ ದೋಸ್ತಿ ಸರಕಾರ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಲಾಗುವುದು. ಮೋದಿ ಸರಕಾರದ ವೈಫಲ್ಯಗಳನ್ನೂ ಜನರ ಮುಂದಿಡಲಾಗುವುದು ಎಂದು ಅವರು ತಿಳಿಸಿದರು.

ಕಳೆದ ಮೂರು ಅವಧಿಯಲ್ಲಿ ಸಂಸದ ಸುರೇಶ ಅಂಗಡಿ ಯಾವುದೇ ರೀತಿಯ ಜನಪರ ಕಾರ್ಯಕ್ರಮಗಳನ್ನು ಮಾಡಿಲ್ಲ. ಮೂರೂ ಅವಧಿಯಲ್ಲಿ ಅವರು ಮೂರು ಅಲೆಗಳಲ್ಲಿ ಆರಿಸಿ ಬಂದದ್ದಷ್ಟೇ ಬಂತು. ಮೊದಲ ಬಾರಿ ವಾಜಪೇಯಿ ಅಲೆ, ಎರಡನೇ ಬಾರಿ ಯಡಿಯೂರಪ್ಪ ಅಲೆ, ಮೂರನೇ ಬಾರಿ ಮೋದಿ ಅಲೆಯಲ್ಲಿ ಆಯ್ಕೆಯಾಗಿ ಬಂದಿದ್ದ ಸುರೇಶ ಅಂಗಡಿಗೆ ಈಗ ಯಾವ ಅಲೆಯ ಬೆಂಬಲವೂ ಇಲ್ಲ ಎಂದರು.

ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರು ಜಂಟಿಯಾಗಿ ಒಗ್ಗಟಿನ ಹೋರಾಟ ಮಾಡಿದರೆ ಕೈ ಅಭ್ಯರ್ಥಿಯ ಗೆಲುವು ನಿಶ್ಚಿತ, ಈ ನಿಟ್ಟಿನಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಬೇಕು ಎಂದೂ ಸಲಹೆ ಮಾಡಿದರು.

ಬೆಳಗಾವಿಯ ಕಾಂಗ್ರೆಸ್ ಕಚೇರಿಯ ಬಾಗಿಲು ಜೆಡಿಎಸ್ ಕಾರ್ಯಕರ್ತರಿಗೆ ಸದಾ ಮುಕ್ತವಾಗಿದ್ದು, ಯಾವಾಗಲಾದರೂ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಅವಶ್ಯಕತೆ ಇದ್ದಾಗ ತಾವೂ ಕೂಡ ಪರಿಹಾರ ಒದಗಿಸಿಕೊಡಲು ಸಿದ್ಧ ಎಂದೂ ಸಚಿವರು ಭರವಸೆ ನೀಡಿದರು.

ಸಂಸದೀಯ ಕಾರ್ಯದರ್ಶಿ ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಫಿರೋಜ್ ಶೇಠ್, ರಾಜು ಶೇಠ್, ಶಂಕರ ಮಾಡಲಗಿ, ಫೈಜುಲ್ಲಾ ಮಹಡಿವಾಲೆ, ಕಿರಣ ಸಾಧುನವರ, ಬಸವರಾಜ ಶಿರಢಾಣ, ಸಲೀಂ ಕಾಶೀಂನವರ, ಡಿ.ಡಿ ಟೊಪೋಜಿ, ಜಯಶ್ರೀ ಮಾಳಗಿ, ಜೆಡಿಎಸ್ ಜಿಲ್ಲಾಧ್ಯಕ್ಷೆ ಮೇಘಾ ಕುಂದರಗಿ ಇನ್ನೂ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Comments