UK Suddi
The news is by your side.

ಹಿರೇಹಳ್ಳ ಪುನಶ್ಚೇತನ ಅಭಿಯಾನಕ್ಕೆ ಕಾಲೂರಿ ನಿಂತ ಗವಿಸಿದ್ದೇಶ್ವರ ಶ್ರೀ.

ಕೊಪ್ಪಳ:ಎರಡು ವಾರಗಳ ಹಿಂದೆ ಪ್ರಾರಂಭವಾದ ಹಿರೇಹಳ್ಳ ಪುನಶ್ಚೇತನ ಯೋಜನೆಯ ಕಾಮಗಾರಿಗೆ ಈಗ ಪ್ರಚಾರ ಕಡಿಮೆ. ಆದರೆ, ಕೆಲಸಕ್ಕೆ ಮಾತ್ರ ಭಾರೀ ರಭಸ.

ಇಂತಹ ಕೆಲಸಗಳಿಗೆ ಬೇಕಿರುವುದು ಕೆಲಸ ಮಾಡುವ ಮನಸ್ಸುಗಳೇ ಹೊರತು ಪ್ರಚಾರವಲ್ಲ. ಜನ ರಂಗಕ್ಕೆ ಇಳಿಯಬೇಕು. ಕೈ ಜೋಡಿಸಬೇಕು. ತಮ್ಮಿಂದಾದಷ್ಟು ಸ್ವಚ್ಛತೆ ಮಾಡುವ ಮೂಲಕ ಅಭಿಯಾನದ ಭಾಗವಾಗಬೇಕು.

ಮನುಷ್ಯನಿಗಿಂತ ಪರಿಣಾಮಕಾರಿಯಾಗಿ ಯಂತ್ರಗಳು ಕೆಲಸ ಮಾಡುತ್ತವೆ ನಿಜ. ಆದರೆ, ಅದರಲ್ಲಿ ಜೀವಕಳೆ ಇರುವುದಿಲ್ಲ. ಅದೊಂದು ಯಾಂತ್ರಿಕ ಕ್ರಿಯೆಯಾಗುತ್ತದೆ. ಮನಸ್ಸು ತಾಕದ ಕಾಯಕವಾಗುತ್ತದೆ.

ಆದರೆ, ಹಿರೇಹಳ್ಳ ಪುನಶ್ಚೇತನ ಅಭಿಯಾನದಲ್ಲಿ ಯಂತ್ರಗಳಷ್ಟೇ ಅಲ್ಲ, ಮನುಷ್ಯರೂ ಇದ್ದಾರೆ. ಯಂತ್ರಗಳಿಗಿಂತ ಹೆಚ್ಚಾಗಿ ಜನ ತೊಡಗಿಕೊಂಡಿದ್ದಾರೆ.

ಪ್ರೇರಕಶಕ್ತಿ ಇದ್ದಾಗ ಮಾತ್ರ ಜನ ಬರುವುದು. ಅಂತಹ ಪ್ರೇರಣೆ ನೀಡುತ್ತ ಪುನಶ್ಚೇತನ ಅಭಿಯಾನವನ್ನು ಸದ್ದಿಲ್ಲದೇ ರಭಸದಿಂದ ನಡೆಸುತ್ತಿದ್ದಾರೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು.

ಸಾಮಾನ್ಯವಾಗಿ, ಪ್ರಚಾರ ಕಡಿಮೆಯಾಗುತ್ತಿದ್ದಂತೆ ಕಳಚಿಕೊಳ್ಳುವವರ ಸಂಖ್ಯೆ ಹೆಚ್ಚು. ದೀರ್ಘಕಾಲೀನ ಅಭಿಯಾನ ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದು. ಅಣ್ಣಾ ಹಜಾರೆ ಅವರ ಸುದೀರ್ಘ ಉಪವಾಸದಂತೆ, ಮೊದಲೆರಡು ದಿನ ಲೈವ್, ಆಮೇಲೆ ಪುಟ್ಟ ಸುದ್ದಿ ಮಾತ್ರ ಎಂಬಂತೆ ಅಭಿಯಾನಗಳು ಸೊರಗುವುದು ಸಾಮಾನ್ಯ.

