UK Suddi
The news is by your side.

ತೋಂಟದಾರ್ಯ ಜಾತ್ರಾ ಮಹೋತ್ಸವ ಇತರ ಜಾತ್ರೆಗಳಿಗೆ ಮಾದರಿಯಾಗಿದೆ: ಪೂಜ್ಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು

ಗದಗ: ನಗರದ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಮಂಗಲೋತ್ಸವ ಕಾರ್ಯಕ್ರಮ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿನ ತ್ರಿವಿಧ ದಾಸೋಹಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ವೇದಿಕೆಯಲ್ಲಿ ಜರುಗಿತು.

ನಿಡಸೋಸಿ ಸಿದ್ಧಸಂಸ್ಥಾನಮಠದ ಪೂಜ್ಯ ಶ್ರೀ ಪಂಚಮ ಶಿವಲಿಂಗೇಶ್ವರ ಶ್ರೀಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡುತ್ತಾ ಬಸವಾದಿ ಶರಣರ ತತ್ವಗಳನ್ನು ನಿರಂತರ ಪ್ರಸಾರ ಮಾಡುತ್ತಾ,ಮೂಢನಂಬಿಕೆ-ಅರ್ಥಹೀನ ಆಚರಣೆಗಳನ್ನು ಬದಿಗೊತ್ತಿ ಜನರಲ್ಲಿ ವೈಚಾರಿಕ-ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿದ ಲಿಂಗೈಕ್ಯ ತೋಂಟದ ಮಹಾಸ್ವಾಮಿಗಳು ಶ್ರೀಮಠದ ಪೀಠಪರಂಪರೆಗೆ ಮೇರು ಕಳಶದಂತಿದ್ದರು. ಸಮ ಸಮಾಜದ ಪ್ರತಿಪಾದಕರಾಗಿದ್ದ ಲಿಂಗೈಕ್ಯ ಶ್ರೀಗಳು ಶ್ರೀಮಠದ ಮಹಾದ್ವಾರವನ್ನು ಎಲ್ಲ ವರ್ಗಗಳಿಗೆ ಮುಕ್ತವಾಗಿ ತೆರೆದಿಡುವ ಮೂಲಕ ಶ್ರೀಮಠವನ್ನು ಕೋಮು ಸೌಹಾರ್ದತೆಯ ಕೇಂದ್ರವನ್ನಾಗಿಸಿದರು. ಅಡ್ಡಪಲ್ಲಕ್ಕಿಯಲ್ಲಿ ತಾವೂ ಕೂರದೇ ಬಸವಾದಿ ಶರಣರ, ಸಿದ್ಧಲಿಂಗೇಶ್ವರರ ವಚನ ಕಟ್ಟುಗಳನ್ನು ಇಟ್ಟು ಮೆರೆಸುವುದರ ಮೂಲಕ ಕಂದಾಚಾರ-ಡಾಂಭಿಕತೆಗಳಿಗೆ ಪೂರ್ಣ ವಿರಾಮ ನೀಡಿದರು. ಸಮಾಜದ ಎಲ್ಲ ವರ್ಗದ ಜನರನ್ನು ಬೆಸೆಯುವ ಭಾವೈಕ್ಯತೆಯ ಕೊಂಡಿಯಾಗಿದ್ದ ಶ್ರೀಗಳು ಭೌತಿಕವಾಗಿ ಮಾತ್ರ ನಮ್ಮಿಂದ ದೂರವಾಗಿದ್ದು ಅವರ ತತ್ವಾದರ್ಶಗಳು ಡಾ.ಸಿದ್ಧರಾಮ ಶ್ರೀಗಳ ಮೂಲಕ ನಿರಂತರ ಪ್ರಕಟವಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಪ್ರಗತಪರ ರೈತರಾದ ಮಲ್ಲಣ್ಣ ನಾಗರಾಳ ಮಾತನಾಡಿ ಲಿಂಗೈಕ್ಯ ಶ್ರೀಗಳ ಕೃಪಾಶೀರ್ವಾದ ನನಗೆ ದೊರೆತ ಸೌಭಾಗ್ಯವಾಗಿದ್ದು, ಅವರು ಕೃಷಿಯ ಮೇಲೆ ಅಪಾರ ಅಭಿಮಾನ ಹೊಂದಿದ್ದರು. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಆಧುನಿಕ ದಿನಗಳಲ್ಲಿ ಕೃಷಿಯಲ್ಲಿ ಜನರು ಆಸಕ್ತಿ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವೈಜ್ಞಾನಿಕವಾಗಿ ಕೃಷಿ ಮಾಡಿ ಉತ್ತಮ ಲಾಭ ಕಂಡುಕೊಳ್ಳಲು ಸಾಧ್ಯವಿದೆ, ಮಳೆಕೊಯ್ಲು-ಕೃಷಿಹೊಂಡಗಳಂಥ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಿದ ನೂರಾರು ನಿದರ್ಶನಗಳ ನಮ್ಮ ಮುಂದಿವೆ ಆದ್ದರಿಂದ ಜನರು ಈ ಬಗ್ಗೆ ಜಾಗೃತಿ ಪಡೆದುಕೊಂಡು ಕೃಷಿಯನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಸಂಗೀತ ನಾಟಕ ಆಕಾಡಮಿ ಪ್ರಶಸ್ತಿ ಪುರಸ್ಕøತರಾದ ನಾಡೋಜ ಬೆಳಗಲ್ ವೀರಣ್ಣ ಇವರನ್ನು ಸಂಮಾನಿಸಲಾಯಿತು. ಸನ್ಮಾನೋತ್ತರವಾಗಿ ಅವರು ಮಾತನಾಡುತ್ತಾ ಲಿಂಗೈಕ್ಯ ಶ್ರೀಗಳು ನನ್ನ ಮೇಲೆ ಇಟ್ಟಿದ್ದ ಪ್ರೀತಿ-ಆಶೀರ್ವಾದವನ್ನು ಮರೆಯಲು ಸಾಧ್ಯವಿಲ್ಲ, ಪ್ರತಿಭೆಯುಳ್ಳವನು ಯಾವುದೇ ವರ್ಗದವನಾಗಿರಲಿ ಅವನನ್ನು ಗುರುತಿಸಿ ಪ್ರೋತ್ಸಾಹಿಸುವುದು ಅವರ ಶ್ರೇಷ್ಠತೆಯಾಗಿತ್ತು, ಲಿಂಗೈಕ್ಯ ಶ್ರೀಗಳು ಹಾಗೂ ದಿವಂಗತ ಎಂ.ಎಂ ಕಲಬುರ್ಗಿ ಗುರುಗಳು 200ಕ್ಕೂ ಹೆಚ್ಚು ತೊಗಲುಗೊಂಬೆ ಕಾರ್ಯಕ್ರಮಗಳನ್ನು ಆಯೋಜಿಸಿ ಈ ಕಲೆಗೆ ಮಹತ್ವದ ಪ್ರೋತ್ಸಾಹ ನೀಡಿದ್ದಾರೆ. ಮಠವನ್ನು ಪವಾಡಸದೃಶ ರೀತಿಯಲ್ಲಿ ಅಭಿವೃದ್ಧಿಗೊಳಿಸಿದ ಲಿಂಗೈಕ್ಯ ಶ್ರೀಗಳು ಎಷ್ಟೋ ಕುಟುಂಬಗಳ ಪಾಲಿಗೆ ಆಧಾರ ಸ್ತಂಭವಾಗಿದ್ದಾರೆ. ನನೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲು ಅವರ ಕೃಪಾಶೀರ್ವಾದ ಕಾರಣ ಎಂದು ಹೇಳಲು ಅತೀವ ಹೆಮ್ಮೆ ಎನಿಸುತ್ತದೆ ಎಂದರು.

