UK Suddi
The news is by your side.

ಇಲ್ಲಿದೆ ಪ್ರಧಾನಿ ಮೋದಿ ಇವತ್ತಿನ ಭಾಷಣದ ಸಂಪೂರ್ಣ ಸಾರಾಂಶ….

ಹೊಸದಿಲ್ಲಿ: ಮಹತ್ವದ ರಕ್ಷಣಾ ಸಾಧನೆಯೊಂದರಲ್ಲಿ ಭಾರತವು ಬಾಹ್ಯಾಕಾಶದಲ್ಲಿ ಸೆಟಲೈಟ್ ವೊಂದನ್ನು ಹೊಡೆದುರುಳಿಸುವ ಮೂಲಕ ವಿಶ್ವಾದ್ಯಂತ ಸುದ್ದಿ ಮಾಡಿದೆ.

ಭೂಮಿಯಿಂದ 300 ಕಿ.ಮೀ ಅಂತರದಲ್ಲಿ ಅಂದರೆ ” ಲೋ ಅರ್ಥ್ ಅರ್ಬಿಟ್ ” ನಲ್ಲಿದ್ದ ತನ್ನದೇ ಸೆಟಲೈಟ್ ನ್ನು ಹೊಡೆದುರುಳಿಸುವ ಮೂಲಕ ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಬುಧವಾರ ರಾಷ್ಟ್ರವನ್ನುದ್ದೇಶಿಸಿ ದಿಡೀರ್ ಭಾಷಣ ಮಾಡಿದ ಸಂದರ್ಭದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ತನ್ನ ದೇಶದ 130 ಕೋಟಿ ಜನತೆಯ ರಕ್ಷಣೆಗಾಗಿ ಈ ಪ್ರಯೋಗ ಮಾಡಿದೆಯೇ ಹೊರತು ಯಾವುದೇ ರಾಷ್ಟ್ರದ ವಿರುದ್ಧ ಕಾರ್ಯಾಚರಣೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಈ ಪ್ರಯೋಗವು ಯಾವುದೇ ರೀತಿಯಲ್ಲಿ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ, ಭಾರತವು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪ್ರಯೋಗದ ವಿರುದ್ಧದ ತನ್ನ ನಿಲುವನ್ನು ಮುಂದುವರಿಸಿಕೊಂಡು ಹೋಗುತ್ತದೆ ಎಂದೂ ಮೋದಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟಪಡಿಸಿದರು.

ಈ ಪ್ರಯೋಗದ ಮೂಲಕ ಭಾರತವು ಇಂತಹ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದೂ ಮೋದಿ ತಿಳಿಸಿದರು.ಈ ಮೊದಲು ಅಮೇರಿಕ, ರಷ್ಯಾ ಮತ್ತು ಚೀನಾ ದೇಶಗಳು ಇಂತಹ ತಂತ್ರಜ್ಞಾನ ಬಳಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದವು. ಇದೀಗ ಭಾರತ ನಾಲ್ಕನೇ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ.

” ಮಿಷನ್ ಶಕ್ತಿ ” ಹೆಸರಿನಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಕಳೆದ ಒಂಬತ್ತು ವರ್ಷಗಳಿಂದ ನಡೆಸಿದ ಸಂಶೋಧನೆ ಇಂದಿಗೆ ಫಲ ಕೊಟ್ಟಿದೆ ಎಂದೂ ಮೋದಿ ವಿವರಿಸಿದರು.

Comments