ಹಿರೇಹಳ್ಳ ಪುನಶ್ಚೇತನ ಅಭಿಯಾನವೂ ಹೀಗೇ ಆಗುತ್ತದೇನೋ ಎಂಬ ಆತಂಕ ಮಾಧ್ಯಮ ಕ್ಷೇತ್ರದಲ್ಲಿರುವ ನನ್ನಂಥವರನ್ನೂ ಸೇರಿಸಿ ಸಾಕಷ್ಟು ಉತ್ಸಾಹಿಗಳನ್ನು ಕಾಡಿದ್ದೂ ಹೌದು.

ಆದರೆ, ಗವಿಶ್ರೀಗಳೊಬ್ಬರು ಮಾತ್ರ ಅಚಲವಾಗಿ ನಿಲ್ಲುವ ಮೂಲಕ ಅಭಿಯಾನ ತನ್ನ ಪ್ರಾರಂಭದ ಉತ್ಸಾಹವನ್ನು ಉಳಿಸಿಕೊಳ್ಳುವಂತೆ ಮಾಡಿದರು. ಈ ಹನ್ನೆರಡು ದಿನಗಳಲ್ಲಿ, ಹಿರೇಹಳ್ಳದ ಬಲಗಡೆ ಬರುವ ಹಳ್ಳಿಗಳ ಪೈಕಿ ಮಾದಿನೂರು, ಯತ್ನಟ್ಟಿ, ಕೋಳೂರು ಹಾಗೂ ಎಡಭಾಗದಲ್ಲಿ ಬರುವ ಓಜನಹಳ್ಳಿ ಹಾಗೂ ಚಿಕ್ಕಸಿಂದೋಗಿಯಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಹಿರೇಹಳ್ಳವನ್ನು ಪುನಶ್ಚೇತನಗೊಳಿಸುವ ಉದ್ದೇಶ ವಿವರಿಸಿದರು. ಗ್ರಾಮಸ್ಥರು ಹೇಗೆ ಅದರಲ್ಲಿ ಪಾಲ್ಗೊಳ್ಳಬಹುದೆಂಬುದನ್ನು ತಿಳಿಸಿದರು.

ಯಾವುದೇ ಅಭಿಯಾನಕ್ಕೆ ಇಂತಹ ಪ್ರಯತ್ನಗಳೇ ನಿಜವಾದ ಪ್ರೇರಕ ಶಕ್ತಿಯಾಗುತ್ತವೆ. ಸದ್ಯ ಆಗುತ್ತಿರುವುದೇ ಅದೇ. ಯಾರೇ ಬರಲಿ, ಬಿಡಲಿ; ನಾವು ಕೈಗೆತ್ತಿಕೊಂಡ ಕೆಲಸವನ್ನು ನಾವಾದರೂ ಮುಂದುವರೆಸಬೇಕೆಂದು ಶ್ರೀಗಳು ಮುಂದಾಗಿರುವುದು ಅಭಿಯಾನವನ್ನು ಸಕ್ರಿಯವಾಗಿಸಿದೆ.