ತುಬಚಿಯ ಪೂಜ್ಯ ಶ್ರೀ ಸಾವಳಗೀಶ್ವರ ದೇವರು ‘ಬಸವಣ್ಣ ಮತ್ತು ಮಾರ್ಟಿನ್ ಲೂಥರ್ ಚಿಂತನೆಗಳ ಒಂದು ತೌಲನಿಕ ಅಧ್ಯಯನ’ ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದ್ದಕ್ಕಾಗಿ ಅವರನ್ನು ಹಾಗೂ ಬೀಳೂರಿನ ಶ್ರೀ ಮಹೇಶ್ವರ ದೇವರು ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಆರು ಚಿನ್ನದ ಪದಕಗಳೊಂದಿಗೆ ಪಡೆದುಕೊಂಡಿದ್ದಕ್ಕಾಗಿ ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಶ್ರೀ ಬಿಳಿಗಿರಿ ರಂಗನಾಥ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಂಘದವರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಅಣ್ಣಿಗೇರಿ ದಾಸೋಹಮಠದ ಪೂಜ್ಯ ಶ್ರೀ ಶಿವಕುಮಾರ ಶ್ರೀಗಳು, ಹುಬ್ಬಳ್ಳಿ ರುದ್ರಾಕ್ಷಿಮಠದ ಪೂಜ್ಯ ಶ್ರೀ ಬಸವಲಿಂಗ ಶ್ರೀಗಳು ಮಾತನಾಡಿದರು. ಕೊನೆಯಲ್ಲಿ ಡಾ.ತೋಂಟದ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು.
ಜಾತ್ರಾ ಸಮಿತಿ ಅಧ್ಯಕ್ಷರಾದ ಡಾ. ಎಂ.ಬಿ ನಿಂಬಣ್ಣವರ ಸ್ವಾಗತಿಸಿದರು, ಪ್ರೊ.ಬಾಹುಬಲಿ ಜೈನರ್ ಹಾಗೂ ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.
ವರದಿ: ಪ್ರಭು ಗಂಜಿಹಾಳ
ಮೊ:9448775346

Comments