UK Suddi
The news is by your side.

ಜಾರಕಿಹೊಳಿ ಸಾಮ್ರಾಜ್ಯಕ್ಕೆ ಲಗ್ಗೆಇಟ್ಟ ಅಂಬಿರಾವ್ ಪಾಟೀಲ್ ಯಾರು.

ಬೆಳಗಾವಿ: ಕೆಲವು ತಿಂಗಳ ಹಿಂದೆ ರಾಜ್ಯದ ದೋಸ್ತಿ ಸರಕಾರವನ್ನು ಅಲ್ಲೋಲ-ಕಲ್ಲೋಲ ಎಬ್ಬಿಸಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕಿನ ನಂತರ ಈಗ ಮತ್ತೊಂದು ಸ್ಪೋಟಕ ಅಂಶ ರಾಜ್ಯ ಸರಕಾರವನ್ನು ಅಲುಗಾಡಿಸಹೊರಟಿದೆ.

ಹೌದು, ಜಿಲ್ಲೆಯಲ್ಲಿ ಅಷ್ಟೇ ಏಕೆ ರಾಜ್ಯ ರಾಜಕಾರಣದಲ್ಲಿಯೇ ಅತ್ಯಂತ ಪ್ರಭಾವಶಾಲಿ ಎಂದು ಗುರುತಿಸಿಕೊಂಡಿರುವ ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯವೊಂದು ಸರಕಾರಕ್ಕೆ ಕಂಟಕವಾಗುವ ಎಲ್ಲ ಲಕ್ಷಣಗಳನ್ನೂ ಹೊರಹಾಕಿದೆ.

ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಎರಡು ದಿನಗಳಿಂದ ಬಹಿರಂಗವಾಗಿಯೇ ಪರಸ್ಪರ್ ವಾಗ್ದಾಳಿಯಲ್ಲಿ ತೊಡಗಿಕೊಂಡಿದ್ದು, ರಾಜಕೀಯ ಅಳಿವು-ಉಳಿವಿಗಾಗಿ ಪರಸ್ಪರ ಕಿತ್ತಾಡತೊಡಗಿದ್ದಾರೆ.

ಯಾರಿತ ಅಂಬಿರಾವ್ ಪಾಟೀಲ್:

ಈ ಭಿನ್ನಾಭಿಪ್ರಾಯಕ್ಕೆ ಮೂಲ ಕಾರಣ ರಮೇಶ ಜಾರಕಿಹೊಳಿ ಅವರ ಅಳಿಯ ( ಪತ್ನಿಯ ತಮ್ಮ ) ಅಂಬಿರಾವ್ ಪಾಟೀಲ್ ಎಂಬ ಸ್ಫೋಟಕ ಸುದ್ದಿಯನ್ನು ಸ್ವತಃ ಸಚಿವ ಸತೀಶ ಜಾರಕಿಹೊಳಿ ಅವರೇ ಬಹಿರಂಗೊಳಿಸಿದ್ದಾರೆ ಅಂಬಿರಾವ್ ಪಾಟೀಲ್ ಮೂಲತಃ ಮಹಾರಾಷ್ಟ್ರ ರಾಜ್ಯದ ಗಡಇಂಗ್ಲೇಜ್ ತಾಲೂಕಿನವರು.

ರಮೇಶ ಅವರು ಗೋಕಾಕ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ತಾಂತ್ರಿಕವಾಗಿ ಶಾಸಕರಾಗಿದ್ದರೂ, ಅಳಿಯ ಅಂಬಿರಾವ್ ಪಾಟೀಲರೇ ನಿಜವಾದ ಶಾಸಕರಂತೆ ವರ್ತಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಅವರೇ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ ಎಂಬುದು ಸತೀಶ ಜಾರಕಿಹೊಳಿ ಅವರ ನೇರ ಆರೋಪ.

ರಮೇಶ ಅವರು ಅಳಿಯ ಹೇಳಿದಂತೆಯೇ ಕೇಳುತ್ತ ಹೊರಟಿರುವುದು ಅವರ ಇನ್ನೊಬ್ಬ ಸಹೋದರ ಲಖನ್ ಜಾರಕಿಹೊಳಿ ಅವರಿಗೂ ಇರಿಸುಮುರಿಸು ಉಂಟುಮಾಡಿರುವುದೂ ಇಲ್ಲಿ ಗಮನಾರ್ಹ. ರಾಜಕೀಯವಾಗಿ ಸಾಕಷ್ಟು ಬೆಳೆಯುವ ಕನಸು ಕಾಣುತ್ತಿರುವ ಲಖನ್ ಗೆ ಅಂಬಿರಾವ್ ಪಾಟೀಲ್ ಅಡ್ಡಗಾಲಾಗುತ್ತಿರುವುದು ಸದ್ಯದ ಮಿಂಚಿನ ರಾಜಕೀಯ ಬೆಳವಣಿಗೆಗೆ ಕಾರಣ ಎನ್ನಲಾಗುತ್ತದೆ.

ಅದಕ್ಕೆಂದೇ ಲಖನ್ , ರಮೇಶ ವಿರುದ್ಧ ಸಿಡಿದೆದ್ದು, ಸತೀಶ ಜಾರಕಿಹೊಳಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದೆಲ್ಲದಕ್ಕೂ ಪೂರಕ ಎಂಬಂತೆ ಸಚಿವ ಸತೀಶ ಜಾರಕಿಹೊಳಿ ಅವರು ರಮೇಶ ಜಾರಕಿಹೊಳಿ ಮತ್ತವರ ಬೆಂಬಲಿಗರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ದೋಸ್ತಿ ಸರಕಾರಕ್ಕೆ ಕಂಟಕ ಬರುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿರುವುದು ಎಲ್ಲವೂ ನೆಟ್ಟಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.

Comments