ಹಾಗೆ ನೋಡಿದರೆ, ಹಿರೇಹಳ್ಳ ಪುನಶ್ಚೇತನ ಯೋಜನೆ ಬಲು ದೊಡ್ಡದು. ದೀರ್ಘಾವಧಿಯದು. ಈಗ ನಡೆದಿರುವುದು ಪ್ರಾರಂಭದ ಕೆಲಸಗಳಷ್ಟೇ. ಹಳ್ಳದ ಇಕ್ಕೆಲವನ್ನು ಸ್ವಚ್ಛಗೊಳಿಸಿ, ದಡ ಎತ್ತರಿಸುವ, ನದಿ ಪಾತ್ರವನ್ನು ಆಳವಾಗಿಸುವ ಕೆಲಸ ನಡೆದಿದೆ. ನಾಳೆ ಮಳೆ ಬಂದಾಗ, ಇಲ್ಲೆಲ್ಲ ನೀರು ನಿಲ್ಲಲಿದೆ. ನಿಂತು ಇಲ್ಲಿಯೇ ಇಂಗಲಿದೆ. ಸದ್ಯ ಚೆಕ್ ಡ್ಯಾಮ್ ಗಳು ಇಲ್ಲದಿದ್ದರೂ, ಕೋಳೂರಿನ ಬಳಿ ಇರುವ ಬ್ಯಾರೇಜ್, ಹಿರೇಹಳ್ಳದ ನೀರನ್ನು ತಡೆ ಹಿಡಿಯುತ್ತದೆ. ಈಗ ಅಗೆದಿರುವ ಹಳ್ಳದ ಮುಂಭಾಗದಲ್ಲಿರುವ ಹೂಳೇ ತಡೆಗೋಡೆಯಂತೆ ನಿಂತು, ಹಿಂಭಾಗದ ತಗ್ಗಿನಲ್ಲಿ ಸಂಗ್ರಹವಾಗುವ ನೀರನ್ನು ಅಲ್ಲಿಯೇ ನಿಲ್ಲಿಸಲಿದೆ.

ಸದ್ಯ ಹಳ್ಳದ ಎರಡೂ ಕಡೆಯ ದಂಡೆಯನ್ನು ಸ್ವಚ್ಛಗೊಳಿಸುವ ಮಹತ್ವದ ಕೆಲಸ ನಡೆದಿದೆ. ಇಲ್ಲಿ ಗ್ರಾಮಸ್ಥರ ಸಹಕಾರ ಅಮೂಲ್ಯ. ಎಷ್ಟೋ ಕಡೆ ಹಳ್ಳದ ದಡದ ಗಡಿ ನಿಷ್ಕರ್ಷೆಯಾಗಿಲ್ಲ. ಹೀಗಾಗಿ ಒತ್ತುವರಿಯೂ ಆಗಿದೆ. ಹಳ್ಳದ ಪಾತ್ರದಲ್ಲಿ ಅಮೂಲ್ಯ ಜೇಡಿಮಣ್ಣು ಮತ್ತು ಗುಣಮಟ್ಟದ ಮರಳು ಇರುವುದರಿಂದ, ಅದನ್ನು ತೆರವುಗೊಳಿಸಿ ದಂಡೆಯಲ್ಲಿ ಪೇರಿಸಿದಾಗ, ಅದನ್ನು ಕೆಲವರಾದರೂ ಕದ್ದು ಸಾಗಿಸುವ ಅಪಾಯವೂ ಇದೆ. ಇಂತಹ ಕೃತ್ಯಗಳು ಅಭಿಯಾನದ ಓಟಕ್ಕೆ ತಡೆಯಾಗಬಾರದು.

ಲೋಕಸಭಾ ಚುನಾವಣೆಗಳು ಘೋಷಣೆಯಾಗಿರುವುದರಿಂದ ಮಾಧ್ಯಮದ ಗಮನ ಸಹಜವಾಗಿ ಅತ್ತ ಹರಿಯುತ್ತದೆ. ಹಿರೇಹಳ್ಳ ಪುನಶ್ಚೇತನ ಅಭಿಯಾನಕ್ಕೆ ಇದ್ಯಾವುದೂ ಅಡ್ಡಿಯಾಗದಂತೆ ಖುದ್ದು ಗವಿಶ್ರೀಗಳೇ ಕಾಲೂರಿ ನಿಂತಿದ್ದಾರೆ. ಪ್ರಚಾರವೋ ಪ್ರಯಾಸವೋ ಲೆಕ್ಕಿಸದೇ ಏಕನಿಷ್ಠೆಯಿಂದ ಪುನಶ್ಚೇತನ ಕೆಲಸವನ್ನು ಸತತವಾಗಿ ಮುಂದುವರಿಸಿದ್ದಾರೆ.

