UK Suddi
The news is by your side.

ಗಜಲ್….

ಏಸೋ ದಿನವಾಯಿತು ಸಾಕಿ ಕಾಣೆಯಾಗಿದ್ದಾಳೆ ನನ್ನ ಕೈಯ್ಯೊಳಗಿನ ಮಧುಬಟ್ಟಲು ಕಸಿದುಕೊಂಡು||
ಇಂದಿಗೆ ನವರಾತ್ರಿ ತುಂಬಿದವು ಶುಭ ರಾತ್ರಿ ಹೇಳದೆ ಮಧಿರೆ ಮಧುಬಟ್ಟಲು ಮುನಿಸಿಕೊಂಡು||

ಮಧುಶಾಲೆ ಬಯಲಲ್ಲಿ ಬಯಲಾಗಿ ಗಾಳಿ ಬೆಳಕಿಗೆ ಸೆರಗೊಡ್ಡಿ ಬೇಡುತಿದೆ ಸಾಕಿ ಬೇಕೆಂದು||
ನೀ ಎಲ್ಲಿದ್ದರೂ ಬೇಗ ಬಾ ಸಾಕಿ ಎಲ್ಲರೂ ತಲೆಬಾಗಿ ನಿಂತಿರುವರು ತಪ್ಪೊಪ್ಪಿಕೊಂಡು||

ನೀನಿರದ ಮಧುಶಾಲೆ ಜೀವಂತ ಹೆಣಗಳ ಸ್ಮಶಾನವಾಗಿ ಗಹ ಗಹಿಸಿ ನಗುತಿದೆ ಅನಾಥವಾಗಿ||
ಜನ ಗಲ್ಲಿ ಗಲ್ಲಿಯಲ್ಲಿ ಅಲೆಯುತ್ತಿದ್ದಾರೆ ಕಳಚಿ ಹೋದ ನಿನ್ನ ಹೆಜ್ಜೆ ಗುರುತು ಹುಡುಕಿಕೊಂಡು||

ನೀನಿರದೆ ಮುತ್ತಿಕ್ಕಿದ ಮಧುಪಾನ ತುಟಿ ಅಂಚಲಿ ಕಸವಾಗಿ ಬೆಳೆದು ಅಣುಕಿಸುತಿದೆ||
ಸಂಜೆ ಹೊತ್ತು ಕಂದೀಲು ಕಣ್ಣೀರಲಿ ಕರಗಿ ಕತ್ತಲಾಗುತ್ತಿದೆ ಒಡಲ ನೋವು ಅದುಮಿಕೊಂಡು||

ಪ್ರತಿ ರಾತ್ರಿ “ಸಾಚಿ” ಕನಸಿಗೆ ರುಜು ಹಾಕಲು ನಿನ್ನ ಶುಚಿ ರುಚಿಯಾದ ಮಧಿರೆ ಬೇಕು ಸಾಕಿ||
ಸೂರ್ಯನು ಮಧಿರೆಗಾಗಿ ಬೊಗಸೆಯೊಡ್ಡಿ ಕಾದು ಕಾದು ಮನೆ ಸೇರಿದ ಗಂಟಲು ಒಣಗಿಸಿಕೊಂಡು||

-ಸ.ದ್ಯಾ.ಯರಗೊಪ್ಪ, ಗದಗ

Comments