UK Suddi
The news is by your side.

ಚಂದರಗಿ ಕುಟುಂಬದ ಬಳುವಳಿಯಾದ ಸಂಗೀತ ಕ್ಷೇತ್ರ

ರಾಮದುರ್ಗ(ಬೆಳಗಾವಿ):ರಾಮದುರ್ಗದ ನೇಕಾರ ಮನೆತನದ ಚಂದರಗಿ ಕುಟುಂಬದವರಿಗೂ ಸಂಗೀತಕ್ಕೂ ಏನೋ ಅವಿನಾಭಾವ ಸಂಬಂಧವಿದೆ. ಈ ಮನೆತನದ ನಾಲ್ಕನೇ ತಲೆಮಾರಿನ ವರೆಗೂ ಅದು ಬಳುವಳಿಯಾಗಿ ಬಂದಿದ್ದು ನಮ್ಮ ರಾಮದುರ್ಗದ ಹೆಮ್ಮೆ.

1906 ರಲ್ಲಿ ಆರ್ಯ ಸಂಗೀತ ನಾಟಕ ಮಂಡಳಿಯ ಸ್ಥಾಪನೆಯಿಂದ ಹಿಡಿದು ಇಲ್ಲಿಯವರೆಗೆ ರಾಮದುರ್ಗದ ಚಂದರಗಿ ಮನೆತದಲ್ಲಿ ಸಂಗೀತ ಮತ್ತು ನಾಟಕ ಹಾಸು ಹೊಕ್ಕಾಗಿವೆ ಅಂದರೆ ತಪ್ಪಾಗಲಾರದು. ಹಿರಿಯರಾದ ದಿ. ಈರಪ್ಪ ಚಂದರಗಿ ಅವರ ನಂತರ ಮಗ ದಿ. ರಾಮಕೃಷ್ಣ ಚಂದರಗಿ ಇವರು ನೇಕಾರಿಕೆ ವೃತ್ತಿ ಜತೆಗೆ ಧಾರವಾಡ ಆಕಾಶವಾಣಿ ಗಾಯಕರು ಹಾಗೂ ರಂಗಭೂಮಿಯಲ್ಲಿ ಅಭಿನಯಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು.

ಇವರ ನಂತರ ಈ ಕ್ಷೇತ್ರದಲ್ಲಿ ಹೆಸರು ಮಾಡಿದ ಅವರ ಪುತ್ರ ಸುರೇಶ ಚಂದರಗಿ ಸದ್ಯ ಸಂಕೇಶ್ವರ ಪಟ್ಟಣದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಜತೆಗೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ.

ಚಂದರಗಿ ಮನೆತನದ ನಾಲ್ಕನೇ ತಲೆಮಾರಿನ ಸುರೇಶ ಅವರ ಪುತ್ರಿ ಸುರಭಿ ಗಾಯನದಲ್ಲಿ ಮತ್ತು ಪುತ್ರ ಅಭಿಷೇಕ ತಬಲಾ ವಾದನದಲ್ಲಿ ಅಪ್ರತಿಮ ಪ್ರತಿಭೆ ಹೊಂದಿದ್ದಾರೆ.

1962 ರಲ್ಲಿ ಸ್ಥಾಪಿಸಿದ ಸರಸ್ವತಿ ಸಂಗೀತ ವಿದ್ಯಾಲಯವನ್ನು ಇಂದಿಗೂ ನಡೆಸಿಕೊಂಡು ಹೊರಟಿದ್ದಾರೆ. ವಿವಿಧ ಟಿವ್ಹಿ ವಾಹಿನಿಗಳ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರಲ್ಲದೆ ಬೇರೆ ಬೇರೆಕಡೆ ಸಂಗೀತ ಕಛೇರಿ ನಡೆಸಿ, ಅನೇಕ ಪುರಸ್ಕಾರಗಳನ್ನು ಪಡೆದು, ಜನ-ಮನ ಗಳಿಸಿದ್ದಾರೆ.

ಕಲಾ ತಪಸ್ವಿ ಶ್ರೀ ರಾಮಕೃಷ್ಣ ಚಂದರಗಿ ಸಂಗೀತ ಕಲಾ ಪ್ರತಿಷ್ಠಾನ ಮೂಲಕ ಸ್ಥಳೀಯ ಅನೇಕ ಪ್ರತಿಭೆಗಳನ್ನು ಹೊರತರುವ ಪ್ರಯತ್ನದಲ್ಲಿ ಶಿಕ್ಷಕ ಸುರೇಶ ಚಂದರಗಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಇಂದಿನ ಆಧುನಿಕ ಯುಗದಲ್ಲೂ ನಮ್ಮ ಸಂಸ್ಕೃತಿ ಪರಂಪರೆ ಬಿಂಬಿಸುವ ಗಾಯನ ಸಂಗೀತ ಕಾರ್ಯಕ್ರಮಗಳನ್ನು ನಡೆಸುವುದಲ್ಲದೆ. ಅವರ ಇಡೀ ಕುಟುಂಬ ಅದೇ ಹಾದಿಯಲ್ಲಿ ಸಾಗುತ್ತಿರುವುದು
ಚಂದರಗಿ ಕುಟುಂಬಕ್ಕೂ ಸಂಗೀತಕ್ಕೂ ಇರುವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಸರಸ್ವತಿ ಸಂಗೀತ ವಿದ್ಯಾಲಯವು ಸಾಕಷ್ಟು ಪ್ರತಿಭೆಗಳನ್ನು ಬೆಳಕಿಗೆ ತಂದಿದೆ ಎಂದರೆ ತಪ್ಪಾಗಲಾರದು. ಅಂತಹ ಚಂದರಗಿ ಮನೆತನದವರಿಗೆ ನಮ್ಮ ಸಲಾಂ.

-Ramachandra Yadawad

Comments