ನಾವೂ ಅವರ ಜೊತೆ ಕಾಲೂರಿ ನಿಲ್ಲಬೇಕಿದೆ. ಅವರ ಜೊತೆ ಕೈಗೂಡಿಸಿ ಕೆಲಸ ಮಾಡಬೇಕಿದೆ. ಧನ ಜೊತೆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ತನು ಮತ್ತು ಮನಗಳಂತೂ ನಮ್ಮ ಜೊತೆಗೇ ಇರುತ್ತವಲ್ಲ? ಅವನ್ನು ಬಳಸಿಕೊಂಡು ಗವಿಶ್ರೀಗಳ ಜೊತೆಗೆ ನಾವೂ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಿದೆ.

ಇನ್ನೇನು ಪಿಯುಸಿ ಪರೀಕ್ಷೆಗಳು ಮುಗಿಯಲಿವೆ. ಸಿಇಟಿ ಹಂಗಿರದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಿರೇಹಳ್ಳದ ಪುನಶ್ಚೇತನಕ್ಕೆ ಶ್ರಮದಾನ ಮಾಡುವಂತಾದರೆ ಜಲಪ್ರಜ್ಞೆಗೆ ಹೊಸ ಆಯಾಮ, ಹೊಸ ಶಕ್ತಿ ಸಿಗುತ್ತದೆ. ಪ್ರತಿ ಊರಿನಲ್ಲಿಯೂ ಇರುವ, ಆದರೆ ಸಕ್ರಿಯವಾಗಿರದ ಯುವಕ-ಯುವತಿ ಮಂಡಳಗಳು ಈ ನೆಪದಲ್ಲಾದರೂ ಸಕ್ರಿಯವಾಗಲಿ. ಹಳ್ಳಕ್ಕೆ ಇಳಿಯಲಿ. ಗವಿಶ್ರೀಗಳೊಂದಿಗೆ ಕೈ ಜೋಡಿಸಲಿ. ನಾವೆತ್ತುವ ಬೊಗಸೆ ಹೂಳು, ಕಿತ್ತುಹಾಕುವ ಹಿಡಿಯಷ್ಟು ಜಲಕಳೆಯೂ ಮುಂದೆ ಲೀಟರ್ ಗಟ್ಟಲೇ ನೀರನ್ನು ಹಳ್ಳದಲ್ಲಿಯೇ ಉಳಿಸಲಿದೆ. ಸಾವಿರಾರು ಕೈಗಳು ಜೊತೆಗೂಡಿದರೆ ಲಕ್ಷಾಂತರ ಲೀಟರ್ ನೀರು ಉಳಿಯುತ್ತದೆ.

ಅದು ಬರೀ ನೀರಲ್ಲ, ಜಲ ಸಂಜೀವಿನಿ. ಅದು ನಮ್ಮದೇ. ಅದು ನಮ್ಮ ಸ್ವತ್ತು. ನಮ್ಮ ಹಕ್ಕು ಕೂಡಾ. ನಾವೆಲ್ಲ ಸೇರಿ ಆ ಸ್ವತ್ತನ್ನು ಉಳಿಸಿಕೊಳ್ಳೋಣ. ಈ ಜಲಪ್ರಜ್ಞೆಯನ್ನು ವಿಸ್ತರಿಸೋಣ.

– ಚಾಮರಾಜ ಸವಡಿ
ಹಿರಿಯ ಪತ್ರಕರ್ತರು
(ಚಿತ್ರಗಳು: ಗವಿಮಠ ಹಾಗೂ ಸ್ವಯಂ ಸೇವಕರು)

Comments